Advertisement

ಇಂದಿರಾ ಕ್ಯಾಂಟಿನ್‌ಗೆ ಬಂತು ಟಿಕ್ಕರ್‌ ಮೆಷಿನ್‌

11:24 AM Nov 19, 2017 | |

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿನ ಆಹಾರ ವಿತರಣೆಯಲ್ಲಿ ಪಾರದರ್ಶಕತೆಯೊಂದಿಗೆ ಎಷ್ಟು ಜನರಿಗೆ ಆಹಾರ ಲಭ್ಯವಿದೆ ಎಂಬ ಮಾಹಿತಿ ನೀಡುವ “ಟಿಕ್ಕರ್‌ ಮೆಷಿನ್‌’ಗಳನ್ನು (ಮಾಹಿತಿ ಫ‌ಲಕ) ಅಳವಡಿಸಲು ಬಿಬಿಎಂಪಿ ಮುಂದಾಗಿದೆ. 

Advertisement

ಕ್ಯಾಂಟೀನ್‌ಗಳಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ಆಹಾರ ಪೂರೈಸುತ್ತಿಲ್ಲ. ಜತೆಗೆ ಕಡಿಮೆ ಜನರಿಗೆ ತಿಂಡಿ-ಊಟ ವಿತರಿಸಲಾಗುತ್ತದೆ ಎಂದು ಪ್ರತಿಪಕ್ಷ ಆರೋಪಿಸಿತ್ತು. ಹೀಗಾಗಿ ಪಾರದರ್ಶಕತೆ ತರಲು ಪಾಲಿಕೆ ಎಲ್ಲಾ ಕ್ಯಾಂಟೀನ್‌ಗಳಲ್ಲಿ ಟಿಕ್ಕರ್‌ ಮೆಷಿನ್‌ ಅಳವಡಿಕೆಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಯಂತ್ರದಿಂದ ಪ್ರತಿವ್ಯಕ್ತಿಗೆ ಟೋಕನ್‌ ನೀಡಿದ ಕೂಡಲೇ ಆಯಾ ಕ್ಯಾಂಟೀನ್‌ಗಳಲ್ಲಿ ನಿಗದಿಪಡಿಸಿರುವ ಆಹಾರದ ಪ್ರಮಾಣ(ಪ್ಲೇಟ್‌ಗಳ ಸಂಖ್ಯೆ) ಕಡಿಮೆಯಾಗಲಿದೆ. ಇದರಿಂದಾಗಿ ಕ್ಯಾಂಟಿನ್‌ನಲ್ಲಿ ಲಭ್ಯವಿರುವ ಆಹಾರದ ಪ್ರಮಾಣ( ಪ್ರತಿ ವ್ಯಕ್ತಿಯ) ಮಾಹಿತಿ ಪ್ರದರ್ಶನವಾಗಲಿದೆ. ಇದರಿಂದಾಗಿ ಸಾರ್ವಜನಿಕರು ಸರದಿಯಲ್ಲಿ ನಿಲ್ಲುವುದು ತಪ್ಪಲಿದೆ.  

ಬೆಂಗಳೂರಿನಾದ್ಯಂತ ಇರುವ 151 ಕ್ಯಾಂಟೀನ್‌ಗಳಲ್ಲಿಯೂ “ಟಿಕ್ಕರ್‌ ಮೆಷಿನ್‌’ ಅಳವಡಿಕೆಗೆ ಪಾಲಿಕೆ ಮುಂದಾಗಿದೆ. ಈವರೆಗೆ 110 ಕ್ಯಾಂಟೀನ್‌ಗಳಲ್ಲಿ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಸೋಮವಾರದ ವೇಳೆಗೆ ಉಳಿದ 41 ಕ್ಯಾಂಟೀನ್‌ಗಳಲ್ಲಿ ಮೆಷಿನ್‌ ಅಳವಡಿಕೆ ಮಾಡಲಾಗುವುದು ಎಂದು ಪಾಲಿಕೆ ಮಾಹಿತಿ ನೀಡಿದೆ. 

ಸಿಬ್ಬಂದಿಗಾಗಿ ಆ್ಯಪ್‌: ಪ್ರತಿ ಅಡುಗೆ ಮನೆಯಿಂದ ಕ್ಯಾಂಟೀನ್‌ಗಳಿಗೆ ರವಾನೆಯಾಗುವ ಆಹಾರ ಪ್ರಮಾಣ ಹಾಗೂ ವಿತರಣೆ ಪ್ರಮಾಣ ತಿಳಿಯಲು ಅಧಿಕಾರಿಗಳು “ಇಂದಿರಾ ಕ್ಯಾಂಟೀನ್‌ ಮಾನಿಟರಿಂಗ್‌ ಆ್ಯಪ್‌’ ಅಭಿವೃದ್ಧಿಪಡಿಸಿದ್ದಾರೆ. ಅಡುಗೆ ಮನೆಯಿಂದ ಪ್ರತಿ ಕ್ಯಾಂಟೀನ್‌ಗೆ ಆಹಾರ ಪೂರೈಕೆಗೆ ಮೊದಲು ಆಹಾರ ತೂಕ ಹಾಕಬೇಕು. ಅಲ್ಲದೆ, ಕ್ಯಾಂಟೀನ್‌ಗಳಿಗೆ ಆಹಾರ ಬಂದ ನಂತರವೂ ಅಲ್ಲಿನ ಸಿಬ್ಬಂದಿ ಆಹಾರ ತೂಕ ಹಾಕಿ ಅದರ ಫೋಟೋ ಆ್ಯಪ್‌ಗೆ ಅಪ್‌ಲೋಡ್‌ ಮಾಡಬೇಕು. 

Advertisement

ತೂಕ – ಅಳತೆ ಸಾಧನ: ಕ್ಯಾಂಟೀನ್‌ಗಳಿಗೆ ಆಹಾರ ಕಳುಹಿಸುವ ಮೊದಲು ತೂಕ ಅಳತೆ ಮಾಡಲಾಗುತ್ತದೆ. ಈ ಆ್ಯಪ್‌ನಿಂದಾಗಿ ಗುತ್ತಿಗೆದಾರರು ಎಷ್ಟು ಜನರಿಗೆ ಆಹಾರ ಪೂರೈಕೆ ಮಾಡಿದ್ದಾರೆ ಎಂಬ ನಿಖರ ಮಾಹಿತಿ ತಿಳಿಯಲಿದೆ. ಈ ಮಾಹಿತಿ ಆಧರಿಸಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲಾಗುತ್ತದೆ. ಈವರೆಗೆ ಸುಮಾರು 80 ಕ್ಯಾಂಟೀನ್‌ಗಳಿಗೆ ತೂಕ ಅಳತೆ ಸಾಧನ ರವಾನಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಸಿಬ್ಬಂದಿಗೆ ಅಗತ್ಯ ತರಬೇತಿ: ಇಂದಿರಾ ಕ್ಯಾಂಟೀನ್‌ ಮಾನಿಟರಿಂಗ್‌ ಆ್ಯಪ್‌ ಕುರಿತು ಶನಿವಾರ ಕ್ಯಾಂಟೀನ್‌ ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಮಲ್ಲೇಶ್ವರ ಐಪಿಪಿ ಭವನದಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು. ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಮನೋಜ್‌ ರಾಜನ್‌ ಸಿಬ್ಬಂದಿಗೆ ತಿಳಿಸಿಕೊಟ್ಟರು. 

ಇಂದಿರಾ ಗಾಂಧಿ ಜನ್ಮದಿನ ಪ್ರಯುಕ್ತ ಮೈಸೂರ್‌ಪಾಕ್‌, ಲಡ್ಡು ವಿತರಣೆ: ಭಾನುವಾರ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಪಾಲಿಕೆ ಎಲ್ಲಾ 151 ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನದ ಊಟದೊಂದಿಗೆ ಸಿಹಿ ಹಂಚಲು ಮೇಯರ್‌ ಆರ್‌.ಸಂಪತ್‌ರಾಜ್‌ ಆದೇಶಿಸಿದ್ದಾರೆ. ಅದರಂತೆ 151 ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನ ಊಟದೊಂದಿಗೆ ಮೈಸೂರು ಪಾಕ್‌, ಲಡ್ಡು ನೀಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದ್ದಾರೆ. 

ಇಂದಿರಾ ಕ್ಯಾಂಟೀನ್‌ ಆಹಾರ ವಿತರಣೆಯಲ್ಲಿ ಪಾರದರ್ಶಕತೆ ತರಲು ಪ್ರತಿ ಕ್ಯಾಂಟೀನ್‌ನಲ್ಲಿಯೂ “ಟಿಕ್ಕರ್‌ ಮೆಷಿನ್‌’ ಅಳವಡಿಕೆ ಆರಂಭಿಸಲಾಗಿದೆ. ಕ್ಯಾಂಟೀನ್‌ಗಳಲ್ಲಿ ಎಷ್ಟು ಜನರಿಗೆ ಆಹಾರ ಲಭ್ಯವಿದೆ ಎಂಬ ಮಾಹಿತಿ ಅಂಕಿಯಲ್ಲೇ ತಿಳಿಯಲಿದೆ. ಎಲ್ಲಾ ಕ್ಯಾಂಟೀನ್‌ಗಳಲ್ಲಿಯೂ ಆಹಾರ ತೂಕ ಅಳತೆ ಯಂತ್ರಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. 
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next