ಭೋಪಾಲ್: ಕಾಲೇಜು ಪ್ರಾಂಶುಪಾಲರ ಮೇಲೆ ಹಳೆ ವಿದ್ಯಾರ್ಥಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹೈದರಾಬಾದ್: ಬೀದಿ ನಾಯಿಗಳ ದಾಳಿಗೆ ಜೀವ ಕಳೆದುಕೊಂಡ 4 ವರ್ಷದ ಕಂದಮ್ಮ
ಇಂದೋರ್ ನ ಬಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಅಶುತೋಷ್ ಶ್ರೀವಾಸ್ತವ್ ಎಂಬಾತ ತನ್ನ ಅಂಕಪಟ್ಟಿ ಕೊಡಲು ವಿಳಂಬ ಮಾಡುತ್ತಿದ್ದಾರೆಂದು ಆಕ್ರೋಶಗೊಂಡು ಪ್ರಾಂಶುಪಾಲೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಿರುವುದಾಗಿ ವರದಿ ವಿವರಿಸಿದೆ.
ಬಿಎಂ ಕಾಲೇಜು ಪ್ರಿನ್ಸಿಪಾಲ್ ವಿಮುಕ್ತಾ ಶರ್ಮಾ (54ವರ್ಷ) ಅವರ ದೇಹ ಶೇ.90ರಷ್ಟು ಸುಟ್ಟು ಹೋಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿರುವುದಾಗಿ ಇಂದೋರ್ ಪೊಲೀಸ್ ವರಿಷ್ಠಾಧಿಕಾರಿ ಭಗವತ್ ಸಿಂಗ್ ವಿರ್ಡೇ ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣವೇ ಕಾಲೇಜಿನ ಸಿಬಂದಿಗಳು ಬೆಂಕಿ ನಂದಿಸಿ, ಪ್ರಾಂಶುಪಾಲರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆರೋಪಿ ಕಾಲೇಜು ಆವರಣದಿಂದ ಓಡಿ ಹೋಗಿದ್ದು, ಟಿಂಚ್ಚಾ ಫಾಲ್ಸ್ ನಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈ ಸಂದರ್ಭದಲ್ಲಿ ವಾಚ್ ಮನ್ ಆತನನ್ನು ತಡೆದಿರುವುದಾಗಿ ವರದಿ ವಿವರಿಸಿದೆ. ನಂತರ ವಾಚ್ ಮನ್ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದು, ಮಾರ್ಕ್ಸ್ ಕೊಡಲು ವಿಳಂಬ ಮಾಡುತ್ತಿದ್ದುದರಿಂದ ರೋಸಿ ಹೋಗಿ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.