Advertisement
ತಾಲೂಕು ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗುವ ಜ್ವರ ಪೀಡಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವುದನ್ನು ಆರೋಗ್ಯ ಇಲಾಖೆ ದೃಢೀಕರಿಸಿದೆ. ಹಲವರು ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದು, ಸುಳ್ಯ ಮತ್ತು ಹೊರ ತಾಲೂಕಿನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ರೋಗ ಬಾಧೆ ಹೆಚ್ಚು ಕಾಣಿಸಿಕೊಂಡಿದೆ.
ಕಳೆದ ಸೋಮವಾರ ತಾಲೂಕು ಆಸ್ಪತ್ರೆಯಲ್ಲಿ ಒಳರೋಗಿಗಳು ದಾಖಲಾಗುವ ಬೆಡ್ ಭರ್ತಿಗೊಂಡು, ಹೆಚ್ಚಿ ನವರು ಹೊರಭಾಗದಲ್ಲೇ ಚಿಕಿತ್ಸೆ ಪಡೆದು ತೆರಳುವ ಸ್ಥಿತಿ ಉಂಟಾಗಿತ್ತು. ಇಂತಹ ಸ್ಥಿತಿ ಗುತ್ತಿಗಾರು, ಪಂಜದಲ್ಲಿಯೂ ಉಂಟಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ದಿನಂಪ್ರತಿ 190ಕ್ಕೂ ಅಧಿಕ ಜ್ವರ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಂತೋಡು, ಬೆಳ್ಳಾರೆ, ಪಂಜ ಪರಿಸರದಲ್ಲಿಯೂ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಡೆಂಗ್ಯೂ, ಟೈಫಾಯಿಡ್, ಸಾಂಕ್ರಾಮಿಕ ಜ್ವರಗಳ ಪ್ರಕರಣ ಕಂಡು ಬಂದಿವೆ. ಡೆಂಗ್ಯೂ ಜ್ವರ
ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವವರ ಪೈಕಿ ಶೇ. 70ಕ್ಕೂ ಅಧಿಕ ರೋಗಿಗಳು ಜ್ವರ ಬಾಧಿತರು. ಶಂಕಿತ ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗಿರುವವರ ಸಂಖ್ಯೆ ಯನ್ನು ಆರೋಗ್ಯ ಇಲಾಖೆ ಸಂಗ್ರಹಿಸುತ್ತಿದ್ದು, ನಿಖರ ಅಂಕಿ ಅಂಶ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಜ್ವರ ಪ್ರಕರಣವನ್ನು ಆರಂಭಿಕ ಹಂತದಲ್ಲೇ ನಿಯಂತ್ರಿಸಲು ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತ ಸೊಳ್ಳೆ ಕಾಟ ಇರುವ ಪ್ರದೇಶದಲ್ಲಿ ಫಾಗಿಂಗ್ ಹಮ್ಮಿಕೊಂಡಿದೆ. ಮುಂಜಾಗ್ರತೆ ವಹಿಸಿಕೊಳ್ಳುವ ಬಗ್ಗೆ ಜನರಿಗೆ ಮಾಹಿತಿ ನೀಡಲು ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಮನೆ ಮನೆ ಭೇಟಿ ನೀಡುತ್ತಿದ್ದಾರೆ. ಪ್ರತಿ ಮಳೆಗಾಲದಂತೆ ಈ ಬಾರಿಯೂ ಕೆಲವೆಡೆ ಶಂಕಿತ ಡೆಂಗ್ಯೂ, ಸಾಂಕ್ರಾಮಿಕ ಜ್ವರ ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆ ನೀಡಲು ಬೇಕಾದ ಔಷಧ, ವ್ಯವಸ್ಥೆ ಇದೆ ಎಂದು ಆರೋಗ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ತಿಳಿಸಿದ್ದಾರೆ.
Advertisement