Advertisement

ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗ ಉಲ್ಬಣ

03:44 PM Jul 28, 2022 | Team Udayavani |

ಹಾವೇರಿ: ಜಿಲ್ಲಾದ್ಯಂತ ಕಳೆದ ವಾರ ಸುರಿದ ನಿರಂತರ ಮಳೆಯಿಂದಾಗಿ ತಂಪು ವಾತಾವರಣದ ಜೊತೆಗೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗಿ, ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿರುವುದರಿಂದ ಜನರು ಆತಂಕಕ್ಕೀಡಾಗಿದ್ದಾರೆ.

Advertisement

ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ದಿನೇ ದಿನೆ ಶಂಕಿತ ಡೆಂಘೀ, ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ 2021ರಲ್ಲಿ 131 ಶಂಕಿತ ಡೆಂಘೀ ಪ್ರಕರಣಗಳಿದ್ದವು. ಇದರಲ್ಲಿ 34 ಪ್ರಕರಣಗಳು ಖಚಿತಗೊಂಡಿದ್ದವು. ಚಿಕೂನ್‌ ಗುನ್ಯಾ 61 ಶಂಕಿತವಿದ್ದರೆ, 10 ಪ್ರಕರಣಗಳು ಖಚಿತವಾಗಿದ್ದವು. 2022ರ ಜೂನ್‌ ಅಂತ್ಯದವರೆಗೆ 445 ಶಂಕಿತ ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿವೆ. ಇದರಲ್ಲಿ 50 ಪ್ರಕರಣಗಳು ಖಚಿತಗೊಂಡಿವೆ.ಚಿಕೂನ್‌ಗುನ್ಯಾ 353 ಶಂಕಿತವಿದ್ದರೆ, 9 ಪ್ರಕರಣಗಳು ಖಚಿತಗೊಂಡಿವೆ. 1 ಮಲೇರಿಯಾ ಪ್ರಕರಣ ಪತ್ತೆಯಾಗಿದೆ. ಮಳೆಗಾಲ ಆರಂಭವಾದ ಜೂನ್‌ ಒಂದೇ ತಿಂಗಳಲ್ಲಿಯೇ 164 ಜನರಲ್ಲಿ ಡೆಂಘೀ, 158 ಜನರಲ್ಲಿ ಚಿಕೂನ್‌ಗುನ್ಯಾ ಶಂಕಿತ ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ, ಜೂನ್‌ ತಿಂಗಳಲ್ಲಿಯೇ 25 ಡೆಂಘೀ, 3 ಚಿಕೂನ್‌ಗುನ್ಯಾ ಪ್ರಕರಣಗಳು ಖಚಿತಗೊಂಡಿವೆ.

ಈಗಾಗಲೇ ಗ್ರಾಮೀಣ ಭಾಗದಲ್ಲಿ ಸೀಜನ್‌ ಜ್ವರದ ಕಾಟ ಶುರುವಾಗಿದ್ದು, ಮೈ-ಕೈ ನೋವಿನ ಬಾಧೆಯಿಂದ ಬಳಲುತ್ತಿರುವ ಹಳ್ಳಿಗರನ್ನು ಸಾಂಕ್ರಾಮಿಕ ರೋಗಗಳು ಪೀಡಿಸುತ್ತಿವೆ. ಜುಲೈ ಮೊದಲ 15ದಿನಗಳಲ್ಲೇ ಡೆಂಘೀ, ಚಿಕೂನ್‌ ಗುನ್ಯಾ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ, ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಮಕ್ಕಳಲ್ಲೂ ಜ್ವರ, ವಾಂತಿ-ಬೇಧಿ ಕಂಡು ಬರುತ್ತಿದೆ.

ಐವರಲ್ಲಿ ಮಲೇರಿಯಾ: 2021ರ ಡಿಸೆಂಬರ್‌ ಅಂತ್ಯಕ್ಕೆ ನಾಲ್ವರು, ಬ್ಯಾಡಗಿ, ಶಿಗ್ಗಾವಿ, ಸವಣೂರ, ಹಾನಗಲ್ಲ ತಾಲೂಕಿನಲ್ಲಿ ತಲಾ ಒಬ್ಬರಿಗೆ ಹಾಗೂ 2022ರಲ್ಲಿ ಹಿರೇಕೆರೂರ ತಾಲೂಕಿನಲ್ಲಿ ಒಬ್ಬರಿಗೆ ಮಲೇರಿಯಾ ಕಾಣಿಸಿಕೊಂಡಿದೆ.

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕಾರ್ಯಕರ್ತರು ಮನೆ ಮನೆಗೆ ಲಾರ್ವಾ ಸಮೀಕ್ಷೆ ಕೈಗೊಳ್ಳುತ್ತಿದ್ದಾರೆ. ರೋಗ ವಾಹಕ ಸೊಳ್ಳೆಗಳು ಕಂಡುಬಂದರೆ ಲಿಕ್ವಿಡ್‌ ಹಾಕಿ ನಾಶಪಡಿಸಲಾಗುತ್ತಿದೆ. ಒಂದೊಮ್ಮೆ ರೋಗ ಪತ್ತೆಯಾದರೆ ಆ ಏರಿಯಾದಲ್ಲಿ ಫಾಗಿಂಗ್‌ ಮಾಡಿಸಲಾಗುತ್ತಿದೆ. ನೀರನ್ನು ಹೆಚ್ಚಿನ ಅವ ಧಿಗೆ ಸಂಗ್ರಹಿಸದಂತೆ, ಪ್ರತಿ ದಿನ ಹೊಸ ನೀರು ತುಂಬಲು ಸೂಚನೆ ನೀಡಲಾಗುತ್ತಿದೆ. -ಡಾ| ಪ್ರಭಾಕರ ಕುಂದೂರ, ಜಿಲ್ಲಾ ರೋಗವಾಹಕ, ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಹಾವೇರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next