ಶಿಡ್ಲಘಟ್ಟ: ನಗರ ಸೇರಿದಂತೆ ತಾಲೂಕಿನಾದ್ಯಂತ ಕೋವಿಡ್ 19 ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ನಾಗರಿಕರಲ್ಲಿ ಆತಂಕ ಮನೆ ಮಾಡಿದೆ. ಇದೀಗ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐಗೆ ಸೋಂಕು ದೃಢಪಟ್ಟಿದೆ. ಗ್ರಾಮಾಂತರ ಪೊಲೀಸ್ ಠಾಣೆ ಜೊತೆಗೆ ನಗರ ಠಾಣೆಯ ಪ್ರಭಾರ ಪಿಎಸ್‌ಐ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ 29 ಪೈಕಿ 27 ಮಂದಿ ಹಾಗೂ ದ್ವಿತೀಯ ಹಂತದಲ್ಲಿ ಸಂಪರ್ಕ ಸಾಧಿಸಿರುವ 86 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಪಿಎಸ್‌ಐ ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವ ಎಲ್ಲರನ್ನು ಹನುಮಂತಪುರ ಗ್ರಾಮದಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ.ವೆಂಕಟೇಶ್‌ಮೂರ್ತಿ ತಿಳಿಸಿದ್ದಾರೆ.
ಆರೋಗ್ಯ ವಿಚಾರಣೆ: ವಿಷಯ ತಿಳಿದ ಕೂಡಲೇ ಎಸ್ಪಿ ಮಿಥುನ್ ಕುಮಾರ್ ಹಾಗೂ ಚಿಂತಾಮಣಿ ಡಿವೈಎಸ್ಪಿ ಶ್ರೀನಿವಾಸ್ ಅವರು ಹನುಮಂತಪುರದಲ್ಲಿ ಕ್ವಾರಂಟೈನ್‌ನಲ್ಲಿರುವ ಪೊಲೀಸ್ ಪೇದೆಗಳ ಆರೋಗ್ಯ ವಿಚಾರಿಸಿದ್ದಾರೆ. ಪಿಎಸ್‌ಐ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಎಸ್ಪಿ ಸೂಚನೆ ಮೇರೆಗೆ ಚಿಂತಾಮಣಿ ನಗರದ ಸಿಪಿಐ ಆನಂದ್ ಶಿಡ್ಲಘಟ್ಟ ನಗರಕ್ಕೆ ಭೇಟಿ ನೀಡಿ ಗ್ರಾಮಾಂತರ ಪಿಎಸ್‌ಐ ಅವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಹಂತದಲ್ಲಿ ಸಂಪರ್ಕ ಸಾಧಿಸಿದವರ ಮಾಹಿತಿ ಪಡೆದುಕೊಂಡು ಗಂಟಲು ದ್ರವ ಪರೀಕ್ಷೆಗೆ ಕ್ರಮ ಕೈಗೊಂಡಿದ್ದಾರೆ.
ಸಂಪರ್ಕಿತರ ಪತ್ತೆ ಹಚ್ಚಲು ಕ್ರಮ: ನಗರದ ಹೊರ ವಲಯದಲ್ಲಿ ಪೊಲೀಸ್ ಇಲಾಖೆಗೆ ಮಂಜೂರು ಆಗಿರುವ ಜಾಗದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಡೀಸಿ ಆರ್. ಲತಾ, ಎಸ್ಪಿ ಮಿಥುನ್ ಕುಮಾರ್ ಮತ್ತಿತರರು ಭಾಗಿಯಾಗಿದ್ದು, ಅದರಲ್ಲಿ ಪಿಎಸ್‌ಐ ಸಹ ಭಾಗವಹಿಸಿದ್ದಾರೆ. ಈ ವೇಳೆ ಅವರು ಯಾರ ಬಳಿ ಸಂಪರ್ಕ ಸಾಧಿಸಿದರು ಎಂಬುದು ಪತ್ತೆ ಹಚ್ಚಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ. ಒಟ್ಟಾರೆ ಪಿಎಸ್‌ಐಗೆ ಸೋಂಕು ದೃಢಪಟ್ಟ ಬಳಿಕ ಕನಕ ನಗರದಲ್ಲಿರುವ ಅವರ ಬಾಡಿಗೆ ಮನೆಗೆ ಹಾಗೂ ನಗರ ಮತ್ತು ಗ್ರಾಮಾಂತರ ಠಾಣೆಗೆ ನಗರಸಭೆ ಪೌರಾಯುಕ್ತ ತ್ಯಾಗರಾಜ್ ಮತ್ತು ಆರೋಗ್ಯ ನಿರೀಕ್ಷಕಿ ಶೋಭಾ ಮತ್ತು ಸಿಬ್ಬಂದಿ ಕ್ರಿಮಿನಾಶಕ ಔಷಧಿ ಸಿಂಪಡಿಸಿ ಶುಚಿಗೊಳಿಸಲು ಕ್ರಮ ಕೈಗೊಂಡರು.
ಸಚಿವೆ-ಡೀಸಿಗೆ ಆತಂಕ?: ಶುಕ್ರವಾರ ತಾಲೂಕಿನ ಹನುಮಂತಪುರ ಗ್ರಾಮದ ಸಮೀಪದ ಎಂಎಸ್‌ಪಿಸಿ ಘಟಕಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಡೀಸಿ ಆರ್.ಲತಾ, ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ಕೆಲ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಾಂತರ ಠಾಣೆಯ ಪಿಎಸ್‌ಐ ಅವರು ಸಚಿವರು ಮತ್ತು ಅಧಿಕಾರಿಗಳಿಗೆ ಭದ್ರತಾ ವ್ಯವಸ್ಥೆ ಕೈಗೊಂಡು ಜೊತೆಯಲ್ಲಿದ್ದರಿಂದ ಸಚಿವೆ-ಡೀಸಿಗೆ ಆತಂಕ ಕಾಡುವಂತಾಗಿದೆ.