Advertisement

ಅಂದು ಉಗುರಲ್ಲೇ ಬಗೆಹರಿಸಬಹುದಿತ್ತು ; ಇಂದು ಕೊಡಲಿ ಬೇಕಾಗಿದೆ !

01:40 AM Feb 29, 2020 | Sriram |

ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು ಪಡಿಸುವ ಅಂಶವೆಂದರೆ, ಸಮಸ್ಯೆ ಹಳೆಯದ್ದು ಎನ್ನುವುದಕ್ಕಿಂತಲೂ ನಗರಸಭೆ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಅದಕ್ಕಿಂತ ದೊಡ್ಡದು ಎಂಬುದು. ಇಪ್ಪತ್ತೆರಡು ವರ್ಷಗಳ ಹಿಂದೆಯೇ ಕಂಡು ಬಂದ ಸಮಸ್ಯೆಯ ಸಣ್ಣ ಸ್ವರೂಪಕ್ಕೆ ಮದ್ದು ಕೊಡದ ಕಾರಣ, ಇಂದು ಬೃಹತ್‌ ಸ್ವರೂಪಕ್ಕೆ ತಳೆದಿದೆ.
ಕೋಟಿಗಟ್ಟಲೆ ಹಣ ಬೇಕು, ನಾವೇಕೆ ತಲೆ ಕೆಡಿಸಿಕೊಳ್ಳಬೇಕು? ಮುಂದಿನವರು ಮಾಡುತ್ತಾರೆ ಎಂದು ಸಮಸ್ಯೆಯನ್ನು ಪಕ್ಕದವರ ಮೇಜಿಗೆ ತಳ್ಳಿಬಿಡುವ ಜನಪ್ರತಿನಿಧಿಗಳ ಧೋರಣೆಯೂ ಇದಕ್ಕೆ ಕಾರಣವಾಗಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, ನಾಗರಿಕರೂ ಎಚ್ಚೆತ್ತುಕೊಳ್ಳುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಬುದ್ಧಿ ಹೇಳದಿದ್ದರೆ ಇಡೀ ನಗರವೇ ಮುಳುಗುತ್ತದೆ. ಪ್ರವಾಸೋದ್ಯಮದ ಶಕೆ ಆರಂಭವಾಗಿ ಉಡುಪಿಯಲ್ಲಿ ಹಲವಾರು ಪರ್ಯಾಯ ಉದ್ಯೋಗಗಳು ಆರಂಭವಾಗುವ ಹೊತ್ತಿನಲ್ಲಿ ಈ ಸಮಸ್ಯೆ ಭವಿಷ್ಯದ ಅವಕಾಶ
ಗಳನ್ನೆಲ್ಲ ಕಸಿದುಕೊಂಡು ಬಿಡುತ್ತದೆ. ಇದು ಸತ್ಯ.

Advertisement

ಬನ್ನಂಜೆ: ನಗರಸಭೆಯ ನಿರ್ಲಕ್ಷ್ಯಕ್ಕೆ ಎಷ್ಟು ಉದಾಹರಣೆ ಕೊಟ್ಟರೂ ಸಾಲದು. ನಗರಕ್ಕೊಂದು ಆಡಳಿತದ ಚೌಕಟ್ಟು ಹಾಕಿ ಅಭಿವೃದ್ಧಿಗೆ ಕಾರಣವಾಗಬೇಕಾದ ಇದೇ ನಗರಸಭೆ, ಜನಪ್ರತಿನಿಧಿಗಳು ಹದಿನೈದು ವರ್ಷಗಳ ಹಿಂದೆ ಎಚ್ಚೆತ್ತುಕೊಂಡಿದ್ದರೆ ಇಂದಿನ ಉಡುಪಿಯಲ್ಲಿ ಈಗಿನ ಶಾಸಕರು ಹೇಳಿದಂತೆ ಇಂದ್ರಾಣಿ ಒಂದು ದೊಡ್ಡ ಸಮಸ್ಯೆಯಾಗುತ್ತಿರಲಿಲ್ಲ.

ಈ ಮಾತು ಉದಯವಾಣಿ ಸುದಿನ ಅಧ್ಯಯನ ತಂಡ ಖಂಡಿತಾ ಹೇಳುತ್ತಿಲ್ಲ. ಬದಲಾಗಿ ಹಲವು ದಾಖಲೆಗಳು ಹೇಳುತ್ತವೆ. ನಗರಸಭೆಯ ಅಧಿ ಕಾರಿಗಳು ಇಂದ್ರಾಣಿ ನದಿಗೆ ತ್ಯಾಜ್ಯ ಬಿಡುತ್ತಿರುವುದರ ಕುರಿತು ಕೇಳಿ ಬಂದ ದೂರು ಗಳಿಗೆಲ್ಲ ಕಿವಿಗೊಡಲೇ ಇಲ್ಲ. ಆಗಿನ ನಗರಸಭೆ ಅಧ್ಯಕ್ಷರು, ಪ್ರತಿನಿಧಿಗಳೂ ಸಹ ಯಾರಾ ದರೂ ಪ್ರತಿಭಟನೆ ಮಾಡಿದರೆ, ಅದು ವಿರೋಧ ಪಕ್ಷದವರ ಹುನ್ನಾರ ಎಂದು ಹೇಳಿ ಕಣ್ಮುಚ್ಚಿ ಕೊಂಡು ಕುಳಿತರು. ಪ್ರತಿ ಹಂತದಲ್ಲೂ ರಾಜಕೀಯವೂ ಸೇರಿಕೊಂಡ ಕಾರಣ ನಗರಸಭೆ ಅಧಿಕಾರಿಗಳಿಗೆ ವಿಷಯ ಮರೆಯಲು ಬಹಳ ಅನುಕೂಲವಾಯಿತು.

ನಮ್ಮಲ್ಲಿ ಸಂಗ್ರಹಿಸಿದ ಹಲವು ದಾಖಲೆಗಳು ಹೇಳುವುದೇನೆಂದರೆ, ಈ ಸಮಸ್ಯೆ 1997ರಲ್ಲೇ ಆರಂಭವಾಗಿತ್ತು. ಆಗಿನ್ನೂ ಸಮಸ್ಯೆ ಮೊಳಕೆಯ ಲ್ಲಿತ್ತು. ಕೆಲವು ಬಾವಿಗಳು ಹಾಳಾಗತೊಡಗಿದ್ದವು. ಜನರು ದೂರು ಕೊಡ ತೊಡಗಿದ್ದರು, ಆದರೆ ನಗರಸಭೆ ಕಿವಿಗೆ ಹಾಕಿಕೊಳ್ಳುತ್ತಲೇ ಇರಲಿಲ್ಲ.

ಕ್ಷಮೆ ಕೋರಿದ್ದ ಶಾಸಕರು
1997ರಲ್ಲಿ ಡಾ| ರವೀಂದ್ರನಾಥ ಶಾನಭಾಗ್‌ ಅಧ್ಯಕ್ಷತೆಯಲ್ಲಿ ಉಡುಪಿಯಲ್ಲಿ ಈ ಸಮಸ್ಯೆ ಕುರಿತಾದಂತೆಯೇ ಬಳಕೆದಾರರ ವೇದಿಕೆಯ ಸಭೆ ನಡೆದಿತ್ತು. ಅದರಲ್ಲಿ ಪ್ರತಿ ಸಮಸ್ಯೆಯನ್ನೂ ಬಿಡಿಸಿ ಬಿಡಿಸಿ ಹೇಳಲಾಗಿತ್ತು. ಆಗ ಸಮಸ್ಯೆ ಎಂಬುದು ಶಿರಿಬೀಡು, ಮಠದಬೆಟ್ಟು, ಬೈಲಕೆರೆ, ಬನ್ನಂಜೆ ಮತ್ತಿತರ ಪ್ರದೇಶಗಳಲ್ಲಿ ಆರಂಭವಾಗಿತ್ತು. ಅಲ್ಲೆಲ್ಲ ಬಾವಿಗಳು ಹಾಳಾಗತೊಡಗಿದ್ದವು. ಅದಕ್ಕೆ ಕಾರಣವೆಂದರೆ, ಇಂದ್ರಾಣಿ ನದಿಯಲ್ಲೇ ನಗರದ ಮೊದಲನೇ ಹಂತದಲ್ಲಿ ಆದ ಒಳಚರಂಡಿ ವ್ಯವಸ್ಥೆಯ ಪೈಪುಗಳನ್ನು ಹಾಕಿದುದು. ಅದು ಅಲ್ಲಲ್ಲಿ ಒಡೆದು ತ್ಯಾಜ್ಯವೆಲ್ಲ ನದಿಗೆ ಸೇರತೊಡಗಿತ್ತು.

Advertisement

ಇದಕ್ಕೇ ಸಂಬಂಧಿಸಿದ ಒಂದು ಸಭೆಯಲ್ಲಿ ಆಗಿನ ಶಾಸಕರಾದ ಸಭಾಪತಿ, ಸ್ಥಳೀಯ ನಗರಸಭೆ ವ್ಯಾಪ್ತಿಯೊಳಗಿನ ಬಾವಿಗಳಿಗೆ ಕೊಳಚೆ ಸೇರುತ್ತಿರುವುದಕ್ಕೆ ನಾಗರಿಕರ ಸಭೆಯಲ್ಲಿ ಕ್ಷಮೆಯಾಚಿಸಿದ್ದರು. ಆ ತುರ್ತು ಸಭೆಯಲ್ಲಿ ಆಗಿನ ನಗರಸಭೆ ಅಧ್ಯಕ್ಷೆ ಲೀನಾ ಐಸಾಕ್ಸ್‌, ಉಪಾಧ್ಯಕ್ಷರಾದ ಕುಶಲ ಶೆಟ್ಟಿ ಭಾಗವಹಿಸಿದ್ದರು.

ಇಂದ್ರಾಣಿಯ ಮೂಲ ರೂಪದಲ್ಲಿ ಎಲ್ಲವೂ ಶುದ್ಧ
ಇಂದ್ರಾಣಿ ತೀರ್ಥ ಹುಟ್ಟುವ ಸ್ಥಳಕ್ಕೆ ಹೋದರೆ ಸಣ್ಣದೊಂದು ಕೆರೆ ಕಾಣುತ್ತದೆ. ಅದರ ಮೇಲೆ ಸಣ್ಣದೊಂದು ತೂಬಿನ ಮೂಲಕ ನೀರು ಬಂದು ಒಂದು ಗುಂಡಿಗೆ ಬೀಳುತ್ತದೆ. ಅದು ಗುಪ್ತಗಾಮಿನಿಯಂತೆ ಎದುರಿನ ಕೆರೆಗೆ ಸೇರುತ್ತದೆ. ಆ ನೀರು ಮತ್ತೆ ಕೆಳಗಿನಿಂದಲೇ ಹರಿದು ಹದಿನೈದು ಅಡಿ ದೂರದ ದೊಡ್ಡ ದೊಂದು ಕೆರೆಯಾಗಿ ರೂಪುಗೊಳ್ಳುತ್ತದೆ.

ಆ ತೂಬಿನಲ್ಲಿ ಈಗ ಬೀಳುತ್ತಿರುವುದು
ಕೆಲವು ಹನಿಗಳು ಮಾತ್ರ. ಮಳೆಗಾಲದಲ್ಲಿ ರಭಸ ಜೋರಾಗಿರುತ್ತದೆ. ಮೇಲಿಂದ (ಗುಡ್ಡ ಪ್ರದೇಶವಾದ ಮಣ್ಣಪಳ್ಳ ಇತ್ಯಾದಿ) ಕೆಳಗೆ ಹರಿದು ಬರುವ ಝರಿಯೇ ಇಂದ್ರಾಣಿ. ಈಗ ಗುಡ್ಡ ಪ್ರದೇಶದಲ್ಲಿ ಹೆಚ್ಚು ವಸತಿ ಸಮುಚ್ಚಯಗಳು, ವಾಣಿಜ್ಯ ಕಟ್ಟಡಗಳು, ಮನೆಗಳು ಆದ ಹಿನ್ನೆಲೆಯಲ್ಲಿ ಹಾಗೆ ಬರುವ ನೀರಿನ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ. ಯಾಕೆಂದರೆ, ಮೇಲಿನ ಪ್ರದೇಶದಲ್ಲಿ ಬೋರ್‌ವೆಲ್‌ ಬಳಕೆ ಆರಂಭಿಸಿದ ಮೇಲೆ ಅಂತರ್ಜಲ ಮಟ್ಟವೂ ಇಳಿಕೆಯಾಯಿತು. ಆಗ ಒರತೆಯ ರೂಪದಲ್ಲಿ ಹರಿಯುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿ, ಎಪ್ರಿಲ್‌ ತಿಂಗಳು ಬರುವ ಹೊತ್ತಿಗೆ ಈ ತೂಬಿನಲ್ಲಿ ನೀರಿನ ಒರತೆ ಕಡಿಮೆ ಆಗುತ್ತದೆ. ಈಗಲೂ ಈ ಪ್ರದೇಶದಲ್ಲಿ ಜಲ ಮರುಪೂರಣ ಇತ್ಯಾದಿ ಕ್ರಮಗಳಿಂದ ಮತ್ತೆ ಅಂತರ್ಜಲ ಮಟ್ಟ ಹೆಚ್ಚಿಸಲು ಅವಕಾಶವಿದೆ. ಅದಾದರೆ ಎಪ್ರಿಲ್‌ ಸಂದರ್ಭದಲ್ಲೂ ಇಂದ್ರಾಣಿ ಹರಿಯಬಲ್ಲಳು.

ಈ ಬಾರಿ ಫೆಬ್ರವರಿಯಲ್ಲೇ ತೂಬಿನಲ್ಲಿ
ನೀರು ಕಡಿಮೆಯಾಗಿದೆ. ಆದರೆ ವಿಚಿತ್ರವೆಂದರೆ, ಹಾಗೆ ಬೀಳುವ ನೂರಾರು ಹನಿಗಳೇ ಸುತ್ತಲಿನ ತೋಟಗಳನ್ನು ಕಾಯುತ್ತಿವೆ ಎಂದರೆ ಅಚ್ಚರಿ ಎನಿಸಬಹುದು. ಆದರೂ ಸತ್ಯ. ಹಾಗಾದರೆ ಕೆಲವು ಹನಿಗಳೇ ಇಷ್ಟೊಂದು ಜನರಿಗೆ ಜಲ ಮೂಲವಾಗಿ ಪರಿಣಮಿಸಿರುವಾಗ ಒಂದುನದಿಯನ್ನು ಉಳಿಸಿಕೊಂಡಿದ್ದರೆ ಎಷ್ಟು ಚೆನ್ನಾಗಿ ರುತ್ತಿತ್ತು ಎಂಬುದು ಒಂದು ಬಾರಿ ಇಡೀ ನದಿ ಪಾತ್ರದಲ್ಲಿ ನಡೆದಾಗ ಅನುಭವಕ್ಕೆ ಬರುತ್ತದೆ.

ಇಲ್ಲಿಂದ ಮುಂದೆ ಮತ್ತೆರಡು ಉಪನದಿಗಳೂ ಸೇರಿ ಇಂದ್ರಾಣಿ ತೀರ್ಥ ನದಿಯಾಗಿ
ಸಾಗುತ್ತಾಳೆ. ಸುತ್ತಲೂ ನೂರಾರು ಎಕರೆ ಜಮೀನಿಗೆ ನೀರುಣಿಸುತ್ತಾ ಸಾಗುತ್ತಾಳೆ. ಅಂದ ಹಾಗೆ ಈ ನದಿ ಪಣಿಯಾಡಿವರೆಗೂ ಪರಿಶುದ್ಧಳೇ. ಅಲ್ಲಿನ್ನೂ ವರವಾಗಿಯೇ
ಇದ್ದಾಳೆ. ಅದರ ಬಳಿಕ ಶಾಪವಾಗಿ ಪರಿಣಮಿಸುತ್ತಾ ಸಾಗುತ್ತಾಳೆ.

ಒಳಚರಂಡಿ ನಿರ್ಮಿಸಿದಾಗಲೇ ಈ ವೆಟ್‌ವೆಲ್‌ ವ್ಯವಸ್ಥೆಯೂ ಜಾರಿಗೆ ಬಂದಿತು. ವಿಪರ್ಯಾಸವೆಂದರೆ, ಅಂದಿನಿಂದಲೂ ವೆಟ್‌ವೆಲ್‌ಗ‌ಳ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಲೇ ಇರಲಿಲ್ಲ. ಅಂದಿನಿಂದಲೂ ಒಂದೇ ಪಂಪ್‌ನಲ್ಲಿ ವೆಟ್‌ವೆಲ್‌ಗ‌ಳನ್ನು ನಿರ್ವಹಿಸಲಾಗುತ್ತಿತ್ತು. ಅಂದೂ ಜನರೇಟರ್‌ ಇರಲಿಲ್ಲ. ಆಗಲೂ ಒಮ್ಮೆ ಪಂಪ್‌ ಹಾಳಾದರೆ ತಿಂಗಳು ಗಟ್ಟಲೆ ಸರಿಯಾಗುತ್ತಿರಲಿಲ್ಲ. ನಿಜಕ್ಕೂ ಹೇಳಬೇಕೆಂದರೆ ಹೇಳುವವರೂ, ಕೇಳುವವರೇ ಸರಿಯಾಗಿ ಇರಲಿಲ್ಲ. ಇಂದಿಗೆ ಏನಾಗಿದೆ ಎಂದು ತಾಳೆ ಹಾಕಿ ನೋಡೋಣ. ಇಂದಿಗೂ ಎಲ್ಲ ವೆಟ್‌ ವೆಲ್‌ಗ‌ಳಲ್ಲಿ ಪರ್ಯಾಯ ಪಂಪ್‌ಗ್ಳಿಲ್ಲ. ಎಲ್ಲ ವೆಟ್‌ವೆಲ್‌ಗ‌ಳಲ್ಲಿ ಜನರೇಟರ್‌ಗಳಿಲ್ಲ. ಪಂಪ್‌ ಹಾಳಾದರೆ ತ್ಯಾಜ್ಯ ಅದಾಗಿಯೇ ನದಿಗೆ ಹರಿದು ಹೋಗುತ್ತದೆ. ವೆಟ್‌ವೆಲ್‌ ನಿರ್ವಹಣೆಗೆ ಸರಿಯಾದ ಸಿಬಂದಿ ಸಂಖ್ಯೆಯೇ ಇಲ್ಲ. ಇಪ್ಪತ್ತೆರಡು ವರ್ಷಗಳಲ್ಲಿ ಬಂದ ಪೌರಾಯುಕ್ತರಿಗೆ (ಈಗಿನವರನ್ನೂ ಸೇರಿಸಿ), ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇದೊಂದು ಸಮಸ್ಯೆಯಾಗಿಯೇ ತೋರಲಿಲ್ಲ.

ಉಡುಪಿ ನಗರಸಭೆಯು ದೀರ್ಘ‌ ನಿದ್ರೆಯಲ್ಲಿರುವುದು ಇಂದ್ರಾಣಿ ನದಿ ಕಲುಷಿತಗೊಳ್ಳುವುದಕ್ಕೆ ಮತ್ತು ಅದರಿಂದ ಆಗಿರುವ ಎಲ್ಲ ಅವಾಂತರಗಳಿಗೆ ಕಾರಣ. ಮೊತ್ತ ಮೊದಲು ದೀರ್ಘ‌ಕಾಲ ಇಲ್ಲಿಯೇ ಠಿಕಾಣಿ ಹೂಡಿರುವ ಅಧಿಕಾರಿಗಳು ಮತ್ತು ಸಿಬಂದಿಯನ್ನು ವರ್ಗಾಯಿಸಬೇಕು. ಮಧ್ಯವರ್ತಿಗಳನ್ನು ನಿಗ್ರಹಿಸಿ ನಾಗರಿಕರು ಮುಕ್ತವಾಗಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಅನುವು ಮಾಡಿಕೊಡಬೇಕು. ವೆಟ್‌ವೆಲ್‌ಗ‌ಳು, ಸಾರ್ವಜನಿಕ ಬಾವಿಗಳು, ಕೆರೆಗಳು, ಉದ್ಯಾನವನಗಳ ನಿರ್ವಹಣೆ, ಸಂರಕ್ಷಣೆಗಾಗಿ ಸ್ಥಳೀಯರ ಒಂದು ನಿಗಾವಣ ಕಮಿಟಿ ರಚಿಸಿದರೆ ಉತ್ತಮ.
-ಗುರುಪ್ರಸಾದ್‌ ಪೂಜಾರಿ, ಕಿನ್ನಿಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next