ಅಮೃತಸರ: ಅಟ್ಟಾರಿ-ವಾಘಾ ಗಡಿಯ ಭಾರತ-ಪಾಕ್ ಜಂಟಿ ಚೆಕ್ ಪೋಸ್ಟ್ ನಲ್ಲಿ ಪಾಕಿಸ್ಥಾನದ ಅಧಿಕಾರಿಗಳು 200 ಭಾರತೀಯ ಮೀನುಗಾರರನ್ನು ಬಿಎಸ್ಎಫ್ ಅಧಿಕಾರಿಗಳಿಗೆ ಶನಿವಾರ ಹಸ್ತಾಂತರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಶನ್ ಮೂಲಕ ವಿತರಿಸಲಾದ “ತುರ್ತು ಪ್ರಯಾಣ ಪತ್ರ”ವನ್ನು ಬಳಸಿಕೊಂಡು ಎಲ್ಲ 200 ಭಾರತೀಯ ಮೀನುಗಾರರು ಅಟ್ಟಾರಿ-ವಾಘಾ ಗಡಿಯ ಭೂಸಾರಿಗೆ ಮಾರ್ಗದ ಮೂಲಕ ಭಾರತವನ್ನು ಪ್ರವೇಶಿಸಿದರು. ಅನಂತರ ಭಾರತೀಯ ವೈದ್ಯರ ತಂಡವು ಅವರ ವೈದ್ಯಕೀಯ ಪರೀಕ್ಷೆ ನಡೆಸಿತು. ಮೀನುಗಾರರು ಭಾರತದ ನೆಲವನ್ನು ಪ್ರವೇಶಿಸುತ್ತಿದ್ದಂತೆ ತಾಯ್ನಾಡಿಗೆ ಮುತ್ತಿಕ್ಕಿ ನಿಟ್ಟುಸಿರುಬಿಟ್ಟರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೀನುಗಾರಿಕೆ ನಡೆಸುವಾಗ ಪಾಕ್ ವಲಯಕ್ಕೆ ಪ್ರವೇಶಿಸಿದ್ದರಿಂದ ಭಾರತೀಯರು ಬಂಧನಕ್ಕೊಳಗಾಗಿದ್ದರು.