ಜಿನೇವಾ: ಏಕಕಾಲಕ್ಕೆ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ಉತ್ತುಂಗಕ್ಕೇರುವ ಹಂತಕ್ಕೆ ಬಂದಿರುವುದೇ ವಿಶ್ವಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ) ಮಂಗಳವಾರ ಹೇಳಿದೆ. ಜತೆಗೆ, ವೈರಸ್‌ನ ಜಾಗತಿಕ ಚಟುವಟಿಕೆಯಲ್ಲಿ ಬದಲಾವಣೆಯಾಗಿರುವುದನ್ನು ಕೂಡ ಇದು ಪ್ರತಿಬಿಂಬಿಸಿದೆ ಎಂದೂ ಅಂದಾಜಿಸಿದೆ.
ಭಾರತ, ಅಮೆರಿಕ ಸೇರಿದಂತೆ ಕೆಲವು ದೇಶಗಳು, ತಮ್ಮಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಾದ ಕಾರಣ ಸೋಂಕಿತರ ಸಂಖ್ಯೆ ಬೆಳಕಿಗೆ ಬರುತ್ತಿರುವುದೂ ಹೆಚ್ಚಾಗಿದೆ ಎಂದು ಹೇಳಿಕೊಂಡಿವೆ. ಆದರೆ, ನಾವು ಇದನ್ನು ಒಪ್ಪುವುದಿಲ್ಲ. ಕೊರೊನಾ ಸೋಂಕಿನ ವ್ಯಾಪಿಸುವಿಕೆಯ ವೇಗ ವರ್ಧಿಸಿದೆ. ಹಲವು ದೇಶಗಳಲ್ಲಿ ಅದು ಉತ್ತುಂಗದ ಹಂತ ತಲುಪಿದೆ. ಹೀಗಾಗಿಯೇ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ ಎಂದು ಡಬ್ಲೂéಎಚ್‌ಒ ತುರ್ತು ವಿಭಾಗದ ಮುಖ್ಯಸ್ಥ ಡಾ| ಮೈಕೆಲ್ ರ್ಯಾನ್ ಹೇಳಿದ್ದಾರೆ.
ಮರಣ ಪ್ರಮಾಣ ಕನಿಷ್ಠ: ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಭಾರತದಲ್ಲಿ ಒಂದು ಸಾವು ಸಂಭವಿಸುತ್ತಿದ್ದು, ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದ ಮರಣ ಪ್ರಮಾಣ ಕನಿಷ್ಠವಾಗಿದೆ ಎಂದು ಆರೋಗ್ಯ ಸಚಿವಾಲಯ ನುಡಿದಿದೆ. ಜಾಗತಿಕವಾಗಿ ಪ್ರತಿ ಲಕ್ಷ ಜನಸಂಖ್ಯೆಗೆ ಸರಾಸರಿ 6.04 ಮಂದಿ ಸಾವಿಗೀಡಾಗುತ್ತಿದ್ದಾರೆ. ಭಾರತದಲ್ಲಿ ಈವರೆಗೆ ಸುಮಾರು 14 ಸಾವಿರದಷ್ಟು ಮಂದಿ ಸಾವಿಗೀಡಾಗಿದ್ದು, ಸಮಯಕ್ಕೆ ಸರಿಯಾಗಿ ಪ್ರಕರಣ ಪತ್ತೆ, ಸಂಪರ್ಕಿತರ ಪತ್ತೆ ಹಾಗೂ ಪರಿಣಾಮಕಾರಿ ನಿರ್ವಹಣೆಯಿಂದಾಗಿ ಮರಣ ಪ್ರಮಾಣ ಕಡಿಮೆಯಾಗಿದೆ ಎಂದೂ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಯು.ಕೆ.ಯಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 63.13 ಮಂದಿ ಮೃತಪಟ್ಟರೆ, ಸ್ಪೇನ್‌ನಲ್ಲಿ 60.60, ಇಟಲಿಯಲ್ಲಿ 57.19, ಅಮೆರಿಕದಲ್ಲಿ 36.30, ಜರ್ಮನಿಯಲ್ಲಿ 27.32, ಬ್ರೆಜಿಲ್‌ನಲ್ಲಿ 23.68 ಮತ್ತು ರಷ್ಯಾದಲ್ಲಿ 5.62 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.
ಒಂದೇ ದಿನ 14,933 ಪ್ರಕರಣ
ಸೋಮವಾರ ಬೆಳಗ್ಗೆ 8ರಿಂದ ಮಂಗಳವಾರ ಬೆಳಗ್ಗೆ 8ರವರೆಗೆ ದೇಶಾದ್ಯಂತ 14,933 ಮಂದಿಗೆ ಸೋಂಕು ದೃಢಪಟ್ಟಿದ್ದು, 312 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 4.40 ಲಕ್ಷ ದಾಟಿದೆ. ಈ ಪೈಕಿ ಶೇ.70ರಷ್ಟು ಸೋಂಕಿತರು ಮಹಾರಾಷ್ಟ್ರ, ದಿಲ್ಲಿ, ತಮಿಳುನಾಡು, ಗುಜರಾತ್ ಮತ್ತು ಉತ್ತರಪ್ರದೇಶದಲ್ಲೇ ಪತ್ತೆಯಾಗಿದ್ದಾರೆ. ಇದೇ ವೇಳೆ, 24 ಗಂಟೆಗಳ ಅವಧಿಯಲ್ಲಿ 10,994 ಮಂದಿ ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಶೇ.56.38ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸಾವಿನ ಸಂಖ್ಯೆ 14 ಸಾವಿರದ ಗಡಿ ದಾಟಿದೆ.