ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಇಂದಿರಾ ಕ್ಯಾಂಟೀನ್‌ದಲ್ಲಿ ಕಳೆದ ಐದು ದಿನಗಳಿಂದ ವಿದ್ಯುತ್ ಇಲ್ಲದೇ ಕ್ಯಾಂಟೀನ್ ಬಂದ್ ಆಗುವ ಸ್ಥಿತಿಗೆ ತಲುಪಿದೆ. ಕಳೆದ ಕೆಲವು ತಿಂಗಳ ಹಿಂದೆ ಆರಂಭಗೊಂಡ ಇಂದಿರಾ ಕ್ಯಾಂಟೀನ್ ಕಳೆದ
ಹಲವು ತಿಂಗಳಿಂದ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುವಂತಾಗಿದೆ.
ಆರಂಭದಿಂದ ಇಲ್ಲಿಯವರೆಗೂ ಅನುದಾನ ಬಿಡುಗಡೆಯಾಗದೇ ಒದ್ದಾಡುತ್ತಿರುವ ಕ್ಯಾಂಟೀನ್‌ಗಳಿಗೆ ಇದೀಗ ಮತ್ತೂಂದು ಸಮಸ್ಯೆ ಕಾಡುತ್ತಿದೆ. ಕ್ಯಾಂಟೀನ್‌ಗೆ ವಿದ್ಯುತ್ ಕೈಕೊಟ್ಟು ನಾಲ್ಕೈದು ದಿನಗಳು ಕಳೆದರೂ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾತ್ರ ಮಾಡಲಾಗಿಲ್ಲ. ವಿದ್ಯುತ್ ಇಲ್ಲದೆ ಕ್ಯಾಂಟೀನ್ ಬಂದ್ ಮಾಡುವ ಸ್ಥಿತಿಗೆ ತಲುಪಿದೆ. ಕ್ಯಾಂಟೀನ್ ನಲ್ಲಿ ಅಳವಡಿಸಿದ್ದ ವಿದ್ಯುತ್ ಮೀಟರ್ ಸುಟ್ಟು ಇಡೀ ಕಟ್ಟಡವೇ ಕತ್ತಲಲ್ಲಿದೆ. ಇದರಿಂದ ಕುಡಿವ ನೀರಿನ ಸಮಸ್ಯೆ, ಸಾಮಗ್ರಿಗಳನ್ನು ತೊಳೆಯಲು ನೀರಿಲ್ಲದ ಸಮಸ್ಯೆ ಶುರುವಾಗಿದೆ. ರಾತ್ರಿ ಊಟ ನೀಡುವುದಕ್ಕೂ ಸಮಸ್ಯೆ ಆಗುತ್ತಿದೆ. ಪ್ರತಿ ರಾತ್ರಿ ನೂರಕ್ಕೂ ಹೆಚ್ಚು ಪ್ಲೇಟ್ ಊಟ ಹೋಗುತ್ತಿದ್ದು, ಕತ್ತಲಿನ ಕಾರಣ ಕೇವಲ 10 ಪ್ಲೇಟ್ ಊಟ ಸಹ ಹೋಗುತ್ತಿಲ್ಲ ಎನ್ನಲಾಗಿದೆ.
ಇಲಾಖೆ ಬೇಜವಾಬ್ದಾರಿ: ವಿದ್ಯುತ್ ಸಮಸ್ಯೆ ಕುರಿತು ಸಂಬಂಧಿಸಿದ ಪಾಲಿಕೆ ವಲಯ ಕಚೇರಿ ಹೆಸ್ಕಾಂನವರಿಗೆ ಮಾಹಿತಿ ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಕುಡಿಯಲು ನೀರಿಲ್ಲ: ವಿದ್ಯುತ್ ಸಂಪರ್ಕ ಕಡಿದು ಹೋಗಿರುವುದರಿಂದ ಊಟ ಬೇಡಿ ಬಂದ ಗ್ರಾಹಕರಿಗೆ ಕುಡಿಯಲು ಹಾಗೂ ಕೈ ತೊಳೆಯಲು ನೀರಿಲ್ಲದೇ ಜನರು ಮರಳಿ ಹೋಗುತ್ತಿದ್ದಾರೆ. ಇಲ್ಲಿ ಊಟ ಮಾಡಿ ಕುಡಿಯಲು ನೀರಿಲ್ಲದಿದ್ದರೆ ಹೇಗೆ, ಹೋಗಲಿ ಎಂದು ಊಟ ಮಾಡಿದರೆ ಕೈ ತೊಳೆಯಲು ಮತ್ತೆಲ್ಲಿ ಹೋಗಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬುಧವಾರ ರಾತ್ರಿ ಬಂದ್ ವಿದ್ಯುತ್ ಇಲ್ಲದೇ ಊಟ ಮಾಡಲು ಆಗಮಿಸುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು
ಗಮನಿಸಿರುವ ಇಂದಿರಾ ಕ್ಯಾಂಟಿನ್ ದವರು ಬುಧವಾರ ರಾತ್ರಿ ಊಟ ನೀಡದೆ ಬಂದ್ ಮಾಡಿದ್ದಾರೆ.
ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟಿನ್‌ಗೆ ಊಟಕ್ಕೆಂದು ಹೋದರೆ ಕೈ ತೊಳೆಯಲು ಹಾಗೂ ಕುಡಿಯಲು ನೀರಿಲ್ಲ. ಇದರಿಂದ ಹಸಿವು ಎಂದು ಬಂದವರು ಹಾಗೆ ಹೋಗುವಂತಾಗಿದೆ. ಇನ್ನು ರಾತ್ರಿ ಇಲ್ಲಿ ಏನೂ ಕಾಣಿಸಲ್ಲ. ಊಟ ಹೇಗೆ ಮಾಡುವುದು.
ಅಶೋಕ, ಸಾರ್ವಜನಿಕ
ಬಸವರಾಜ ಹೂಗಾರ