ಉಡುಪಿ: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಕೊರೊನಾ ನಿಯಂತ್ರಣಕ್ಕೆ ಗ್ರಾ.ಪಂ.ಗಳ ಜವಾಬ್ದಾರಿ ಹೆಚ್ಚಿದೆ. ಗ್ರಾ.ಪಂ.ಗಳು ತಳ ಮಟ್ಟದ ಆಡಳಿತ ವ್ಯವಸ್ಥೆಯಾಗಿರು ವುದರಿಂದ ಸರಕಾರ ಇಲ್ಲಿಂದಲೇ ನಿಯಂತ್ರಣ ಸಾಧಿಸಲು ಸರಕಾರ ಚಿಂತನೆ ನಡೆಸಿದೆ.
ಹಿಂದಿನ ವರ್ಷ ರಚಿಸಲಾದ ಗ್ರಾ.ಪಂ. ಮಟ್ಟದ ಕಾರ್ಯಪಡೆ ಮತ್ತು ಗ್ರಾಮ ಮಟ್ಟದ ಕಾರ್ಯಪಡೆಯನ್ನು ಮತ್ತೆ ಚುರುಕುಗೊಳಿಸಲಾಗಿದೆ. ಗ್ರಾಮಾಂತರ ಪ್ರದೇಶಕ್ಕೆ ನಗರಗಳಿಂದ ಹಿಂದಿರುಗುವ ವಲಸೆ, ಮಹಿಳಾ ಕಾರ್ಮಿಕರು ಮತ್ತು ದುರ್ಬಲ ವರ್ಗ ದವರಿಗೆ ಊಟ, ಮಾಸ್ಕ್ ಮತ್ತು ಸ್ಯಾನಿಟೈಸರ್ ಒದಗಿಸುವುದಲ್ಲದೆ ಅಂಗವಿಕಲರು, ಮಹಿಳೆಯರಿಗೆ ಅವಶ್ಯ ಸೌಲಭ್ಯ ಒದಗಿಸಬೇಕೆಂದು ಸೂಚಿಸ ಲಾಗಿದೆ. ಈಗ ಬೆಂಗಳೂರು, ಮುಂಬಯಿ ಮೊದಲಾದ ನಗರಗಳಿಂದ ಊರಿಗೆ ವಲಸೆ ಬಂದವರ ಆರೋಗ್ಯ ವಿಚಾರಣೆ ಮತ್ತು ಅವರಿಗೆ ಅಗತ್ಯದ ಜೀವನ ನಿರ್ವಹಣೆ ಮುಖ್ಯವಾಗಿರುವುದರಿಂದ ಸರಕಾರ ಈ ತೆರನಾಗಿ ಚಿಂತನೆ ನಡೆಸಿದೆ.
ಅರ್ಹ ವ್ಯಕ್ತಿಗಳಿಗೆ ಲಸಿಕೆ ಸ್ವೀಕರಿಸಲು ಉತ್ತೇಜನ ನೀಡುವ ಹೊಣೆಯೂ ಇದೆ. ಸ್ವಯಂಸೇವಕರನ್ನು ಗುರುತಿಸಿ ಅವರ ಸೇವೆಯನ್ನು ಬಳಸಿಕೊಳ್ಳಲಾಗುವುದು. ಮಾಸ್ಕ್, ಸಾಬೂನು, ಸ್ಯಾನಿಟೈಸರ್ ಇತ್ಯಾದಿ ಪರಿಕರಗಳು, ಊಟ ಇತ್ಯಾದಿಗಳಿಗೆ 14ನೇ/15ನೇ ಹಣಕಾಸು ಆಯೋಗದ ಉಳಿದ ಅನುದಾನ ಬಳಸುವಂತೆ ಅಥವಾ ಸ್ವಂತ ಸಂಪನ್ಮೂಲ ಉಪಯೋಗಿಸಬಹುದು.
ಗರಿಷ್ಠ ಮಿತಿಯಲ್ಲಿ ನರೇಗಾ ಯೋಜನೆ ಯಡಿ ಕಾರ್ಮಿಕರಿಗೆ ಉದ್ಯೋಗ ದೊರಕಿಸಿಕೊಡಲು ಸೂಚಿಸಲಾಗಿದೆ. ಊರಿನ ಕೆರೆ, ಮದಗ ಇತ್ಯಾದಿಗಳ ಹೂಳೆತ್ತುವಿಕೆ ಜತೆ ವೈಯಕ್ತಿಕ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕೆಲಸಗಳಿಗೂ ಯೋಜನೆಯನ್ನು ಬಳಸಿಕೊಳ್ಳ ಬಹುದಾಗಿದೆ. ಬಡವರಿಗೆ ಊಟಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ನರೇಗಾಕ್ಕೆ ಒತ್ತು ನೀಡಲಾಗುತ್ತಿದೆ.
ಪಾಸಿಟಿವ್ ಬಂದವರು ಹೋಮ್ ಕ್ವಾರಂಟೈನ್‌ನಲ್ಲಿದ್ದರೆ ಅವರನ್ನು ನಿಗಾ ವಹಿಸುವುದು, ಅವರು ನಿಯಮಾವಳಿ ಉಲ್ಲಂಘನೆ ಮಾಡುತ್ತಾರೋ ಎಂಬುದನ್ನು ನೋಡುವುದು ಕಾರ್ಯಪಡೆಯ ಜವಾಬ್ದಾರಿ. ಇದನ್ನು ವಾಚ್‌ಆ್ಯಪ್ ಮೂಲಕ ತಾಂತ್ರಿಕವಾಗಿ ಮೇಲ್ವಿಚಾರಣೆ ನಡೆಸಲು ನಿರ್ದೇಶನ ಬಂದಿದೆ.