Advertisement

ಬಿಸಿಲ ತಾಪ ತಾಳದೆ ಕುಸಿದು ಬಿದ್ದ ವಿದ್ಯಾರ್ಥಿಗಳು: ಉತ್ತಮ ಶಿಕ್ಷಣ ಊಟಕ್ಕಾಗಿ ಮಕ್ಕಳ ಆಗ್ರಹ

07:06 PM Aug 17, 2022 | Team Udayavani |

ವಾಡಿ: ಕಳೆಪೆ ಊಟ ಹಾಗೂ ಕೊಳಕು ವಸತಿ ಕಟ್ಟಡದ ದುಸ್ಥಿತಿ ಖಂಡಿಸಿ ಸ್ಥಳೀಯ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

Advertisement

ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿ ಬುಧವಾರ ಬೀದಿಗಿಳಿದ ಮಕ್ಕಳು ಅಧಿಕಾರಿಗಳು ಸ್ಥಳಕ್ಕಾಗಮಿಸುವಲ್ಲಿ ತೋರಿದ ವಿಳಂಬ ನೀತಿಗೆ ಆಕ್ರೋಶಗೊಂಡು ದಿಢೀರ್ ರಸ್ತೆ ತಡೆಗೆ ಮುಂದಾದ ಪ್ರಸಂಗ ನಡೆಯಿತು. ಸತತ ಎರಡು ತಾಸು ಬಿಸಿಲಿನಲ್ಲಿ ಕುಳಿತು ಘೋಷಣೆ ಕೂಗುವ ಮೂಲಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತಮ್ಮ ಸಿಟ್ಟಿ ಪ್ರದರ್ಶಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ನಗರ ಸಮಿತಿ ಅಧ್ಯಕ್ಷ ವೆಂಕಟೇಶ ದೇವದುರ್ಗಾ, ವಾಡಿ ನಗರದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಇಂದಿರಾ ಗಾಂಧಿ ವಸತಿ ಶಾಲೆ ಕರದಾಳ ಗ್ರಾಮಕ್ಕೆ ಸೇರಿದ್ದಾಗಿದೆ. ಕರದಾಳದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣವಾಗಿದ್ದರೂ ಕೂಡ ಮಕ್ಕಳನ್ನು ಅಲ್ಲಿಗೆ ಸ್ಥಳಾಂತರಿಸದೆ ಕಳೆದ ನಾಲ್ಕು ವರ್ಷಗಳಿಂದ ನರಕದ ಕಟ್ಟಡದಲ್ಲಿ ಕುರಿಗಳಂತೆ ಕೂಡಿಡಲಾಗಿದೆ. ಕಟ್ಟಡ ಸೋರುತ್ತಿದೆ. ವಿದ್ಯುತ್ ಸಂಪರ್ಕ ಸಮರ್ಪಕವಾಗಿಲ್ಲ. ಹಲವು ಕೋಣೆಗಳಿಗೆ ಫ್ಯಾನ್ ಅಳವಡಿಸಲಾಗಿಲ್ಲ. ಮಲಗುವ ಪಡಸಾಲೆ ಉಸುಕು ಧೂಳಿನಂದ ಕೂಡಿದೆ. ಬಾಲಕಿಯರ ವಸತಿ ಕೋಣೆಗಳಿಗೆ ಬಾಗಿಲು ಮುರಿದು ವರ್ಷ ಕಳೆದರೂ ದುರಸ್ಥಿ ಮಾಡಿಸಲಾಗಿಲ್ಲ. ಶೌಚಾಲಯಗಳ ದುಸ್ಥಿತಿ ಕೇಳುವಂತಿಲ್ಲ. ಸೊಳ್ಳೆಕಾಟ ತಾಳದೆ ಅಭ್ಯಾಸಕ್ಕೆ ಹೊಡೆತ ಬಿದ್ದಿದೆ. ಊಟದ ವ್ಯವಸ್ಥೆಯೂ ಸರಿಯಾಗಿಲ್ಲ. ಅಡುಗೆಗೆ ಮಕ್ಕಳ ಸಹಾಯ ಪಡೆಯಲಾಗುತ್ತಿದೆ. ಹುಳು ಮತ್ತು ಹರಳು ತುಂಬಿದ ಅಕ್ಕಿಗಳನ್ನೇ ಅನ್ನ ಮಾಡಲಾಗುತ್ತಿದೆ. ಶಿಕ್ಷಣ ಪಡೆಯಲು ತರಗತಿ ಕೋಣೆಗಳು ಉತ್ತಮ ಸ್ಥಿತಿಯಲ್ಲಿಲ್ಲ. ಶಿಕ್ಷಕರ ಕೊರತೆಯಿದೆ. ನೂರಾರು ಸಮಸ್ಯೆಗಳ ಮಧ್ಯೆ ಶಿಕ್ಷಣಕ್ಕಾಗಿ ಬಂದಿರುವ ಬಡ ಮಕ್ಕಳ ಗೋಳಾಟ ಯಾರೂ ಕೇಳುತ್ತಿಲ್ಲ ಎಂದು ಆರೋಪಿಸಿದರು. ಕೂಡಲೇ ಎಲ್ಲಾ ವಿದ್ಯಾರ್ಥಿಗಳನ್ನು ಕರದಾಳ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಕಳಪೆ ಊಟ ನೀಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಶಿಕ್ಷಕರ ಕೊರತೆ ನೀಗಿಸಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಸವಾಲ್: ಕತ್ತಲು ಕೋಣೆಗಳಲ್ಲಿ ನಾವು ಹೇಗೆ ಮಲಗಬೇಕು ಮತ್ತು ಅಭ್ಯಾಸ ಮಾಡಬೇಕು?. ಊಟದಲ್ಲಿ ಹರಳು ಹುಳುಗಳು ಕಂಡರೆ ಅದನ್ನು ಹೇಗೆ ತಿನ್ನಬೇಕು?. ದುರ್ವಾಸನೆ ಹರಡುವ ಶೌಚಾಲಯದ ನೀರು ತರಗತಿ ಕೋಣೆಗೆ ಮತ್ತು ವಸತಿ ಕೋಣೆಗೆ ಹರಿದು ಬರುತ್ತವೆ ಏನು ಮಾಡಬೇಕು?. ಸಮರ್ಪಕವಾಗಿ ಪಠಗಳೇ ನಡೆಯುತ್ತಿಲ್ಲ. ಹತ್ತನೇ ತರಗತಿಯ ಪರೀಕ್ಷೆ ಹೇಗೆ ಬರೆಯಬೇಕು?. ನಾವೂ ನಿಮ್ಮ ಮಕ್ಕಳಂತೆ ಅಲ್ವಾ ಸರ್? ಬಡವರ ಮಕ್ಕಳ ಶಿಕ್ಷಣ ಇಷ್ಟೊಂದು ಕಳೆಪೆ ಏಕೆ? ನಾವು ಚೆನ್ನಾಗಿ ಓದುತ್ತಿದ್ದೇವೆ ಎಂದು ನಮ್ಮ ಹೆತ್ತವರು ಅಂದುಕೊಳ್ಳುತ್ತಿದ್ದಾರೆ. ನಮ್ಮ ಕಷ್ಟ ಕೇಳಿದರೆ ನೊಂದುಕೊಳ್ಳುತ್ತಾರೆ. ನಾವೇನು ಪಾಪ ಮಾಡಿದ್ದೇವೆ ಸರ್? ನಮ್ಮನ್ನೇಕೆ ಈ ನರಕದಲ್ಲಿ ಕೂಡಿಟ್ಟಿದ್ದೀರಿ? ಹೀಗೆ ಪ್ರಶ್ನೆಗಳ ಸುರಿಮಳೆ ಸುರಿಸುವ ಮೂಲಕ ಸ್ಥಳಕ್ಕಾಗಮಿಸಿದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಜಿಲ್ಲಾ ಸಮನ್ವಯಾಧಿಕಾರಿ ಶಿವರಾಮ ಚವ್ಹಾಣ ಅವರಿಗೆ ಸವಾಲು ಹಾಕಿದರು. ಇದಕ್ಕೆ ತಾಳ್ಮೆಯಿಂದ ಉತ್ತರಿಸಿದ ಅಧಿಕಾರಿ ಶಿವರಾಮ, ನಿಮ್ಮ ಕಷ್ಟ ನನಗೆ ಅರ್ಥವಾಗಿದೆ. ನಾನು ತಡವಾಗಿ ಬಂದಿದ್ದಕ್ಕೆ ಕ್ಷಮೆಯಿರಲಿ. ಶಾಸಕ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿ ನಾಲ್ಕು ದಿನದಲ್ಲಿ ಶಾಲೆಯನ್ನು ಕರದಾಳ ಗ್ರಾಮದ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡುತ್ತೇನೆ. ಊಟದ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೆ ಇಂದಿನಿಂದಲೇ ಹೊಸ ವಾರ್ಡ್ ನ ನೇಮಿಸುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಪ್ರತಿಭಟನಾ ನಿರತ ನೂರಾರು ಮಕ್ಕಳಲ್ಲಿ ಮೂವರು ವಿದ್ಯಾರ್ಥಿಗಳು ಬಿಸಿಲ ತಾಪಕ್ಕೆ ಕುಸಿದು ಬಿದ್ದ ಘಟನೆ ನಡೆಯಿತು. ತಕ್ಷಣ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

Advertisement

ಎಐಡಿಎಸ್‌ಒ ಮುಖಂಡರಾದ ಸಿದ್ಧಾರ್ಥ ಪರತೂರಕರ, ಸಿದ್ದರಾಜ ಮದ್ರಿಕಿ, ಶಿವುಕುಮಾರ ಆಂದೋಲಾ, ವಿಠ್ಠಲ್ ರಾಠೋಡ, ಈರಣ್ಣ ಇಸಬಾ, ಶರಣು ಹೇರೂರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ರಸ್ತೆ ತಡೆ ಚಳುವಳಿಯಿಂದಾಗಿ ಎರಡು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next