ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ರೈತರು, ಮಹಿಳೆಯರು, ಜನಸಾಮಾನ್ಯರು, ಹಿರಿಯ ನಾಗರಿಕರು, ಉದ್ಯೋಗಿಗಳು, ಶಿಕ್ಷಕರು- ಉಪನ್ಯಾಸಕರು, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳಿಗೆ ಪ್ರೋತ್ಸಾಹ ಸಿಕ್ಕಿದೆ. ಭಾರಿ ಎನ್ನುವಂತಹ ಉತ್ತೇಜನ ಕಾಣದಿದ್ದರೂ ನಿಮ್ಮೊಂದಿಗಿದ್ದೇವೆ ಎಂಬ ಭಾವನೆ ಮೂಡಿಸುವಂತಿದೆ.
ಎಂಎಸ್‌ಎಂಇ ಕ್ಷೇತ್ರದಲ್ಲಿ ವಾರ್ಷಿಕ 250 ಕೋಟಿ ರೂ.ವರೆಗೆ ವಹಿವಾಟು ನಡೆಸುವ ಕಂಪನಿಗಳಿಗೆ ವರಮಾನ ತೆರಿಗೆಯನ್ನು ಶೇ.30ರಿಂದ ಶೇ.25ಕ್ಕೆ ಇಳಿಸಿರುವುದು ಉತ್ತಮವಾಗಿದೆ. ಹಾಗೆಯೇ ಈ ಕ್ಷೇತ್ರಕ್ಕೆ “ಮುದ್ರಾ’ ಕಾರ್ಯಕ್ರಮದಡಿ ಅನುದಾನ ನೀಡಿರುವುದರಿಂದ ಇನ್ನಷ್ಟು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಪ್ರೇರಣೆ ಸಿಗಲಿದೆ.
ವೈಯಕ್ತಿಕ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು (80ಸಿ) ವಿಸ್ತರಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಆದರೆ ಸಂಬಳದಾರರಿಗೆ ಇದೇ ಮೊದಲ ಬಾರಿಗೆ ಸ್ಟಾಂಡರ್ಡ್ ಡಿಡಕ್ಷನ್ ಪರಿಚಯಿಸಿದ್ದು, 40 ಸಾವಿರ ರೂ.ವರೆಗೆ ವಿನಾಯಿತಿ ನೀಡಿದೆ. ಹಿರಿಯ ನಾಗರಿಕರಿಗೆ ಹಲವು ವಿನಾಯ್ತಿ ನೀಡಿದ್ದು, ಬ್ಯಾಂಕ್ ಠೇವಣಿ ಮೇಲೆ ಪಡೆಯುವ 10 ಸಾವಿರ ರೂ.ನಿಂದ 50 ಸಾವಿರ ರೂ. ವರೆಗಿನ ಬಡ್ಡಿ ಪ್ರಮಾಣಕ್ಕೆ ವಿನಾಯ್ತಿ ಮಿತಿ ವಿಸ್ತರಿಸಲಾಗಿದೆ.
ರೈಲ್ವೆ, ರಸ್ತೆಯಂತಹ ಮೂಲಸೌಕರ್ಯಕ್ಕೆ ಆದ್ಯತೆ ನೀಡಿದ್ದು, ಸರಕು- ಸೇವೆ ಸಾಗಣೆಗೆ ಅನುಕೂಲವಾಗಲಿದೆ. ಜನಧನ್ ಯೋಜನೆಗೂ ಹಣಕಾಸು ಬೆಂಬಲ ನೀಡಲಾಗಿದೆ. ಪ್ರಮುಖವಾಗಿ ಈ ಬಾರಿ ರೈತರ ಸ್ಥಿತಿಗತಿ ಸುಧಾರಣೆಗೆ ಆದ್ಯತೆ ನೀಡಲಾಗಿದ್ದು, ಫುಡ್‌ಪಾರ್ಕ್ ಸ್ಥಾಪನೆ ಜತೆಗೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ವಿಶೇಷ ಕಾರ್ಯಕ್ರಮ ಘೋಷಿಸಿರುವುದು ಸೂಕ್ತವಾಗಿದೆ.
ಆ ಮೂಲಕ ಮುಂದಿನ ವರ್ಷ ಇನ್ನಷ್ಟು ಸುಧಾರಣೆ ತರುವ ನಿರೀಕ್ಷೆ ಹುಟ್ಟಿಸಿದೆ. ಜತೆಗೆ ಕುಡಿಯುವ ನೀರಿನ ಯೋಜನೆಗೂ ಮಹತ್ವ ನೀಡಲಾಗಿದೆ. ಆದರೆ, ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು ಅನುಷ್ಠಾನವಾಗದಿದ್ದರೆ ಕೇವಲ ಘೋಷಣೆಗಳಾಗಿ ಉಳಿಯಲಿವೆ. ರೈತರ ಬಗ್ಗೆ ಕಾಳಜಿ ವಹಿಸಿ, ಬೆಳೆಗಳಿಗೆ ಬೆಲೆ ನಷ್ಟವಾಗದಂತೆ ನೋಡಿಕೊಂಡರೆ ಅವರು ಇನ್ನಷ್ಟು ಬೆಳೆಯುತ್ತಾರೆ.
ಅದನ್ನು ಉದ್ಯಮಗಳು, ಜನಸಾಮಾನ್ಯರು ಖರೀದಿಸುತ್ತಾರೆ. ಜತೆಗೆ ಫುಡ್‌ಪಾರ್ಕ್ ನಿರ್ಮಾಣದಿಂದ ಉದ್ಯೋಗ ಹೆಚ್ಚಾಗಲಿದೆ. ಎಲ್ಲ ವರ್ಗದ ಜನರ ಸಹಕಾರ ನೀಡುವ ಉದ್ದೇಶವನ್ನು ಬಜೆಟ್ ಮಂಡಿಸಿದ್ದಾರೆ. ಒಟ್ಟಾರೆ ಈ ಬಾರಿಯ ಬಜೆಟ್ ರೈತರಿಗೆ ಪ್ರೋತ್ಸಾಹ, ಬೆಳೆಯುವ ಪದಾರ್ಥಗಳಿಗೆ ಸೂಕ್ತ ಬೆಲೆ ವ್ಯವಸ್ಥೆ ಕಲ್ಪಿಸುವ ಜತೆಗೆ ಆಹಾರ ಸಂಸ್ಕರಣೆ ಉದ್ಯಮ ಕ್ಷೇತ್ರಕ್ಕೆ ಬೆಂಬಲ ನೀಡುವುದರಿಂದ ಆರ್ಥಿಕತೆ ಬೆಳೆಯುತ್ತದೆ.
ಆನ್‌ಲೈನ್ ವ್ಯವಸ್ಥೆಯಿಂದ ಅಧಿಕಾರಿಗಳನ್ನು ವೈಯಕ್ತಿಕವಾಗಿ ಭೇಟಿಯಾಗುವುದು ತಪ್ಪುವ ಸಾಧ್ಯತೆ ಇವೆ. ಜತೆಗೆ ಜಿಎಸ್‌ಟಿ ಜಾರಿಯಿಂದಾಗಿ ಅಡತಡೆಯಿಲ್ಲದೆ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಿಕೊಟ್ಟರೆ ಇನ್ನೂ ಹೆಚ್ಚಿನ ರೀತಿಯ ತೆರಿಗೆ ಆದಾಯ ನಿರೀಕ್ಷಿಸಬಹುದಾಗಿದೆ.
* ಬಿ.ಟಿ.ಮನೋಹರ್, ಅಧ್ಯಕ್ಷರು, ರಾಜ್ಯ ತೆರಿಗೆ ಸಮಿತಿ ಮತ್ತು ಟೀಮ್ ಜಿಎಸ್‌ಟಿ, ಎಫ್ಕೆಸಿಸಿಐ