ಬಂಟ್ವಾಳ: ತಾಲೂಕಿನ ಸಜೀಪಮೂಡ ಗ್ರಾಮದ ಬೊಳ್ಳಾಯಿ ಸಮೀಪದ ನಗ್ರಿ ಶಾಂತಿನಗರದಲ್ಲಿ ಭಾನುವಾರ ಇನ್ನೋವಾ ಕಾರಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಪತ್ತೆಯಾಗಿದೆ. ಈತನನ್ನು ಕೇರಳ ಮೂಲದ ಕುಖ್ಯಾತ ಕ್ರಿಮಿನಲ್, ಮೂಲತಃ ಕಾಸರಗೋಡು ಜಿಲ್ಲೆ ಚೆಮ್ನಾಡ್ ಚೆಂಬರಿಕದ ಕಲಾಡ್ ನಿವಾಸಿ ತಸ್ಲಿಂ ಯಾನೆ ಮುತಾಸಿಮ್(39) ಎಂದು ಗುರುತಿಸಲಾಗಿದೆ.
ನಗ್ರಿ ಶಾಂತಿನಗರದಲ್ಲಿ ಮೃತದೇಹವಿರುವ ಕಾರೊಂದು ನಿಂತಿದೆ ಎಂಬ ಸುದ್ದಿ ಭಾನುವಾರ ಮಧ್ಯಾಹ್ನ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಪರಿಶೀಲಿಸಿದಾಗ ಅದರಲ್ಲಿ ಶವ ಪತ್ತೆಯಾಗಿ, ಅಪರಿಚಿತ ಶವವೆಂದು ಭಾವಿಸಲಾಗಿದ್ದು, ಬಳಿಕ ಗುರುತು ಪತ್ತೆಯಾಗಿತ್ತು.
2 ದಿನದ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ: ತಸ್ಲಿಂ ಎರಡು ದಿನದ ಹಿಂದೆ ಕಲಬುರಗಿ ಜೈಲಿನಿಂದ ಬಿಡುಗಡೆಗೊಂಡಿದ್ದು, ಅಲ್ಲಿಂದಲೇ ಆತನನ್ನು ಗ್ಯಾಂಗೊಂದು ಅಪಹರಣ ಮಾಡಿ, ಕೊಲೆ ನಡೆಸಿ ಮೃತದೇಹವನ್ನು ಕಾರಿನಲ್ಲಿ ಬಿಟ್ಟು ಪರಾರಿ ಯಾಗಿದೆ ಎನ್ನಲಾಗಿದೆ.
ಕೆಎ 53 ನೋಂದಣಿ ಹೊಂದಿರುವ ಕಾರಿನ ಹಿಂಬದಿಯ ಸೀಟಿನಲ್ಲಿ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿತ್ತು. ವ್ಯಕ್ತಿಯ ಕುತ್ತಿಗೆಗೆ ಹಗ್ಗ ಬಿಗಿದು ಬಳಿಕ ಚೂರಿಯಿಂದ ಇರಿದು ಕೊಲೆ ನಡೆಸಿದಂತಿದೆ. ಬೇರೆ ಎಲ್ಲೋ ಕೊಲೆಗೈದು ಇಲ್ಲಿ ತಂದು ಬಿಟ್ಟಿರಬೇಕು ಎಂದೂ ಹೇಳಲಾಗುತ್ತಿದೆ.
ಜ್ಯುವೆಲರಿ ಕಳವಿನ ಪ್ರಮುಖ ಆರೋಪಿ: ಕೊಲೆಯಾದ ತಸ್ಲಿಂ 2019ರ ಸೆಪ್ಟಂಬರ್‌ನಲ್ಲಿ ಮಂಗಳೂರು ಭವಂತಿ ಸ್ಟ್ರೀಟ್‌ನ ಜ್ಯುವೆಲರಿಯಲ್ಲಿ ನಡೆದ ಕಳವು ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಈತ ಇಬ್ಬರು ಆಫ್ಘಾನ್ ಮೂಲದ ಕುಖ್ಯಾತ ರೌಡಿಗಳ ಜತೆ ಸೇರಿ ಈ ಕಳವು ಪ್ರಕರಣ ನಡೆಸಿ, ಮಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ.