Advertisement

ಇಂದ್ರಾಳಿ: ಹೊಸ ರೈಲ್ವೇ ಸೇತುವೆಗೆ ಬಿಡದ ಗ್ರಹಣ; ಶೀಘ್ರ ಅನುಮೋದನೆ-ಕರಂದ್ಲಾಜೆ

11:59 AM Oct 17, 2022 | Team Udayavani |

ಉಡುಪಿ: ಇಂದ್ರಾಳಿ ಹೊಸ ರೈಲ್ವೇ ಸೇತುವೆ ಯೋಜನೆ ಸಂಬಂಧಿಸಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಬರೋಬ್ಬರಿ ಪಂಚವಾರ್ಷಿಕ ಯೋಜನೆಯತ್ತ ಮುಂದುವರಿಯುತ್ತಿದೆ. ಆಡಳಿತ ವ್ಯವಸ್ಥೆಯ ಗೊಂದಲ, ಇಲಾಖೆಗಳ ಸಂವಹನ ಕೊರತೆ, ನಿರ್ಲಕ್ಷ್ಯ, ಇಚ್ಛಾಶಕ್ತಿಯ ಕೊರತೆಗೆ ಹಿಡಿದ ಕೈಗನ್ನಡಿ ಇದು ಎಂಬ ಟೀಕೆ ಕೇಳಿ ಬರುತ್ತಿದೆ.

Advertisement

ಹಲವಾರು ವರ್ಷಗಳಿಂದ ಅನುದಾನದ ಕೊರತೆ ಇಲ್ಲ, ತಾಂತ್ರಿಕ ಸಮಸ್ಯೆ, ರೈಲ್ವೇ ಇಲಾಖೆ ಅಡ್ಡಿ ಮೊದಲಾದ ಕಾರಣಗಳನ್ನು ನೀಡುತ್ತ ಬರಲಾಗುತ್ತಿದೆ. ಬೃಹತ್‌ ಯೋಜನೆಗಳಿಗೆ ಕೆಲವೇ ದಿನಗಳಲ್ಲಿ ಅನುಮೋದನೆ ಸಿಗುವ ಕಾಲಘಟ್ಟದಲ್ಲಿ ಇನ್ನೂ ಸಹ 58 ಮೀಟರ್‌ ಸೇತುವೆ ಯೋಜನೆ ಪೂರ್ಣಗೊಳಿಸಲು ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿರುವುದು ಏಕೆ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.

ಹೊಸ ರೈಲ್ವೇ ಸೇತುವೆ ನಿರ್ಮಾಣವಾಗದೆ ಪ್ರಸ್ತುತ ಇಂದ್ರಾಳಿ ಸೇತುವೆ ರಸ್ತೆಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವುದು ಸಂಪೂರ್ಣ ಅವೈಜ್ಞಾನಿಕ ಕ್ರಮವಾಗಿದೆ. ರಸ್ತೆ ಸಾಕಷ್ಟು ಹದಗೆಟ್ಟಿರುವುದರಿಂದ ಬೇರೆ ದಾರಿಯಿಲ್ಲದ ಕಾರಣ ಅನಿವಾರ್ಯವಾಗಿ ಕೆಲಸವನ್ನು ನಡೆಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಸಂಚಾರ ದಟ್ಟಣೆಯ ನಡುವೆ ಕಾಮಗಾರಿ ಸುಗಮವಾಗಿ ಸಾಗಲು ಅಡ್ಡಿಯಾಗುತ್ತಿದೆ. ಇನ್ನೂ ಎರಡು ದಿನಗಳಲ್ಲಿ ಸೇತುವೆ ಮೇಲೆ ಕಾಂಕ್ರೀಟ್‌ ಕೆಲಸ ನಡೆಸುವಾಗ ಮತ್ತಷ್ಟು ತೊಂದರೆಯಾಗಲಿದೆ. ಅಲ್ಲದೆ ಎರಡು ರಸ್ತೆಗೆ ಕನೆಕ್ಟಿಂಗ್‌ ಮಾಡಿಕೊಡುವುದು ತೀರ ಕಷ್ಟಕರ. ಇದರಿಂದ ಮತ್ತಷ್ಟು ಟ್ರಾಫಿಕ್‌ ಸಮಸ್ಯೆ ಎದುರಾಗುತ್ತದೆ.

ಸಮಸ್ಯೆ ಮೂಲವೇ ಬೇರೆ;
ಇಂದ್ರಾಳಿ ಹೊಸ ರೈಲ್ವೇ ಸೇತುವೆ ನಿರ್ಮಿಸಲು ಹೆದ್ದಾರಿ ಸಚಿವಾಲಯ ಇನ್ನೂ ಹಣಕಾಸು ಅನು ಮೋದನೆಯನ್ನೂ ನೀಡಿಲ್ಲ ಎಂದು ಹೆದ್ದಾರಿಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. ಈ ಸೇತುವೆ ಅನುಮೋದನೆಗಾಗಿ ವಿಳಂಬವಾಗುತ್ತಿರುವ ನಡುವೆ ಜನರಿಗೆ ಓಡಾಟಕ್ಕೆ ಸಮಸ್ಯೆಯಾಗಬಾರದು ಎಂಬ ನೆಲೆಯಲ್ಲಿ ಪ್ರಸ್ತುತ ಇರುವ ಹಳೆ ಸೇತುವೆ ಮತ್ತು ರಸ್ತೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆರಂಭದಲ್ಲಿ ಹಳೆಯ ಸೇತುವೆಯಂತೆ 36 ಮೀಟರ್‌ ಉದ್ದದ ಸೇತುವೆ ಯೋಜನೆ ಸಿದ್ಧಪಡಿಸಲಾಗಿತ್ತು. ಅದರಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿಗೆ ಮುಂದಾದಾಗ ರೈಲ್ವೇ ಇಲಾಖೆ ತಮ್ಮ ಜಾಗದಲ್ಲಿ ಪಿಲ್ಲರ್‌ ಅಳವಡಿಸದಂತೆ, ಕಾಮಗಾರಿ ನಡೆಸದಂತೆ ಆಕ್ಷೇಪ ಮಾಡಿತ್ತು. ಸೇತುವೆ ಉದ್ದವನ್ನು ಹೆಚ್ಚಿಸುವಂತೆ ಸೂಚಿಸಿ ರೈಲ್ವೇ ಇಲಾಖೆಯಿಂದಲೇ ಹೊಸ ವಿನ್ಯಾಸವನ್ನು 36 ಮೀಟರ್‌ನಿಂದ 58 ಮೀಟರ್‌ಗೆ ಸಿದ್ಧಪಡಿಸಿದ್ದು, ಇದಕ್ಕೆ ರೈಲ್ವೇ ಸುರಕ್ಷತ ಪ್ರಾಧಿಕಾರವು ಒಪ್ಪಿಗೆ ಸೂಚಿಸಿತ್ತು. ಈ ವೇಳೆ ಬದಲಾದ ವಿನ್ಯಾಸದ ಡಿಪಿಆರ್‌ ಪ್ರಕಾರ ನಿರ್ಮಾಣ ವೆಚ್ಚ ದುಪ್ಪಟ್ಟಾಗಿತ್ತು.

ಅನಂತರ ಹೆದ್ದಾರಿ ಸಚಿವಾಲಯದ ಹಣಕಾಸು ಅನುಮೋದನೆಗೆ ಕಳುಹಿಸಲಾಗಿತ್ತು. ಉಡುಪಿಯಿಂದ ದಿಲ್ಲಿಗೆ ಎಂಜಿನಿಯರ್‌ಗಳು ಕಡತ ಹಿಡಿದು ಎಷ್ಟು ಓಡಾಡಿದರೂ ಇದುವರೆಗೆ ಹಣಕಾಸಿನ ಅನುಮೋದನೆ ದೊರೆಯದೆ ಮೂರ್ನಾಲ್ಕು ವರ್ಷಗಳು ಕಳೆದಿವೆ. ನಿರ್ಮಾಣವೆಚ್ಚ ದುಪ್ಪಟ್ಟಾಗಿರುವುದು ಸೇತುವೆ ನಿರ್ಮಾಣ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.

Advertisement

ಶೀಘ್ರ ಅನುಮೋದನೆ
ಇಂದ್ರಾಳಿ ರೈಲ್ವೇ ಬ್ರಿಡ್ಜ್ ಕಾಮಗಾರಿ ಸಂಬಂಧ ಈಗಾಗಲೇ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರ ಗಮನಕ್ಕೆ ತರಲಾಗಿದೆ. ಹೊಸದಾಗಿ ಹೋಗಿರುವ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ಸಿಗಲಿದೆ. ಇದಾದ ಅನಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ಮುಂದುವರಿಸಲಿದೆ. ರೈಲ್ವೇ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಮನ್ವಯದ ಕೊರತೆ ಹಾಗೂ ಕೆಲವು ತಾಂತ್ರಿಕ ಕಾರಣದಿಂದ ವಿಳಂಬ ಆಗುತ್ತಿದೆ. ರೈಲ್ವೇ ಇಲಾಖೆ ಹಾಗೂ ಪ್ರಾಧಿಕಾರದ ಅಧಿಕಾರಿಗಳು ಸೇರಿ ಕೂಡಲೇ ಸಮಸ್ಯೆ ಬಗೆಹರಿಸಬೇಕು.
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next