Advertisement

ಆರ್ಥಿಕ ಪ್ರಗತಿಗೆ ತಡೆಯಾಗಿರುವ ಹಣದುಬ್ಬರ

10:56 PM May 19, 2022 | Team Udayavani |

ಪ್ರಸಕ್ತ ಹಣಕಾಸು ವರ್ಷದಲ್ಲಿ ರೆಪೋ ದರದಲ್ಲಿ ಕನಿಷ್ಠ ಶೇ.1ರಿಂದ 1.5ರಷ್ಟು ಏರಿಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರಕಾರದ ಪ್ರಯತ್ನ ಸಾಲದು. ಪೆಟ್ರೋಲ್‌, ಡೀಸೆಲ್‌ ತೆರಿಗೆ ಇಳಿಸುವುದರಿಂದ ಶೇ. 50ರಷ್ಟು ಹಣದುಬ್ಬರವನ್ನು ತಗ್ಗಿಸಬಹುದು.

Advertisement

ರಷ್ಯಾ-ಉಕ್ರೇನ್‌ ನಡುವಣ ಯುದ್ಧ ಇಡೀ ವಿಶ್ವದ ಆರ್ಥಿಕತೆಯ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ನಮ್ಮ ದೇಶದ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ನಿರಂತರವಾಗಿ ಹಣದುಬ್ಬರ ಮುಂದುವರಿಯುತ್ತಿದೆ. ಇದು ದೇಶದ ಆರ್ಥಿಕತೆಗೆ ಅಪಾಯವೇ ಸರಿ. ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ, ಖಾದ್ಯ ತೈಲ, ವಿದ್ಯುತ್‌, ಬಟ್ಟೆ, ಸಿಮೆಂಟ್‌, ಉಕ್ಕು, ಆಹಾರ ಸಾಮಗ್ರಿಗಳಾದಿಯಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಹೆಚ್ಚುತ್ತಲೇ ಸಾಗಿದ್ದು ಒಟ್ಟಾರೆ ದೇಶದ ಆರ್ಥಿಕತೆಯು ಮಂದಗತಿಯಲ್ಲಿ ಸಾಗುತ್ತಿದೆ.

ರಷ್ಯಾ-ಉಕ್ರೇನ್‌ ಯುದ್ಧ ಮತ್ತು ಜಾಗತಿಕ ಪ್ರಭಾವ ಗಳಿಂದ ದೇಶದ ಹಣದುಬ್ಬರ ಕಳೆದ ಎಂಟು ತಿಂಗಳುಗಳಿಂದ ಏರುಗತಿಯಲ್ಲಿಯೇ ಇದೆ. ಇದೀಗ ಆರ್‌ಬಿಐನ ನಿರೀಕ್ಷೆಗೂ ಮೀರಿ ಕಳೆದ ನಾಲ್ಕು ತಿಂಗಳುಗಳಿಂದ ನಿಗದಿತ ಗುರಿ ಶೇ.6ನ್ನು ಮೀರಿದೆ. ಇದೀಗ ಎಪ್ರಿಲ್‌ನಲ್ಲಿ 95 ತಿಂಗಳುಗಳಲ್ಲಿಯೇ ಗರಿಷ್ಠ ಮಟ್ಟವಾದ ಶೇ.7.95ಕ್ಕೆ ತಲುಪಿದೆ. ಪರಿಸ್ಥಿತಿ ಹದಗೆಡುವ ಮುನ್ಸೂಚನೆಯಿಂದ ಮುಂದಿನ ಜೂನ್‌ನಲ್ಲಿ ಪರಿಷ್ಕರಿಸಬೇಕಾದ ಬಡ್ಡಿ ದರಗಳನ್ನು ಆರ್‌ಬಿಐ ಹಠಾತ್‌ ಆಗಿ ಹೆಚ್ಚಿಸಿದೆ. ಆರ್ಥಿಕತೆ ಸಂಪೂರ್ಣ ಹಳಿ ತಪ್ಪದಂತೆ ಮುಂಜಾಗ್ರತ ಕ್ರಮವಾಗಿ ಆರ್‌ಬಿಐ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಈ ತಿಂಗಳ ಆರಂಭದಲ್ಲಿಯೇ ರೆಪೋ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಿ ಶೇ. 4.4ಕ್ಕೆ ನಿಗದಿ ಪಡಿಸಿದೆ (ಇಲ್ಲಿ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಅಲ್ಪಾವಧಿ ಸಾಲದ ದರಕ್ಕೆ ರೆಪೋ ದರ ಎನ್ನಲಾಗುತ್ತದೆ.) ಮತ್ತು ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್‌) 50 ಮೂಲಾಂಶ ಹೆಚ್ಚಿಸಿ ಶೇ.4.5ಕ್ಕೆ ನಿಗದಿ ಪಡಿಸಿದೆ (ಸಿಆರ್‌ಆರ್‌ ಎಂದರೆ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಕಡ್ಡಾಯವಾಗಿ ಠೇವಣಿದಾರರ ಹಣದ ಶೇಕಡಾವಾರು ಮೀಸಲಿಡುವ ಮೊತ್ತ).

ಇದರಿಂದ 87,000 ಕೋ.ರೂ. ಸ್ಥಗಿತವಾಗಿ ಬ್ಯಾಂಕ್‌ಗಳ ಸಾಲದ ಮಿತಿ ಕಡಿಮೆಯಾಗುತ್ತದೆ. ತನ್ಮೂಲಕ ಹಣದುಬ್ಬರದ ನಿರೀಕ್ಷಿತ ಹೆಚ್ಚಳವನ್ನು ಪರಿಷ್ಕರಿಸುವುದೇ ಆರ್‌ಬಿಐನ ವಿತ್ತೀಯ ಕ್ರಮದ ಉದ್ದೇಶ.
ರೆಪೋ ದರ ಏರಿಕೆಯ ಮೂಲಕ ಹಣದುಬ್ಬರವನ್ನು ಕಡಿಮೆ ಮಾಡಬಹುದಾದರೂ ಏಕಾಏಕಿ ಕಡಿಮೆ ಯಾಗದು. ಪ್ರಸಕ್ತ ಹಣಕಾಸು ವರ್ಷದಲ್ಲಿ ರೆಪೋ ದರದಲ್ಲಿ ಕನಿಷ್ಠ ಶೇ.1ರಿಂದ 1.5ರಷ್ಟು ಏರಿಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರಕಾರದ ಪ್ರಯತ್ನ ಸಾಲದು. ಪೆಟ್ರೋಲ್‌, ಡೀಸೆಲ್‌ ತೆರಿಗೆ ಇಳಿಸುವುದರಿಂದ ಶೇ.50ರಷ್ಟು ಹಣದುಬ್ಬರವನ್ನು ತಗ್ಗಿಸಬಹುದು. ಜಿಎಸ್‌ಟಿ ಸಂಗ್ರಹ ಹೆಚ್ಚಾಗಲು ಹಣದುಬ್ಬರವೂ ಒಂದು ಕಾರಣ ಎಂಬುದನ್ನು ಇಲ್ಲಿ ಅಲ್ಲಗಳೆಯಲಾಗದು. ಸಗಟು ಹಣದುಬ್ಬರವೂ ಕೂಡ ಕಳೆದ ಒಂದು ವರ್ಷದಿಂದ ಶೇ.10ನ್ನು ಮೀರಿದೆ ಮತ್ತು ಎಪ್ರಿಲ್‌ನಲ್ಲಿ ಶೇ.15.08ರಷ್ಟು ದಾಖಲಾಗಿದೆ. ರಷ್ಯಾ-ಉಕ್ರೇನ್‌ ಯುದ್ಧ ಕೊನೆಗೊಳ್ಳದೆ, ಕಚ್ಚಾ ತೈಲದ ಬೆಲೆ ಕಡಿಮೆಯಾಗದೆ ರೆಪೋ ದರ ಏರಿಕೆಯಿಂದ ಬೆಲೆ ಹೆಚ್ಚಳವನ್ನು ನಿಯಂತ್ರಿಸಲಾಗದು. ಈಗಾಗಲೇ ಹಣದುಬ್ಬರ ಮಿತಿ ಮೀರಿರುವುದರಿಂದ ಆರ್‌ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಜೂನ್‌ ತಿಂಗಳಿನ ಸಭೆಯಲ್ಲಿ ಬಡ್ಡಿದರಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಏರಿಸದೇ ಬೇರೆ ಪರ್ಯಾಯ ಮಾರ್ಗೋಪಾಯಗಳಿಲ್ಲ.

ಜಾಗತಿಕ ಸನ್ನಿವೇಶವನ್ನು ಪರಿಗಣಿಸಿದಾಗ ಭಾರತವು ತನ್ನ ವಿವೇಕಯುತ ನಿರ್ಧಾರಗಳಿಂದ ತನ್ನ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುತ್ತಾ ಬಂದಿದೆ. ವಿಶ್ವಸಂಸ್ಥೆಯೂ ಕೂಡ ಈ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ. ಆದರೆ ಬೆಲೆ ಏರಿಕೆಯ ಪರಿಣಾಮ ಹೆಚ್ಚುತ್ತಿರುವ ಹಣದುಬ್ಬರ, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಕಚ್ಚಾತೈಲ ಬೆಲೆ ಏರಿಕೆ ಮತ್ತು ಜಾಗತಿಕವಾಗಿ ಆವಶ್ಯಕ ಸಾಮಗ್ರಿಗಳ ಕೊರತೆ ದೇಶದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂಬುದರಲ್ಲಿ ಎರಡು ಮಾತಿಲ್ಲ.

Advertisement

ರೂಪಾಯಿ ಮೌಲ್ಯ ಕುಸಿತ
ವಿದೇಶಿ ಬಂಡವಾಳವು ದೇಶದಿಂದ ಹೊರ ಹೋಗುತ್ತಿರುವುದು ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗಿದೆ. ರೂಪಾಯಿ ಮೌಲ್ಯವು ಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠ ರೂ. 77.72ಕ್ಕೆ ಕುಸಿದಿದೆ. ಭಾರತವು ಶೇ. 85ರಷ್ಟು ಕಚ್ಚಾತೈಲ ಮತ್ತು ಖಾದ್ಯ ತೈಲಗಳಿಗೆ ಬಹುವಾಗಿ ಆಮದನ್ನು ಅವಲಂಬಿಸಿದೆ. ಡಾಲರ್‌ ಎದುರು ರೂಪಾಯಿ ದರ ಕುಸಿದಲ್ಲಿ ಹೆಚ್ಚು ಹಣ ನೀಡುವ ಅನಿವಾರ್ಯತೆ ಉಂಟಾಗುತ್ತದೆ. ಮತ್ತು ವಿದೇಶಿ ಬಂಡವಾಳ ಹಿಂದೆಗೆತದಿಂದ ದೇಶವು ಆಮದಿಗೆ ಹೆಚ್ಚಿನ ಹಣ ವೆಚ್ಚ ಮಾಡುವ ಅನಿವಾರ್ಯತೆಯಿಂದ ದೇಶದ ವಿದೇಶೀ ವಿನಿಮಯವು ಇಳಿಕೆಯಾಗಿದೆ. ಡಾಲರ್‌ ಎದುರು ಈ ವರ್ಷ ರೂಪಾಯಿ ಮೌಲ್ಯ ಶೇ.4ರಷ್ಟು ಕುಸಿದಿದೆ. ಅಮೆರಿಕದಲ್ಲಿ ಹಣದುಬ್ಬರ ಜಾಸ್ತಿಯಾಗಿರುವ ಕಾರಣ ಅಲ್ಲಿ ಬಡ್ಡಿದರ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ಅರ್ಥ ವ್ಯವಸ್ಥೆ ಮಂದಗತಿಯಲ್ಲಿರಬಹುದೆಂಬ ಅಂದಾಜಿನಿಂದ ರೂಪಾಯಿ ಮೌಲ್ಯ ಕುಸಿದಿದೆ. ಪರಿಸ್ಥಿತಿಯ ಪ್ರಭಾವ ಮತ್ತು ಮಾರುಕಟ್ಟೆಗಳ ಅನಿಶ್ಚಿತತೆಯಿಂದ ನಿಗದಿತ ಗುರಿಗೆ ಹೊಂದಾಣಿಕೆಯಾಗುತ್ತಿಲ್ಲ.

ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿ ಉಳಿದುಕೊಂಡರೆ ಉಳಿತಾಯಕ್ಕೆ, ಹೂಡಿಕೆಗಳಿಗೆ, ಸ್ಪರ್ಧಾತ್ಮಕತೆಗೆ ಧಕ್ಕೆಯುಂಟಾಗುತ್ತದೆ. ಹಣದುಬ್ಬರವು ಜನರ ಕೊಳ್ಳುವ ಶಕ್ತಿಯನ್ನು ಕುಗ್ಗಿಸಿ ಬಡವರ್ಗದ ಜನರ ಮೇಲೆ ದುಷ್ಪರಿಣಾಮ ಬೀರುತ್ತದೆ. ರೆಪೋ ದರ ಏರಿಕೆಯಿಂದ ಸಾಲಗಳು ದುಬಾರಿಯಾಗಲಿವೆ. ಈ ಹೆಚ್ಚಳದ ಕಾರಣ ಸಹಜವಾಗಿ ಎಲ್ಲ ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿದರ ಹೆಚ್ಚಾಗುತ್ತದೆ. ಆದುದರಿಂದ ಗೃಹ, ವಾಹನ, ವೈಯಕ್ತಿಕ ಸಾಲಗಳ ಬಡ್ಡಿದರಗಳು ಏರಿಕೆಯಾಗಲಿವೆ. ರೆಪೋ ದರ ಏರಿಕೆಯಿಂದ ಸಾವಿರಾರು ಕಂಪೆನಿಗಳು, ಕಾರ್ಪೋರೆಟ್‌ ಹೌಸ್‌ಗಳಿಗೆ ಅನುಕೂಲವಾಗಿದೆ. ಈಗ ತೊಂದರೆಯಾದರೂ ಅವುಗಳಿಗೆ ಸಹಿಸುವ ಶಕ್ತಿ ಇದೆ. ರೆಪೋ ದರ ಏರಿಕೆಯಿಂದ ಸಾಲಗಳು ದುಬಾರಿಯಾಗಿ ರಿಯಲ್‌ ಎಸ್ಟೇಟ್‌, ಆಟೋ ಕ್ಷೇತ್ರ, ಎಂಎಸ್‌ಎಂಇ, ಮೂಲ ಸೌಕರ್ಯ ಮತ್ತು ಕೈಗಾರಿಕ ವಲಯಕ್ಕೆ ತೊಂದರೆಯಾಗಿದೆ.

ಇದೇ ವೇಳೆ ಬ್ಯಾಂಕ್‌ಗಳ ಠೇವಣಿಗಳ ಬಡ್ಡಿದರಗಳೂ ಕೂಡ ಹೆಚ್ಚಾಗಲಿದೆ. ದೇಶದ ಕೋಟ್ಯಂತರ ಅಸಂಘಟಿತ ವಲಯದ ಜನರು ಉಳಿತಾಯದ ಬಡ್ಡಿಯನ್ನೇ ಅವಲಂಬಿಸಿದ್ದಾರೆ. ದೇಶದಲ್ಲಿ 12 ಕೋಟಿ ಹಿರಿಯ ನಾಗರಿಕರಿದ್ದು ಬಹುತೇಕರು ಎಫ್ಡಿ ಮೇಲಿನ ಬಡ್ಡಿಯನ್ನೇ ಅವಲಂಬಿಸಿದ್ದಾರೆ. ಇದೀಗ ಸಣ್ಣ ಉಳಿತಾಯಕ್ಕೆ ಬಡ್ಡಿದರ ಏರಿಕೆಯಾಗಲಿದೆ. ಈ ಕ್ರಮವು ಜನರಲ್ಲಿ ಹೆಚ್ಚು ಹಣವನ್ನು ಉಳಿಸುವಂತೆ ಪ್ರೇರೇಪಿಸುತ್ತದೆ. ಖರ್ಚು ಮಾಡಲು ಕಡಿಮೆ ಹಣ ಲಭ್ಯವಿರುವುದರಿಂದ ಹಣದುಬ್ಬರ ಅಥವಾ ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಣಕ್ಕೆ ತರಬಹುದಾಗಿದೆ. ಆದರೆ ಇದರಿಂದ ಆರ್ಥಿಕ ಬೆಳವಣಿಗೆಗೆ ತಡೆಯಾಗದೇ ಇರಲಾರದು. ಪ್ರಸಕ್ತ ಹಣಕಾಸು ವರ್ಷದಲ್ಲಿ ರೆಪೋ ದರ ಹೆಚ್ಚಳವಾಗಿ ಸಾಲಗಾರರಿಗೆ ಹೊರೆಯಾದರೂ ಹಣದುಬ್ಬರ ನಿಯಂತ್ರಣ ಸಾಧ್ಯ. ಆದರೆ ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಪ್ರಗತಿ ಇವೆರಡನ್ನೂ ಜತೆಯಲ್ಲಿ ಕೊಂಡೊಯ್ಯುವುದು ಕಷ್ಟದ ಮಾತು.

– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next