Advertisement

ಗಡಿ ಕಾಯಲು ಹೊರಟ ವನಿತೆಯರು

12:27 PM Aug 09, 2021 | Team Udayavani |

ಹೊಸದಿಲ್ಲಿ: ಭಾರತ-ಚೀನ ಗಡಿ (ಎಲ್‌ಎಸಿ) ಕಾವಲು ಕಾಯುವ ಇಂಡೋ-ಟಿಬೆಟಿಯನ್‌ ಗಡಿ ಪೊಲೀಸ್‌ ಪಡೆ(ಐಟಿಬಿಪಿ)ಯು ಇದೇ ಮೊದಲ ಬಾರಿಗೆ ತನ್ನ ಯುದ್ಧಸಂಬಂಧಿ ಘಟಕಕ್ಕೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ಸೇರ್ಪಡೆ ಮಾಡಿದೆ.

Advertisement

ಐಟಿಬಿಪಿ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ಉತ್ತೀರ್ಣರಾದ 53 ಸಿಬಂದಿಗೆ ರವಿವಾರ ಪ್ರಮಾಣ ವಚನ ಬೋಧಿಸಲಾಯಿತು. ಪ್ರಕೃತಿ ಹಾಗೂ ದೀಕ್ಷಾ ಹೆಸರಿನ ಇಬ್ಬರು ಮಹಿಳೆಯರು ಕೂಡ ತರಬೇತಿಯನ್ನು ಉಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಬ್ಬರನ್ನು ಅರೆ ಸೇನಾಪಡೆಯ ಪ್ರವೇಶ ಮಟ್ಟದ ಹುದ್ದೆಯಾದ ಸಹಾಯಕ ಕಮಾಂಡೆಂಟ್‌ ಹುದ್ದೆಗೆ ನೇಮಿಸಿಕೊಳ್ಳಲಾಗಿದೆ.

ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಹೊಂದಿರುವ ಪ್ರಕೃತಿಯ ತಂದೆ ಭಾರತೀಯ ವಾಯು ಪಡೆಯ ನಿವೃತ್ತ ಅಧಿಕಾರಿ. ಇನ್ನು ದೀಕ್ಷಾ ಅವರ ತಂದೆ ಕಮಲೇಶ್‌ ಕುಮಾರ್‌ ಐಟಿಬಿಪಿಯಲ್ಲಿ ಅಧಿಕಾರಿಯಾಗಿದ್ದಾರೆ. ಪ್ರಮಾಣವಚನ ಕಾರ್ಯಕ್ರಮದ ಅನಂತರ ಸಮವಸ್ತ್ರದಲ್ಲಿದ್ದ ತಂದೆ ಮಗಳಿಬ್ಬರು ಪರಸ್ಪರ ಸೆಲ್ಯೂಟ್‌ ಹೊಡೆದು, ಆಲಿಂಗಿಸಿಕೊಂಡಿದ್ದಾರೆ.

ಐಟಿಬಿಪಿ 2016ರಿಂದ ಮಹಿಳಾ ಸಿಬಂದಿಯನ್ನು ಪಡೆಗೆ ನೇಮಿಸಿಕೊಳ್ಳುತ್ತಿದೆ. ಯುಪಿಎಸ್‌ಸಿ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆ ಇರುತ್ತದೆ. ಈವರೆಗೆ ಸ್ಥಿರ ಶ್ರೇಣಿ (ಕಾನ್‌ಸ್ಟೆಬುಲರಿ ರ್‍ಯಾಂಕ್‌) ಹುದ್ದೆಗಳಿಗೆ ಮಾತ್ರ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ, ಯುದ್ಧಕ್ಕೆ ಸಂಬಂಧಿಸಿದ ಕಾರ್ಯಾಚರಣೆಗಳಲ್ಲೂ ಮಹಿಳೆಯರು ಸಕ್ರಿಯರಾಗಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next