ವಾಷಿಂಗ್ಟನ್ : ಇಂಡಸ್ ವಾಟರ್ ಟ್ರೀಟಿಗೆ ಸಂಬಂಧಿಸಿದ ಯಾವುದೇ ವಿವಾದವನ್ನು ಭಾರತ ಮತ್ತು ಪಾಕಿಸ್ಥಾನ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಅಮೆರಿಕ ಹೇಳಿದೆ. ಆದರೆ ಈ ವಿವಾದವನ್ನು ಬಗೆ ಹರಿಸುವಲ್ಲಿ ತಾನು ಮಧ್ಯಸ್ಥಿಕೆ ವಹಿಸುವ ಬಗ್ಗೆ ಅದು ಚಕಾರ ಎತ್ತಿಲ್ಲ.
ಸಿಂಧೂ ನದೀ ನೀರನ್ನು ಬಳಸಿಕೊಳ್ಳಲು ಭಾರತವು ಎರಡು ನಿರ್ಮಾಣ ಯೋಜನೆಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಭಾರತ-ಪಾಕ್ ಬಿಕ್ಕಟ್ಟು ಉದ್ಭವಿಸಿದೆ. ಇದನ್ನು ಬಗೆಹರಿಸುವಲ್ಲಿ ವಿಶ್ವ ಬ್ಯಾಂಕ್ ನಡೆಸಿದ್ದ ಮಧ್ಯಸ್ಥಿಕೆಯನ್ನು ಅದು ಸದ್ಯಕ್ಕೆ ಸ್ಥಗಿತಗೊಳಿಸಿದೆ. ಇದರಿಂದ ಪಾಕಿಸ್ಥಾನ ಸಿಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಈ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ.
ಅಮೆರಿಕದ ವಿದೇಶ ಸಚಿವೆ ಜಾನ್ ಕೆರಿ ಅವರು ಇಂಡಸ್ ವಾಟರ್ ಟ್ರೀಟಿ ಕುರಿತಾಗಿ ಪಾಕ್ ಹಣಕಾಸು ಸಚಿವ ಮೊಹಮ್ಮದ್ ಇಷಾಕ್ ದಾರ್ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. “ಈ ಫೋನ್ ಮಾತುಕತೆ ನಡೆದಿರುವುದನ್ನು ನಾನು ದೃಢೀಕರಿಸುತ್ತೇನೆ; ಆದರೆ ಅದರ ವಿವರಗಳನ್ನು ನೀಡಲು ಬಯಸುವುದಿಲ್ಲ’ ಎಂದು ಕೆರೀ ಅವರ ವಕ್ತಾರ ಜಾನ್ ಕರ್‌ಬೀ ಹೇಳಿದ್ದಾರೆ.
“ಇಂಡಸ್ ವಾಟರ್ ಟ್ರೀಟಿ (ಸಿಂಧೂ ನದೀ ನೀರು ಹಂಚಿಕೆ ಒಪ್ಪಂದ) ಕಳೆದ 50 ವರ್ಷಗಳಿಂದ ಭಾರತ ಮತ್ತು ಪಾಕಿಸ್ಥಾನದ ನಡುವಿನ ಶಾಂತಿಯುತ ಸಹಕಾರಕ್ಕೆ ಒಂದು ಮಾದರಿಯಾಗಿದೆ. ಈ ಹಿಂದೆ ನಾವು ಹೇಳಿರುವಂತೆ, ಭಾರತ ಮತ್ತು ಪಾಕಿಸ್ಥಾನ, ಇಂಡಸ್ ವಾಟರ್ ಟ್ರೀಟಿ ಕುರಿತಾದ ಯಾವುದೇ ಭಿನ್ನಮತವನ್ನು ಪರಸ್ಪರ, ದ್ವಿಪಕ್ಷೀಯ ಮಾತುಕತೆಯಿಂದಲೇ ಬಗೆ ಹರಿಸಿಕೊಳ್ಳಬೇಕು ಎಂದು ಈಗಲೂ ಹೇಳುತ್ತೇವೆ’ ಎಂದು ಜಾನ್ ಕರ್‌ಬೀ ಹೇಳಿದರು.
ಆದರೆ ಈ ವಿಷಯದಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸುವುದೇ ಎಂಬ ಪ್ರಶ್ನೆಗೆ ಉತ್ತರ ನೀಡಲು ಕರ್‌ಬೀ ನಿರಾಕರಿಸಿದರು.