ಜಕಾರ್ತಾ: ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಎಚ್.ಎಸ್. ಪ್ರಣಯ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಗುರುವಾರದ ದ್ವಿತೀಯ ಸುತ್ತಿನ ಮುಖಾಮುಖೀಯಲ್ಲಿ ಅವರು ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಆ್ಯಂಗಸ್ ವಿರುದ್ಧ 21-11, 21-18 ಅಂತರದ ಗೆಲುವು ಸಾಧಿಸಿದರು. ಇವರ ಹೋರಾಟ 41 ನಿಮಿಷಗಳ ತನಕ ಸಾಗಿತು. ಇದು ಲಾಂಗ್ ವಿರುದ್ಧ ಪ್ರಣಯ್ ಸಾಧಿಸಿದ 4ನೇ ಗೆಲುವು.
ಉಳಿದಂತೆ ಗುರುವಾರದ ಸ್ಪರ್ಧೆಗಳಲ್ಲಿ ಭಾರತ ಎರಡು ಸೋಲು ಕಂಡಿದೆ. ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮ, ವನಿತಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಆಟ ಕೊನೆಗೊಂಡಿದೆ.
ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸಮೀರ್ ವರ್ಮ ಅವರನ್ನು ವಿಶ್ವದ 5ನೇ ರ್‍ಯಾಂಕಿಂಗ್ ಆಟಗಾರ, ಮಲೇಷ್ಯಾದ ಲೀ ಜೀ ಜಿಯ 21-10, 21-13 ಅಂತರದಿಂದ ಸುಲಭದಲ್ಲಿ ಸೋಲಿಸಿದರು. ಇದು ಲೀ ವಿರುದ್ಧ ಆಡಿದ 7 ಪಂದ್ಯಗಳಲ್ಲಿ ಸಮೀರ್ ವರ್ಮ ಎದುರಿಸಿದ 5ನೇ ಸೋಲು. ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಚೀನದ ಅಗ್ರ ಶ್ರೇಯಾಂಕಿತ ಚೆನ್ ಕ್ವಿಂಗ್ ಚೆನ್-ಜಿಯಾ ಯಿ ಫಾನ್ ವಿರುದ್ಧ 16-21, 13-21 ಅಂತರದ ಆಘಾತಕ್ಕೆ ಸಿಲುಕಿದರು.