ಹೊಸದಿಲ್ಲಿ: ಕೇಂದ್ರ ಸರಕಾರವು “ಉದ್ಯಮ ಸ್ನೇಹಿ ರಾಜ್ಯ-2019’ರ ಪಟ್ಟಿ ಬಿಡುಗಡೆ ಮಾಡಿದ್ದು, ನೆರೆಯ ಆಂಧ್ರಪ್ರದೇಶವು ಮತ್ತೂಮ್ಮೆ ಭಾರತದ ನಂಬರ್ 1 ಉದ್ಯಮ ಸ್ನೇಹಿ ರಾಜ್ಯದ ಗರಿಮೆಗೆ ಪಾತ್ರವಾಗಿದೆ. ತದನಂತರದ ಸ್ಥಾನಗಳಲ್ಲಿ ಕ್ರಮವಾಗಿ ಉತ್ತರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿವೆ.
ವ್ಯಾಪಾರ ಸುಧಾರಣಾ ಕ್ರಿಯಾ ಯೋಜನೆಯ ಮಾನದಂಡಗಳ ಮೇಲೆ (ಬಾರ್ಪ್ -2019) ಈ ಪಟ್ಟಿಯನ್ನು ಸಿದ್ಧಪಡಿಸಿದ್ದಾಗಿ, ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಬಾರ್ಪ್(ಬ್ಯುಸಿನೆಸ್ ಆ್ಯಕ್ಷನ್ ರಿಫಾರ್ಮ್ ಪ್ಲ್ರಾನ್) ಅಡಿಯಲ್ಲಿ ಸಿದ್ಧವಾಗಿರುವ ಈ ಪಟ್ಟಿಯು ನಿರ್ಮಾಣ ಪರವಾನಗಿ, ಕಾರ್ಮಿಕ ಕಾನೂನುಗಳ ನಿರ್ವಹಣೆ, ಸುಗಮ ಹೂಡಿಕೆ ವ್ಯವಸ್ಥೆ, ಭೂ ಲಭ್ಯತೆ, ಏಕಗವಾಕ್ಷಿ ವ್ಯವಸ್ಥೆ ಮುಂತಾದ ಮಾನದಂಡಗಳನ್ನು ಒಳಗೊಂಡಿದ್ದು, ಇವುಗಳ ಆಧಾರದ ಮೇಲೆ ಯಾವ ರಾಜ್ಯ ಉದ್ಯಮ ಸ್ನೇಹಿಯಾಗಿದೆ ಎನ್ನುವುದನ್ನು ನಿರ್ಧರಿಸಲಾಗುತ್ತದೆ.
ರಾಜ್ಯದ ವಿಷಯಕ್ಕೆ ಬರುವುದಾದರೆ “ಬಾರ್ಪ್ 2019′ ಪಟ್ಟಿಯಲ್ಲಿ ಕರ್ನಾಟಕವು 17ನೇ ಸ್ಥಾನದಲ್ಲಿ ಇದೆ. 2018ರಲ್ಲಿ 12ನೇ ಸ್ಥಾನದಲ್ಲಿದ್ದ ಉತ್ತರಪ್ರದೇಶ ಎರಡನೇ ಸ್ಥಾನಕ್ಕೇರಿದ್ದರೆ, ಎರಡು ವರ್ಷಗಳ ಹಿಂದೆ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿದ್ದ ರಾಷ್ಟ್ರ ರಾಜಧಾನಿ ದೆಹಲಿ 2019ರಲ್ಲಿ 12ನೇ ಸ್ಥಾನ ತಲುಪಿದೆ.
ಈ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, “”ಒಂದು ರಾಜ್ಯವು ಉತ್ತಮ ರ್‍ಯಾಂಕಿಂಗ್ ಪಡೆದಿದೆ ಎಂದಾಕ್ಷಣ ಅದು ಯಾವುದೇ ರೀತಿಯಲ್ಲೂ ಅನ್ಯ ರಾಜ್ಯಗಳಿಗಿಂತ ಉತ್ಕೃಷ್ಟ ಎಂದು ಖಂಡಿತ ಅಲ್ಲ.
ಎಲ್ಲಾ ರಾಜ್ಯಗಳ ಪ್ರಯತ್ನವೂ ಪರಿಗಣಿತವಾಗುತ್ತದೆ” ಎಂದಿದ್ದಾರೆ. ಈ ಪಟ್ಟಿಯು ಮಾರ್ಚ್ ತಿಂಗಳಲ್ಲೇ ಬಿಡುಗಡೆಯಾಗಬೇಕಿತ್ತು, ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತ್ತು.