Advertisement

ಟಿನ್‌ ಶೆಡ್‌ನ‌ಲ್ಲಿ ಇಂದಿರಾ ವಸತಿ ಶಾಲೆ

03:41 PM Aug 06, 2019 | Suhan S |

ಸಿರವಾರ: ತಾಲೂಕಿನ ಕಲ್ಲೂರು ಗ್ರಾಮದ ಹೊರವಲಯದ ಬಾಲಾಜಿ ಕ್ಯಾಂಪ್‌ನಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆ ಟಿನ್‌ ಶೆಡ್‌ನ‌ಲ್ಲಿ ನಡೆಯುತ್ತಿದ್ದು, ಕಾಯಂ ಶಿಕ್ಷಕರಿಲ್ಲದ್ದರಿಂದ ಅತಿಥಿ ಶಿಕ್ಷಕರೇ ಶಾಲೆಗೆ ಆಸರೆಯಾಗಿದ್ದಾರೆ.

Advertisement

ರಾಜ್ಯ ಸರ್ಕಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನೆನಪಿಗಾಗಿ 2017-18ನೇ ಸಾಲಿನಲ್ಲಿ ಕೋಟ್ಯಂತರ ಅನುದಾನ ಬಿಡುಗಡೆ ಮಾಡಿ ಪ್ರತಿ ಹೋಬಳಿಯಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಗಳನ್ನು ಆರಂಭಿಸಿದೆ. ಆದರೆ ಶಾಲೆಗಳಿಗೆ ಸರಿಯಾದ ಕಟ್ಟಡ ಸೌಲಭ್ಯ ಇಲ್ಲ. ಶಿಕ್ಷಕರು, ಸಿಬ್ಬಂದಿಗಳನ್ನು ನೇಮಕ ಮಾಡಿಲ್ಲ. ಹೀಗಾಗಿ ಟಿನ್‌ ಶೆಡ್‌ನ‌ಲ್ಲೇ ಶಾಲೆ ನಡೆಸಲಾಗುತ್ತಿದೆ. ಅತಿಥಿ ಶಿಕ್ಷಕರಿಂದಲೇ ಮಕ್ಕಳಿಗೆ ಪಾಠ ಮಾಡಿಸಲಾಗುತ್ತಿದೆ.

ಟಿನ್‌ಶೆಡ್‌ನ‌ಲ್ಲಿ ಶಾಲೆ: ಇಂದಿರಾ ಗಾಂಧಿ ವಸತಿ ಶಾಲೆ ಕಳೆದ 3 ವರ್ಷಗಳಿಂದ ಟಿನ್‌ಶೆಡ್‌ನ‌ಲ್ಲಿ ನಡೆಯುತ್ತಿದೆ. ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಮಕ್ಕಳು ಬೆಂದರೆ, ಮಳೆಗಾಲದಲ್ಲಿ ಮಳೆ ರಭಸದ ಶಬ್ಧ ಮತ್ತು ಚಳಿಗೆ ಮಕ್ಕಳು ನಲುಗುವಂತಾಗಿದೆ.

ಅತಿಥಿ ಶಿಕ್ಷಕರೇ ಆಧಾರ: ಶಾಲೆಯಲ್ಲಿ ಒಟ್ಟು 8 ಜನ ಶಿಕ್ಷಕರಿದ್ದು ಕಾಯಂ ಮುಖ್ಯ ಶಿಕ್ಷಕರನ್ನು ಹೊರತುಪಡಿದರೆ ಉಳಿದ 7 ಜನ ಅತಿಥಿ ಶಿಕ್ಷಕರಿದ್ದಾರೆ. ರಾಜ್ಯ ಸರ್ಕಾರ ಕಾಯಂ ಶಿಕ್ಷಕರ ನೇಮಕಾತಿ ಮಾಡಬೇಕೆಂದು ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ.

ಕೊಠಡಿಗಳ ಕೊರತೆ: ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಒಟ್ಟು 150 ವಿದ್ಯಾರ್ಥಿಗಳಿದ್ದು ಒಂದೊಂದು ತರಗತಿಗೆ 50 ವಿದ್ಯಾರ್ಥಿಗಳಿದ್ದಾರೆ. ಇರುವ ದೊಡ್ಡ ಟಿನ್‌ ಶೆಡ್‌ನ‌ಲ್ಲಿ ತರಗತಿಗಳಿಗೆ ಹಾಗೂ ವಸತಿ ನಿಲಯಕ್ಕೆ ಭಾಗಗಳನ್ನು ಮಾಡಿರಿಂದ ಕೊಠಡಿಗಳು ಚಿಕ್ಕದಾಗಿವೆ. ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಿದ್ದಾರೆ. ವಸತಿ ನಿಲಯದಲ್ಲಿ ಟ್ರಂಕ್‌ಗಳು, ಹಾಸಿಗೆಗಳು ಇರುವುದರಿಂದ ಮಲಗಲು ಸ್ಥಳವಿಲ್ಲದೆ ಇರುವುದರಲ್ಲಿ ವಾಸಿಸಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳದ್ದಾಗಿದೆ.

Advertisement

ಸಾಂಕ್ರಾಮಿಕ ಕಾಯಿಲೆ ಭೀತಿ: ವಸತಿ ಶಾಲೆ ಕ್ಯಾಂಪ್‌ನಲ್ಲಿದ್ದು ಸುತ್ತಲೂ ಹೊಲಗದ್ದೆಗಳಿವೆ, ಜಾಲಿಗಿಡಗಳು ಬೆಳೆದಿವೆ. ಇನ್ನು ಮಳೆಗಾಲ ಇರುವುದರಿಂದ ಗದ್ದೆಯಲ್ಲಿ ನೀರು ನಿಂತು ಕ್ರಿಮಿ ಕೀಟಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ವಿದ್ಯಾರ್ಥಿಗಳಿದ್ದಾರೆ.

ಬಿರುಕು ಬಿಟ್ಟ ಶೌಚಾಲಯ: ಇನ್ನು ಈ ಶಾಲೆಯಲ್ಲಿನ ಶೌಚಾಲಯಗಳು ಬಿರುಕು ಬಿಟ್ಟಿದ್ದು, ವಿದ್ಯಾರ್ಥಿಗಳು ಶೌಚಕ್ಕೆ ತೆರಳಲು ಹಿಂದೇಟು ಹಾಕುವಂತಾಗಿದೆ. ಇದರಿಂದಾಗಿ ಹೊರಗಡೆ ಶೌಚಕ್ಕೆ ತೆರಳುತ್ತೇವೆ ಎನ್ನುತ್ತಾರೆ ವಸತಿ ನಿಲಯದ ವಿದ್ಯಾರ್ಥಿಗಳು. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನಹರಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಕಟ್ಟಡದ ವ್ಯವಸ್ಥೆ ಮಾಡಿಕೊಡಬೇಕಾಗಿದೆ.

ಸರ್ಕಾರ ವಸತಿ ಶಾಲೆಯನ್ನು ಇಲ್ಲಿಯೇ ನಡೆಸಲು ಆದೇಶಿಸಿದ್ದರಿಂಧ 3 ವರ್ಷಗಳಿಂದ ಟಿನ್‌ ಶೆಡ್‌ನ‌ಲ್ಲೇ ಶಾಲೆಯನ್ನು ನಡೆಸಲಾಗುತ್ತಿದೆ. ಒಂದು ವೇಳೆ ಸರ್ಕಾರ ಬೇರೆಡೆಗೆ ವರ್ಗಾವಣೆ ಮಾಡಿದಲ್ಲಿ ಶಾಲೆಯನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು.•ಕವಿತಾ, ಮುಖ್ಯ ಶಿಕ್ಷಕಿ, ಇಂದಿರಾಗಾಂಧಿ ವಸತಿ ಶಾಲೆ, ಕಲ್ಲೂರು.

ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿನ ಸಮಸ್ಯೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಯೋಜನೆ ರೂಪಿಸಲಾಗುವುದು.•ರಾಜಾ ವೆಂಕಟಪ್ಪ ನಾಯಕ,ಶಾಸಕರು ಮಾನ್ವಿ

 

•ಮಹೇಶ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next