ಬೆಂಗಳೂರು: ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಬಿಬಿಎಂಪಿ ಕಾರ್ಯವೈಖರಿ ಹಾಗೂ ಮೇಯರ್ ಸಾರ್ವಜನಿಕ ಭೇಟಿ, ಮೇಯರ್ ವೈದ್ಯಕೀಯ ನಿಧಿಗೆ ತಾತ್ಕಾಲಿಕ ತಡೆ ನೀಡಿರುವುದು ಸೇರಿದಂತೆ ಕೆಲವು ಮಾರ್ಪಾಡು ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಪಾಲಿಕೆ ಸದಸ್ಯ ಇಮ್ರಾನ್‌ಪಾಷಾ ಅವರಿಗೆ ಸೋಂಕು ದೃಢಪಟ್ಟ ಬೆನ್ನಲ್ಲೇ ಇಬ್ಬರು ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಪಾಲಿಕೆಯ ಹಲವು ಕಚೇರಿಗಳಿಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಣೆ ಮಾಡಲಾಗಿದೆ.ಆಡಳಿತ ವಲಯದಲ್ಲಿ ಕೋವಿಡ್ 19 ಆತಂಕ ಎದುರಾದ ಮೇಲೆ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೋವಿಡ್ 19 ಸಂಬಂಧಿಸಿದಂತೆ ಲಕ್ಷಣಗಳಿದ್ದರೆ ಅಥವಾ ಅನುಮಾನವಿದ್ದರೆ ಕೂಡಲೇ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತಅನುºಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ಸದ್ಯ ಪಾಲಿ ಕೆಯ ಕೇಂದ್ರ ಕಚೇರಿಯಲ್ಲಿ ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬಿಬಿಎಂಪಿಯ ಕೇಂದ್ರ ಕಚೇರಿಯ ವಿವಿಧ ವಿಭಾಗಗಳನ್ನು ಸಂಪರ್ಕಿ ಸುವ ಹೆಚ್ಚುವರಿ ಗೇಟ್‌ಗಳನ್ನು ಮುಚ್ಚಲಾಗಿದ್ದು, ಒಂದೇ ಗೇಟ್‌ನ ಮೂಲಕ ಎಲ್ಲರು ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಮುಖ್ಯ ಕಟ್ಟಡ ಗಳನ್ನು ಪ್ರವೇಶಿಸುವವರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅಗತ್ಯ ಮೀಟಿಂಗ್‌ಗಳನ್ನು ಮಾತ್ರ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮೇಯರ್ ಭೇಟೆಗೆ ಅವಕಾಶವಿಲ್ಲ: ಲಾಕ್‌ಡೌನ್ ತೆರವಾದ ಮೇಲೆ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಮೇಯರ್ ಅವರನ್ನು ಭೇಟಿ ಮಾಡಲು ಜನರು ಬರುತ್ತಿದ್ದರು. ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ನಿತ್ಯ ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದರು. ಪ್ರಸ್ತುತದ ಪರಿಸ್ಥಿತಿಯಲ್ಲಿ ಈ ವ್ಯವಸ್ಥೆಯನ್ನು ನಿಲ್ಲಿಸಿದ್ದು, ಮೇಯರ್ ಕಚೇರಿಯ ಬಾಗಿಲಿನಲ್ಲಿ “ಕೋವಿಡ್ – 19 ಹಿನ್ನೆಲೆಯಲ್ಲಿ ಮೇಯರ್ ಸಾರ್ವಜನಿಕ ಭೇಟಿಯನ್ನು ತಾತ್ಕಾಲಿಕ ವಾಗಿ ನಿಲ್ಲಿಸಲಾಗಿದೆ’ ಎಂದು ಬೋರ್ಡ್ ಹಾಕಲಾಗಿದೆ.
ಮೇಯರ್ ವೈದ್ಯಕೀಯ ನಿಧಿಗೆ ಸಾರ್ವಜನಿಕರಿಂದ ಅರ್ಜಿಗಳನ್ನು ಜೂನ್ ಅಂತ್ಯದವರೆಗೆ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಲಾಗಿದ್ದು, ಇದಕ್ಕೂ ಕೋವಿಡ್ 19 ಆತಂಕ ಕಾರಣವನ್ನೇ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೇಯರ್ ವೈದ್ಯಕೀಯ ನಿಧಿಯಡಿ ಆರ್ಥಿಕವಾಗಿ ನೆರವು ನೀಡಲಾಗುತ್ತದೆ. ಸಾರ್ವಜನಿಕರು ವಿವಿಧ ಪ್ರದೇಶಗಳಿಂದ ಬಂದು ಅರ್ಜಿ ನೀಡುತ್ತಾರೆ. ನಿಖರ ಮಾಹಿತಿ ಇರುವುದಿಲ್ಲ ಹೀಗಾಗಿ, ಅರ್ಜಿ ಸ್ವೀಕರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.