ಜಕಾರ್ತಾ: ಜಪಾನಿನ ನೊಜೊಮಿ ಒಕುಹಾರಾ ಸವಾಲನ್ನು ಸುಲಭದಲ್ಲಿ ಮೆಟ್ಟಿನಿಂತ ಪಿ.ವಿ. ಸಿಂಧು “ಇಂಡೋನೇಶ್ಯ ಓಪನ್’ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲಿಗೆ ಲಗ್ಗೆ ಇರಿಸಿದ್ದಾರೆ. ಶುಕ್ರವಾರದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಅವರು ಒಕುಹಾರಾ ವಿರುದ್ಧ 21-14, 21-7 ಅಂಕಗಳ ಗೆಲುವು ಒಲಿಸಿಕೊಂಡರು.
ಸಿಂಧು ಹಾಗೂ ಪ್ರಬಲ ಆಟಗಾರ್ತಿ ಒಕುಹಾರಾ ನಡುವಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಭಾರತೀಯಳ ಆಕ್ರಮಣಕಾರಿ ಆಟದ ಮುಂದೆ ಒಕುಹಾರಾ ಸಂಪೂರ್ಣ ಮಂಕಾದರು. ಕೇವಲ 44 ನಿಮಿಷಗಳಲ್ಲಿ ಶರಣಾಗತಿ ಸಾರಿದರು.
ಮೊದಲ ಗೇಮ್‌ನಲ್ಲಿ 6-6 ಸಮಬಲ ಸಾಧಿಸಿದ್ದಷ್ಟೇ ಒಕುಹಾರಾ ಸಾಧನೆ. ಇಲ್ಲಿಂದ ಜಪಾನಿ ಆಟಗಾರ್ತಿ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡತೊಡಗಿದ ಸಿಂಧು ಮತ್ತೆ ಹಿಂದಿ ರುಗಿ ನೋಡಲಿಲ್ಲ. ಸಿಂಧು ಅವರ ಸೆಮಿಫೈನಲ್ ಎದುರಾಳಿ 2ನೇ ಶ್ರೇಯಾಂಕದ ಚೀನಿ ಆಟಗಾರ್ತಿ ಚೆನ್ ಯು ಫೀ.
ಕೆ. ಶ್ರೀಕಾಂತ್ ಪರಾಭವ
ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದ ಕೆ. ಶ್ರೀಕಾಂತ್ ದ್ವಿತೀಯ ಸುತ್ತಿನಲ್ಲಿ ಪರಾಭವಗೊಂಡು ಹೊರಬಿದ್ದಿದ್ದಾರೆ. ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಆ್ಯಂಗಸ್ ವಿರುದ್ಧ ಶ್ರೀಕಾಂತ್ 17-21, 19-21 ನೇರ ಗೇಮ್‌ಗಳಿಂದ ಪರಾಭವಗೊಂಡರು.
ಇಬ್ಬರ ನಡುವೆ ಸಮಬಲದ ಹೋರಾಟ ಕಂಡು ಬಂತು. ಆದರೆ ಫಿನಿಶಿಂಗ್ ಆಟದಲ್ಲಿ ಹಾಂಕಾಂಗ್ ಆಟಗಾರನೇ ಮೇಲುಗೈ ಸಾಧಿಸಿದರು. ವಿಶ್ವದ 9ನೇ ರ್‍ಯಾಂಕಿಂಗ್‌ನ ಶಟ್ಲರ್ ಕೆ. ಶ್ರೀಕಾಂತ್ ದ್ವಿತೀಯ ಗೇಮ್ ಗೆಲ್ಲುವ ಸೂಚನೆಯೊಂದನ್ನು ನೀಡಿದ್ದರು. ಆದರೆ ಈ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು.