ರಾಜಕೋಟ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ಬುಧವಾರ ರಾಜಕೋಟ್ ನಲ್ಲಿ ಅಂತ್ಯವಾಗಿದೆ. ಮೂರನೇ ಪಂದ್ಯದಲ್ಲಿ ಭಾರತ ತಂಡವು ಸೋಲನುಭವಿಸಿದರೂ ಮೊದಲೆರಡು ಪಂದ್ಯ ಗೆದ್ದ ಕಾರಣ ಸರಣಿ ಜಯ ಸಾಧಿಸಿತು. ಆದರೆ ಪಂದ್ಯದ ಬಳಿಕ ನಡೆದ ಟ್ರೋಫಿ ಫೋಟೊ ಸೆಶನ್ ವೇಳೆ ಟ್ರೋಫಿ ಹಿಡಿದ ಆಟಗಾರ ಯಾರು ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ.
ಸಾಮಾನ್ಯವಾಗಿ ಟೀಂ ಇಂಡಿಯಾ ಯಾವುದೇ ಟ್ರೋಫಿ ಗೆದ್ದರೆ ಆ ಸರಣಿಯಲ್ಲಿ ಆಡಿದ ಹೊಸ ಆಟಗಾರ ಅಥವಾ ಕಿರಿಯ ಆಟಗಾರನಿಗೆ ನೀಡುವುದು ಸಂಪ್ರದಾಯ. ಆದರೆ ಆಸೀಸ್ ವಿರುದ್ಧ ರಾಜಕೋಟ್ ನಲ್ಲಿ ಸರಣಿ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾ ಅಥವಾ ಮೊದಲೆರಡು ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದ ಕೆಎಲ್ ರಾಹುಲ್ ಆಗಲಿ ಅಥವಾ ಯಾವುದೇ ತಂಡದ ಕಿರಿಯ ಆಟಗಾರ ಟ್ರೋಫಿ ಎತ್ತಿಕೊಂಡು ಫೋಟೊಸೆಶನ್ ನಲ್ಲಿ ಭಾಗಿಯಾಗಲಿಲ್ಲ. ಅದರ ಬದಲಿಗೆ ಟ್ರೋಫಿ ಎತ್ತಿಕೊಂಡಿದ್ದು ಸೌರಾಷ್ಟ್ರದ ಧರ್ಮೇಂದ್ರ ಸಿಂಗ್ ಜಡೇಜಾ.
ಮೂರನೇ ಏಕದಿನ ಪಂದ್ಯದಲ್ಲಿ ಇಂಡಿಯಾ ಸ್ಕ್ವಾಡ್ ನಲ್ಲಿ ಕೇವಲ 13 ಆಟಗಾರರಿದ್ದ ಕಾರಣ ಸೌರಾಷ್ಟ್ರದ ನಾಲ್ವರು ಆಟಗಾರರನ್ನು ಹೆಚ್ಚುವರಿ ಆಟಗಾರರನ್ನಾಗಿ ನೇಮಿಸಲಾಗಿತ್ತು. ಧರ್ಮೇಂದ್ರ ಸಿಂಗ್ ಜಡೇಜಾ, ಪ್ರೇರಕ್ ಮಂಕಡ್, ವಿಶ್ವರಾಜ್ ಜಡೇಜಾ ಮತ್ತು ಹಾರ್ವಿಕ್ ದೇಸಾಯಿ ಅವರು ರಾಜಕೋಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಡ್ರಿಂಕ್ಸ್ ಸಾಗಾಟ ಮತ್ತು ಬದಲಿ ಫೀಲ್ಡರ್ ಗಳಾಗಿದ್ದರು. ಹೀಗಾಗಿ ಫೋಟೋ ಸೆಶನ್ ನಲ್ಲಿ ಈ ಆಟಗಾರರನ್ನು ಮಧ್ಯದಲ್ಲಿ ನಿಲ್ಲಿಸಿ ಟ್ರೋಫಿ ನೀಡಲಾಯಿತು.
ತಂಡದ ಕೆಲವು ಆಟಗಾರರು ವಿಶ್ವಕಪ್ ಗೆ ಮುನ್ನ ಮನೆಗೆ ತೆರಳಿರುವ ಕಾರಣ ಮತ್ತು ಕೆಲವರು ಜ್ವರದಿಂದ ಬಳಲುತ್ತಿರುವ ಕಾರಣ ರಾಜಕೋಟ್ ಪಂದ್ಯಕ್ಕೆ ಕೇವಲ 13 ಆಟಗಾರರು ತಂಡದಲ್ಲಿದ್ದಾರೆ ಎಂದು ಮೂರನೇ ಏಕದಿನ ಪಂದ್ಯಕ್ಕೆ ಮುನ್ನ ರೋಹಿತ್ ಶರ್ಮಾ ಅವರು ಸ್ಪಷ್ಟಪಡಿಸಿದ್ದರು.
ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ಜ್ವರದಿಂದ ಬಳಲುತ್ತಿದ್ದ ಕಾರಣ ರಾಜಕೋಟ್ ಪಂದ್ಯಕ್ಕೆ ಅಲಭ್ಯರಾಗಿರಲಿಲ್ಲ. ಹೀಗಾಗಿ ಆರಂಭಿಕರಾಗಿ ರೋಹಿತ್ ಶರ್ಮಾ ಜತೆಗೆ ವಾಷಿಂಗ್ಟನ್ ಸುಂದರ್ ಆಡಿದ್ದರು.