ಬಾರ್ಬಡೋಸ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರಯೋಗ ಮಾಡಿದ ಟೀಂ ಇಂಡಿಯಾ ಕೈಸುಟ್ಟುಕೊಂಡಿದೆ. ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಹೊರಗಿಟ್ಟು ಯುವ ಆಟಗಾರರನ್ನು ಆಡಿಸಿದ ತಂಡ ಸೋಲನುಭವಿಸಿದೆ.
ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದ್ದು, ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ ಗೆ ಆಡುವ ಬಳಗದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಭಾರತದ ಯುವ ಪಡೆ ಬ್ಯಾಟಿಂಗ್ ನಲ್ಲಿ ಸಂಪೂರ್ಣ ವಿಫಲವಾಗಿತ್ತು.
ಈ ಪ್ರಯೋಗದ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. “ನಾವು ಯಾವಾಗಲೂ ದೊಡ್ಡ ಚಿತ್ರವನ್ನು ನೋಡುತ್ತೇವೆ. ಪ್ರತಿಯೊಂದು ಪಂದ್ಯ ಮತ್ತು ಸರಣಿಯ ಬಗ್ಗೆ ನಾವು ಯೋಚಿಸಲು ಸಾಧ್ಯವಿಲ್ಲ. ಈ ರೀತಿಯ ಸರಣಿಯಲ್ಲಿ, ವಿಶ್ವಕಪ್ ಮತ್ತು ಏಷ್ಯಾ ಕಪ್‌ಗೆ ಕೇವಲ ಎರಡು-ಮೂರು ಪಂದ್ಯಗಳು ಬಾಕಿ ಇರುವಾಗ ವಿರಾಟ್ ಮತ್ತು ರೋಹಿತ್ ಆಡಿಸಿದರೆ ನಮಗೆ ಕೆಲವು ಉತ್ತರಗಳು ಸಿಗುವುದಿಲ್ಲ” ಎಂದು ಪಂದ್ಯದ ನಂತರ ದ್ರಾವಿಡ್ ಹೇಳಿದರು.
ರೋಹಿತ್ ಮತ್ತು ಕೊಹ್ಲಿ ಅವರನ್ನು ಹೊರಗಿಟ್ಟ ಬಗ್ಗೆ ಟೀಕೆಗಳು ಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್, ನಾವು ಇತರರ ಅಭಿಪ್ರಾಯಗಳ ಬಗ್ಗೆ ಯೋಚಿಸುವುದಿಲ್ಲ’ ಎಂದಿದ್ದಾರೆ.
“ನಾವು ಇತರರ ಅಭಿಪ್ರಾಯಗಳ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ, ಇವರು ನಮ್ಮ ದೇಶದ ಪ್ರತಿಭಾವಂತ ಹುಡುಗರು, ಅವರೆಲ್ಲರೂ ಪ್ರದರ್ಶನ ನೀಡಿ ಇಲ್ಲಿಗೆ ಬಂದಿದ್ದಾರೆ. ಅವಕಾಶ ಸಿಕ್ಕಾಗ ಅವಕಾಶವನ್ನು ಬಳಸಿಕೊಳ್ಳುವುದು ಅವರಿಗೆ ಬಿಟ್ಟದ್ದು. ನಾವು ಸ್ವಲ್ಪ ನಿರಾಶೆಗೊಂಡಿದ್ದೇವೆ. ಇದು ಒಂದು ಟ್ರಿಕಿ ವಿಕೆಟ್ ಆಗಿತ್ತು, ಇದು ಬ್ಯಾಟ್ ಮಾಡಲು ಸುಲಭವಾದ ವಿಕೆಟ್ ಅಲ್ಲ ಎಂದು ತಿಳಿದಿತ್ತು ಆದರೆ ನಾವು ಹೇಗಾದರೂ 230-240 ಕ್ಕೆ ತಲುಪಬೇಕಾಗಿತ್ತು, ಅದು ಉತ್ತಮ ಸ್ಕೋರ್ ಆಗಿರಬಹುದು. ನಾವು ಮಧ್ಯದಲ್ಲಿ ವಿಕೆಟ್ಗಳನ್ನು ಕಳೆದುಕೊಂಡೆವೆ, 50-60 ರನ್ ಕಡಿಮೆಯಾಯಿತು” ಎಂದು ಅವರು ಹೇಳಿದರು.