ಬೆಂಗಳೂರು: ರಾಜಕಾರಣಿಯಾಗಿ ಇಂದಿರಾ ಗಾಂಧಿಯವರು ಪರಿಸರಕ್ಕೆ ಸಂಬಂಧಿಸಿದಂತೆ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಆದರೆ, ಪರಸರವಾದಿಯಾಗಿ ತಮ್ಮ ನಿರ್ಧಾರಗಳಿಗೆ ಅವರೇ ಬೇಸರಗೊಂಡಿದ್ದರು ಎಂದು ಸಂಸದ ಜೈರಾಮ್ ರಮೇಶ್ ಅಭಿಪ್ರಾಯಪಟ್ಟರು.
ನಗರದ ಗಾಂಧಿಭವನದಲ್ಲಿ ಪ್ರೊ.ಕೆ. ಈ.ರಾಧಾಕೃಷ್ಣ ಅನುವಾದ ಮಾಡಿರುವ “ಇಂದಿರಾಗಾಂಧಿ – ಪ್ರಕೃತಿ ಸಾಂಗತ್ಯ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಆವರು, ಹಿರಿಯರ ಧರ್ಮೋ ರಕ್ಷತಿ ರಕ್ಷತಃ ಎಂಬ ಮಾತನ್ನು ಇಂದಿರಾ ಅವರು ಪ್ರಕೃತಿ ರಕ್ಷತಿ ರಕ್ಷತಃ ಎಂದು ಬದಲಾಯಿಸಿದ್ದರು ಎಂದು ಹೇಳಿದರು.
ಆಗ್ರಾದಿಂದ 40 ಕಿ.ಮೀ. ದೂರದಲ್ಲಿ ತೈಲ ನಿಕ್ಷೇಪ ತೆಗೆಯುವ ಹಾಗೂ ಕರ್ನಾಟಕದ ಕುದುರೆಮುಖ ಕಬ್ಬಿಣದ ಅದಿರು ತೆಗೆಯುವ ಯೋಜನೆಗಳಿಗೆ ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ಅವಕಾಶ ನೀಡಿದ್ದರು. ಆ ಯೋಜನೆಗಳಿಗೆ ರಾಜಕಾರಣಿಯಾಗಿ ಅವರು ಒಪ್ಪಿಗೆ ನೀಡಿದ್ದರಾದರೂ, ಪರಿಸರವಾದಿಯಾಗಿ ಅದರ ವಿರುದ್ಧ ಇದ್ದರು ಎಂದು ಹೇಳಿದರು.
ಇಂದಿರಾ ಹತ್ಯೆಗೂ ಮೊದಲು ಶ್ರೀನಗರದಲ್ಲಿನ ಬಣ್ಣ ಬದಲಿಸುವ “ಚಿನಾರ್’ ಮರಗಳನ್ನು ನೋಡಿದ್ದರು. ಅ.29ರಂದು ತಮ್ಮ ಸ್ನೇಹಿತರೊಬ್ಬರ ಪರಿಸರದ ಕುರಿತ ಪುಸ್ತಕದ ಕುರಿತು ಅಭಿಪ್ರಾಯ ಬರೆದಿದ್ದರು ಎಂದರು. ಕಾರ್ಯಕ್ರಮದಲ್ಲಿ ವಿಮರ್ಶಕ ಮನು ಚಕ್ರವರ್ತಿ ಸೇರಿದಂತೆ ಪ್ರಮುಖರು ಹಾಜರಿದ್ದರು.
ದೇವರಾಜ ಅರಸುವರಿಗೆ ಪತ್ರ: ಬೀದರ್‌ನ 16 ಕಂಬಗಳ ಮಸೀದಿ ತೆರವುಗೊಳಿಸುವ ಸಂಬಂಧ 1973ರಲ್ಲಿ ದೇವರಾಜ ಅರಸು ಅವರಿಗೆ ಪತ್ರ ಬರೆದಿದ್ದ ಇಂದಿರಾಗಾಂಧಿ ಅವರು, ಪಾರಂಪರಿಕ ಕಟ್ಟಡವನ್ನು ತೆರವುಗೊಳಿಸಿದಂತೆ ತಿಳಿಸಿದ್ದರು. ಪ್ರಾಕೃತಿಕವಾಗಿ ಬಂದಂತಹ ಯಾವುದೇ ಸ್ಥಳಗಳು ರಾಷ್ಟ್ರೀಯ ಆಸ್ತಿಯಾಗಲಿದ್ದು, ಯಾವುದೇ ಒಂದು ಧರ್ಮಕ್ಕೆ ಅದನ್ನು ಸೀಮಿತವಾಗಬಾರದು.
ಅದು ದೇವಾಲಯವಿರಬಹುದು, ಮಸೀದಿಯಿರಬಹುದು, ಚರ್ಚ್ ಇರಬಹುದು. ಎಲ್ಲರಿಗೂ ಲಭ್ಯವಾಗುವಂತಿರಬೇಕು ಎಂದು ಇಂದಿರಾ ಅಭಿಪ್ರಾಯಪಟ್ಟಿದ್ದರು. ಅವರು ಬರೆದ ಪತ್ರವನ್ನು ಪ್ರತಿಯೊಬ್ಬ ರಾಜಕಾರಣಿಯೂ ಓದಬೇಕಾಗಿದೆ ಎಂದು ಸಂಸದ ಜೈರಾಮ್ ರಮೇಶ್ ಸಲಹೆ ನೀಡಿದರು.
ಅನುವಾದ ಎಂಬುದು ಎಣ್ಣೆ ರುಚಿಯಿಂದ ತುಪ್ಪದ ರುಚಿ ನೀಡುವಂತಿರಬೇಕೇ ಹೊರತು ತುಪ್ಪದ ರುಚಿಯಿಂದ ಎಣ್ಣೆಯ ರುಚಿ ನೀಡಬಾರದು. ಕಳೆದ 25 ವರ್ಷಗಳಲ್ಲಿ 300ಕ್ಕೂ ಅಧಿಕ ಪುಸ್ತಕಗಳನ್ನು ಓದಿದ್ದು, “ಇಂದಿರಾ ಗಾಂಧಿ – ಎ ಲೈಫ್ ಇನ್ ನೇಚರ್’ ಕೃತಿ ಅತ್ಯುತ್ತಮವಾಗಿದೆ. ಪ್ರಕೃತಿಗೆ ಮೊದಲ ಆದ್ಯತೆ ನೀಡಬೇಕೆಂಬ ಸಂದೇಶವನ್ನು ಪುಸ್ತಕ ಹೊಂದಿದೆ.
-ಎಂ.ಎನ್.ವೆಂಕಟಾಚಲಯ್ಯ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ