ಢಾಕಾ: ಸ್ಪಿನ್ನರ್ ಶಕೀಬ್ ಅಲ್ ಹಸನ್ ದಾಳಿಗೆ ಸಿಲುಕಿದ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 186 ರನ್ ಗಳಿಗೆ ಆಲೌಟಾಗಿದೆ. ಉಪನಾಯಕ ಕೆಎಲ್ ರಾಹುಲ್ ಜವಾಬ್ದಾರಿಯುತ ಆಟದ ಕಾರಣ ಭಾರತ ತಂಡ ಗೌರವಯುತ ಮೊತ್ತ ಕಲೆ ಹಾಕುವಂತಾಯಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ಮೊದಲು ಹತ್ತು ಓವರ್ ಗಳಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಾಗಿತ್ತು. ನಾಯಕ ರೋಹಿತ್ ಆರಂಭ ಪಡೆದರೂ 27 ರನ್ ಗೆ ಔಟಾದರು. ಶ್ರೇಯಸ್ ಅಯ್ಯರ್ 24 ರನ್ ಮಾಡಿದರು. ಇದಾದ ಬಳಿಕ ವಾಷಿಂಗ್ಟನ್ ಸುಂದರ್ ಜೊತೆ ಕೆಎಲ್ ರಾಹುಲ್ ಅರ್ಧಶತಕದ ಜೊತೆಯಾಟವಾಡಿದರು.
ಸುಂದರ್ 43 ಎಸೆತಗಳಿಂದ 19 ರನ್ ಮಾಡಿದರು. ಬಹಳ ಸಮಯದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಆಡಿದ ರಾಹುಲ್ ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್ ಕಚ್ಚಿ ನಿಂತು ಆಡಿದರು. 70 ಎಸೆತ ಎದುರಿಸಿದ ಅವರು ನಾಲ್ಕು ಸಿಕ್ಸರ್ ನೆರವಿನಿಂದ 73 ರನ್ ಮಾಡಿದರು. ಭಾರತ ತಂಡವು 41.2 ಓವರ್ ಗಳಲ್ಲಿ 186 ರನ್ ಗೆ ಆಲೌಟಾಯಿತು.
ಬಾಂಗ್ಲಾ ಪರ ಅನುಭವಿ ಬೌಲರ್ ಶಕೀಬ್ ಅಲ್ ಹಸನ್ ಐದು ವಿಕೆಟ್ ಕಿತ್ತರೆ, ಇಬಾದತ್ ಹುಸೈನ್ ನಾಲ್ಕು ವಿಕೆಟ್ ಪಡೆದರು.