ಇಂಡಿ: ಪ್ರತಿಯೊಬ್ಬರಲ್ಲಿ ತನ್ನ ದೇಶ, ನಾಡು ತನ್ನ ಹುಟ್ಟೂರಿನ ಬಗ್ಗೆ ಗೌರವ ಇರಲೇಬೇಕು. ಪಡನೂರ ನನ್ನ ಹುಟ್ಟೂರಾಗಿದ್ದು ಗ್ರಾಮಕ್ಕೆ 4 ಕೋಟಿ ಅನುದಾನ ತಂದಿದ್ದೇನೆ. ಭೀಮಾ ತೀರ ಎಂಬ ಕೆಟ್ಟ ಹೆಸರು ಇರುವುದರಿಂದ ಈ ಭಾಗ ಸುಧಾರಣೆಯಾಗಬೇಕಾಗಿದೆ. ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಡನೂರ ಗ್ರಾಮದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಎಸ್‌ಡಿಪಿ- ಟಿಎಸ್‌ಪಿ ಯೋಜನೆಯಡಿ ವಿವಿಧ ಇಲಾಖೆ ಕಾಮಗಾರಿಗಳ ಭೂಮಿಪೂಜೆ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ದಶಕಗಳಿಂದ ಆಗದೆ ಇರುವ ಮರಗೂರ ಭೀಮಾಶಂಕರ ಸಕ್ಕರೆ ಕಾರ್ಖಾನೆ ತಂದು ಇಂಡಿ-ಸಿಂದಗಿ ತಾಲೂಕಿನ ರೈತರ ಆಸ್ತಿಯನ್ನಾಗಿ ಮಾಡಿರುವೆ. ನನ್ನ ಅಧಿಕಾರದ ಅವಧಿಯಲ್ಲಿ ಗ್ರಾಮೀಣ ಭಾಗಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಅಲ್ಲಿನ ಮೂಲಭೂತ ಸೌಲಭ್ಯಗಳಾದ ರಸ್ತೆ, ವಿದ್ಯುತ್, ನೀರು ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಿರುವೆ ಎಂದರು.
ತಾಲೂಕಿನಿಂದ ಗ್ರಾಮೀಣ ಭಾಗಗಳ ಸಂಪರ್ಕ ಕಲ್ಪಿಸುವ ರಸ್ತೆಗಳು ಸಾಕಷ್ಟು ಸುಧಾರಣೆಗಳಾಗಿವೆ. ಇಂದು ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನಿವಾಸಿಗಳ ಕೇರಿಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿಲು ಅನುದಾನ ಬಿಡುಗಡೆ ಮಾಡಲಾಗಿದೆ. ಪಟ್ಟಣದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಿಸಿ ಸಾರ್ವಜನಿಕರಿಗೆ ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಿರುವೆ. ನಗರದ ರಸ್ತೆಗಳ ನಿರ್ಮಾಣ, ಹೆಲಿಪ್ಯಾಡ್, ಪ್ರವಾಸಿ ಮಂದಿರ ನವೀಕಣ, ವಿಜಯಪುರ ರಸ್ತೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿಗೆ ನೂತನ ಕಟ್ಟಡಗಳ ನಿರ್ಮಾಣ ಮಾಡಿಸಿ ವಿದ್ಯಾಗಿರಿ ಎಂಬ ಹೆಸರಿನಿಂದ ಶೈಕ್ಷಣಿಕ ಅಭಿವೃದ್ಧಿ ಮಾಡಿರುವೆ ಎಂದರು.
ಜಿಪಂ ಸದಸ್ಯ ಹನುಮಂತ ಖಡೇಕಾರ, ಕಲ್ಲನಗೌಡ ಬಿರಾದಾರ, ಪಂಚಪ್ಪ ಅರವತ್ತು, ಗ್ರಾಪಂ ಅಧ್ಯಕ್ಷ ಪುಂಡಲೀಕ ಅರವತ್ತು, ಅರ್ಜುನ ಕಗ್ಗೂಡ, ಎಸ್.ಆರ್. ರುದ್ರವಾಡಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಎಸ್.ಆರ್. ಕತ್ತಿ, ಮನೋಜಕುಮಾರ ಗಡಬಳ್ಳಿ, ರಾಜಕುಮಾರ ತೊರವಿ, ಧನರಾಜ ಮುಜಗೊಂಡ, ಗುತ್ತಿಗೆದಾರ ಆರ್. ಎಸ್. ಚೋರಗಿ, ಉಮೇಶ ಲಮಾಣಿ ವೇದಿಕೆಯಲ್ಲಿದ್ದರು.
ರಾಚಯ್ಯ ಮಠ, ಗಣಪತಿಗೌಡ ಬಿರಾದಾರ, ಬಾಪುಗೌಡ ಬಿರಾದಾರ, ಭೀಮು ಕೌಲಗಿ, ಇಲಿಯಾಸ್ ಬೋರಾಮಣಿ, ಧರ್ಮು ವಾಲೀಕಾರ, ಮಹೇಶ ಹೊನ್ನಬಿಂದಗಿ, ಅವಿನಾಶ
ಬಗಲಿ, ಜಾವೀದ್ ಮೋಮಿನ್ ಸೇರಿದಂತೆ ಅನೇಕರು ಇದ್ದರು.