ಜಗತ್ತಿನ ಬಹುತೇಕ ರಾಷ್ಟ್ರಗಳು ಒಂದೇ ಸಮನೆ ಹೆಚ್ಚುತ್ತಿರುವ ಹಣದುಬ್ಬರದಿಂದ ಹೈರಾಣಾಗಿರುವಂತೆಯೇ ಭಾರತ ಹಣದುಬ್ಬರದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಫೆಬ್ರವರಿ ತಿಂಗಳ ದತ್ತಾಂಶಗಳ ಪ್ರಕಾರ ಚಿಲ್ಲರೆ ಹಣದುಬ್ಬರ ಶೇ.6.44ಕ್ಕೆ ಇಳಿಕೆಯಾಗಿದ್ದರೆ ಸಗಟು ಹಣದುಬ್ಬರ ದರ ಶೇ. 3.85ಕ್ಕೆ ಇಳಿಕೆ ಕಂಡಿದೆ. ತನ್ಮೂಲಕ ಹಣದುಬ್ಬರದ ನಾಗಾಲೋಟಕ್ಕೆ ಬ್ರೇಕ್ ಹಾಕಲು ನಿರಂತರವಾಗಿ ಶ್ರಮಿಸುತ್ತಲೇ ಬಂದಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಯತ್ನಗಳಿಗೆ ಭಾಗಶಃ ಯಶಸ್ಸು ಲಭಿಸಿದೆ.
ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ.6.52 ಆಗಿತ್ತು. ಫೆಬ್ರವರಿಯಲ್ಲಿ ಇದು ಶೇ.6.44ಕ್ಕೆ ಇಳಿಕೆಯಾಗಿದೆ. ಇನ್ನು ಆಹಾರ ಹಣದುಬ್ಬರ ಪ್ರಮಾಣ ಕೂಡ ಶೇ. 6ರಿಂದ ಶೇ. 5.95ಕ್ಕೆ ಇಳಿಕೆಯಾಗಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣದಲ್ಲಾಗಿರುವ ಇಳಿಕೆ ಆರ್‌ಬಿಐ ಮತ್ತು ಕೇಂದ್ರ ಸರಕಾರವನ್ನು ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ ಚಿಲ್ಲರೆ ಹಣದುಬ್ಬರ ದರವನ್ನು ಶೇ. 6ಕ್ಕಿಂತ ಕೆಳ ತರುವ ಉದ್ದೇಶವನ್ನು ಹೊಂದಿರುವ ಆರ್‌ಬಿಐ ಕಳೆದ ವರ್ಷದ ಮೇ ತಿಂಗಳಿನಿಂದೀಚೆಗೆ ನಿರಂತರವಾಗಿ ರೆಪೋ ದರವನ್ನು ಹೆಚ್ಚಿಸುತ್ತಲೇ ಬಂದಿತ್ತು. ಇದರಿಂದಾಗಿ ಬ್ಯಾಂಕ್‌ಗಳು ಬಡ್ಡಿದರದಲ್ಲಿ ಏರಿಕೆ ಮಾಡಿದ್ದರಿಂದಾಗಿ ಗೃಹ ಸಾಲ ಆದಿಯಾಗಿ ಎಲ್ಲ ಸಾಲಗಳ ಬಡ್ಡಿಯ ಪ್ರಮಾಣ ಹೆಚ್ಚಾಗಿ ಸಾಲಗಾರರ ಮೇಲೆ ಹೆಚ್ಚಿನ ಹೊರೆ ಬೀಳುವಂತಾಗಿದೆ. ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ದರದಲ್ಲಿ ಒಂದಿಷ್ಟು ಇಳಿಕೆ ಕಂಡುಬಂದ ಹೊರತಾಗಿಯೂ ಆರ್‌ಬಿಐ ತನ್ನ ಬಿಗು ನೀತಿಯನ್ನು ಮುಂದುವರಿಸಿ ಮತ್ತೆ ರೆಪೋ ದರವನ್ನು ಹೆಚ್ಚಿಸಿತ್ತು.
ಇದೀಗ ಫೆಬ್ರವರಿ ತಿಂಗಳಿನಲ್ಲೂ ನಿರೀಕ್ಷಿತ ಸಾಧನೆ ಸಾಧ್ಯವಾಗದಿರುವುದರಿಂದ ಹಾಗೂ ಹಣದುಬ್ಬರವನ್ನು ನಿರೀಕ್ಷಿತ ಪ್ರಮಾಣದಲ್ಲಿ ಕಾಯ್ದುಕೊಳ್ಳುವ ಉದ್ದೇಶದಿಂದ ಏಪ್ರಿಲ್‌ನಲ್ಲಿ ರೆಪೋ ದರವನ್ನು ಮತ್ತೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಆರ್ಥಿಕ ವಿಶ್ಲೇಷಕರು ಅಂದಾಜಿಸಿದ್ದಾರೆ. ಒಂದು ವೇಳೆ ಆರ್‌ಬಿಐ ಇದೇ ನಿರ್ಧಾರವನ್ನು ಕೈಗೊಂಡದ್ದೇ ಆದಲ್ಲಿ ಸಾಲಗಾರರು ಇನ್ನೊಂದು ಸುತ್ತಿನ ಹೊಡೆತ ತಿನ್ನುವುದು ಅನಿವಾರ್ಯವಾಗಲಿದೆ. ರೆಪೋ ದರ ಹೆಚ್ಚಳದ ಬದಲಾಗಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಅಥವಾ ಕೊಂಚ ಮಟ್ಟಿನ ಇಳಿಕೆ ಮಾಡುವ ನಿರ್ಧಾರ ಕೈಗೊಂಡಲ್ಲಿ ಸಾಲಗಾರರು ಕೂಡ ಒಂದಿಷ್ಟು ನಿರಾಳರಾಗಲು ಸಾಧ್ಯ ಹಾಗೂ ಗ್ರಾಹಕರು ಹೊಸ ಸಾಲ ಪಡೆದುಕೊಳ್ಳಲು ಆಸಕ್ತಿ ತೋರಿಯಾರು. ಇದರಿಂದ ಒಟ್ಟಾರೆ ವ್ಯವಹಾರದಲ್ಲಿ ಸಮತೋಲನ ಸಾಧಿಸಲು ಸಾಧ್ಯವಿದ್ದು ಇತ್ತ ಆರ್‌ಬಿಐ ಗಮನಹರಿಸಬೇಕಿದೆ.
ಸಗಟು ಹಣದುಬ್ಬರ ದರದ ಫೆಬ್ರವರಿ ತಿಂಗಳ ದತ್ತಾಂಶಗಳು ಕೂಡ ದೇಶದ ಆರ್ಥಿಕತೆಯ ದೃಷ್ಟಿಯಿಂದ ಉತ್ತೇಜನಕಾರಿಯಾಗಿದೆ. ಸತತ ಒಂಬತ್ತನೇ ತಿಂಗಳು ಸಗಟು ಹಣದುಬ್ಬರ ಕಡಿಮೆಯಾಗಿದ್ದು ಕಳೆದ 2 ವರ್ಷಗಳ ಅವಧಿಯಲ್ಲಿಯೇ ಅತೀ ಕಡಿಮೆ ಅಂದರೆ ಶೇ. 3.85ಕ್ಕೆ ಇಳಿಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಇನ್ನೂ ಅನಿಶ್ಚಿತತೆಯ ಪರಿಸ್ಥಿತಿ ಮುಂದುವರಿದಿರುವುದರಿಂದ ದೇಶದ ಹಣದುಬ್ಬರ ದರ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂಬ ನಿರ್ಧಾರಕ್ಕೆ ಬರುವುದು ಒಂದಿಷ್ಟು ಆತುರದ ನಡೆಯಾದೀತು. ಅಲ್ಲದೆ ವಿಶ್ವದ ದಿಗ್ಗಜ ರಾಷ್ಟ್ರಗಳು ಆರ್ಥಿಕ ಹಿಂಜರಿಕೆಯ ಭೀತಿಯಲ್ಲಿರುವುದರಿಂದಾಗಿ ಭಾರತದ ಒಟ್ಟಾರೆ ಆರ್ಥಿಕತೆಯ ಮೇಲೆ ಇದರ ಪರಿಣಾಮ ಬೀರದೇ ಇರಲಾರದು.
ಮತ್ತೊಂದೆಡೆಯಿಂದ ಪ್ರಸ್ತುತ ದೇಶದೆಲ್ಲೆಡೆ ತಾಪಮಾನ ಏರಿಕೆಯಾಗುತ್ತಿರುವುದರಿಂದ ಈ ಬಾರಿಯ ರಬಿ ಋತುವಿನ ಏಕದಳ ಮತ್ತು ದ್ವಿದಳ ಧಾನ್ಯದ ಇಳುವರಿಯ ಮೇಲೆ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳಿವೆ. ಮುಂದಿನ ಮುಂಗಾರು ಅವಧಿಯಲ್ಲಿ ಎಲ್-ನಿನೋ ಸನ್ನಿವೇಶ ಸೃಷ್ಟಿಯಾಗಲಿದ್ದು ಇದರ ಪರಿಣಾಮ ಮಳೆಯ ಕೊರತೆ ಎದುರಾಗುವ ಸಂಭವವಿದೆ. ಈ ಎಲ್ಲ ಬೆಳವಣಿಗೆಗಳು ದೇಶದ ಆಹಾರ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾದದ್ದೇ ಆದಲ್ಲಿ ಆಹಾರ ಪದಾರ್ಥಗಳ ಕೊರತೆ ಎದುರಾಗಿ ಹಣದುಬ್ಬರ ಪ್ರಮಾಣ ಮತ್ತೆ ಗಗನಮುಖೀಯಾಗುವ ಸಾಧ್ಯತೆ ಇದೆ. ಹಣದುಬ್ಬರದ ಮೇಲೆ ಹಿಡಿತ ಸಾಧಿಸಿದಲ್ಲಿ ಮಾತ್ರವೇ ದೇಶದ ಆರ್ಥಿಕತೆ ಚೇತೋಹಾರಿಯಾಗಿ ಮುನ್ನಡೆಯಲು ಸಾಧ್ಯ. ಹಾಗಾಗಿ ಆರ್‌ಬಿಐ ಮತ್ತು ಸರಕಾರ ಒಂದಿಷ್ಟು ದೂರದೃಷ್ಟಿಯಿಂದ ಕೂಡಿದ ಎಚ್ಚರಿಕೆಯ ಹೆಜ್ಜೆಯನ್ನಿಡುವುದು ಅತ್ಯವಶ್ಯ.