ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2018 ರ ಜನವರಿ 1 ರಂದು ಹೊಸ ವರ್ಷದ ದಿನದಂದು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಂಪುಟ ಸಭೆ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಂಡಿದ್ದು, ರಾಜ್ಯದ 171 ಪ್ರದೇಶದಲ್ಲಿ 246 ಇಂದಿರಾ ಕ್ಯಾಂಟೀನ್ ತೆರೆಯಲು ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ನವೆಂಬರ್ 17 ರೊಳಗಾಗಿ ಕ್ಯಾಂಟೀನ್ ಸ್ಥಾಪನೆಗೆ ಅಗತ್ಯವಿರುವ ಜಮೀನು ಗುರುತಿಸಿ ಡಿಸೆಂಬರ್ ಅಂತ್ಯದೊಳಗೆ ಕ್ಯಾಂಟೀನ್ ಸ್ಥಾಪನೆ ಕಾರ್ಯ ಮುಕ್ತಾಯಗೊಳಿಸಬೇಕು. ಕ್ಯಾಂಟೀನ್ ಸ್ಥಾಪನೆಗೆ 185 ಕೋಟಿ ರೂಪಾಯಿ ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದ್ದು, ಪ್ರತಿ ಒಂದು ಲಕ್ಷ ಜನರಿಗೆ ಒಂದು ಕ್ಯಾಂಟೀನ್ ಅನ್ವಯವಾಗುವಂತೆ ಯೋಜನೆ ರೂಪಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕ ಆಸ್ಪತ್ರೆ, ಬಸ್ ನಿಲ್ದಾಣ, ರೈಲು ನಿಲ್ದಾಣಗಳ ಪಕ್ಕದಲ್ಲಿ ಕ್ಯಾಂಟೀನ್ ತೆರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಪ್ರತಿ ದಿನ 29 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಪ್ರತಿ ತಿಂಗಳು 9 ಕೋಟಿ ರೂಪಾಯಿ ಹೊರೆಯಾಗಲಿದೆ. ಪೌರಾಡಳಿತ ನಿರ್ದೇಶನಾಲಯದಿಂದ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
40 ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಶೂ ಭಾಗ್ಯ: ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಐಟಿಐ ಕಾಲೇಜುಗಳಲ್ಲಿ ಅಧ್ಯಯನ ನಡೆಸುತ್ತಿರುವ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಎಸ್ಸಿಪಿ, ಟಿಎಸ್ಪಿ ಯೋಜನೆ ಅಡಿಯಲ್ಲಿ 40 ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್‌ಗಳನ್ನು ನೀಡಲು ತೀರ್ಮಾನಿಸಲಾಗಿದೆ. ಪ್ರತಿ ಜೋಡಿ ಶೂ ಹಾಗೂ ಸಾಕ್ಸ್‌ಗೆ 1540 ರೂಪಾಯಿ ದರ ನಿಗದಿ ಮಾಡಿದ್ದು, ಲಿಡ್ಕರ್ ಮೂಲಕ ಖರೀದಿ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರಕ್ಕೆ 6.28 ಕೋಟಿ ರೂಪಾಯಿ ವೆಚ್ಚವಾಗಲಿದೆ. 11 ಕೋಟಿ 13 ಲಕ್ಷ ವೆಚ್ಚದಲ್ಲಿ ಎಂಎಸ್‌ಐಎಲ್‌ನಿಂದ ಲೇಖನ ಸಾಮಗ್ರಿ, 29.49 ಕೋಟಿ ವೆಚ್ಚದಲ್ಲಿ ಟೂಲ್ ಕಿಟ್ಸ್‌ಗಳನ್ನು ನೀಡಲು ನಿರ್ಧರಿಸಲಾಗಿದೆ. ಅದಲ್ಲದೇ 46 ಕೈಗಾರಿಕೆ ತರಬೇತಿ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು 20.27 ಕೋಟಿ, ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ಗೂಡ್ಸ್ ಖರೀದಿಗೆ 16.30 ಕೋಟಿ ರೂಪಾಯಿ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಜಯಚಂದ್ರ ಹೇಳಿದರು.
ಮುಖ್ಯಮಂತ್ರಿ ಅನಿಲ ಭಾಗ್ಯ: ಕೇಂದ್ರ ಸರ್ಕಾರದ ಉಜ್ವಲ ಯೋಜನೆಗೆ ಪರ್ಯಾಯವಾಗಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸಲು ಸಂಪುಟ ಒಪ್ಪಿಗೆ ನೀಡಿದ್ದು, 28 ಲಕ್ಷ ಫಲಾನುಭವಿಗಳಿಗೆ ಯೋಜನೆ ಅನ್ವಯವಾಗಲಿದೆ. ಈ ವರ್ಷ 10 ಲಕ್ಷ ಫಲಾನುಭವಿಗಳಿಗೆ ಮಾತ್ರ ವಿತರಿಸಲು ನಿರ್ಧರಿಸಲಾಗಿದ್ದು, 1137 ಕೋಟಿ ರೂಪಾಯಿ ವೆಚ್ಚವಾಗಲಿದೆ.ಪ್ರತಿ ಕುಟುಂಬಕ್ಕೆ ಅನಿಲ ಸಂಪರ್ಕ ಕಲ್ಪಿಸಲು 4040 ರೂಪಾಯಿ ವೆಚ್ಚವಾಗಲಿದ್ದು, ಪ್ರತಿ ಸಂಪರ್ಕಕ್ಕೂ ಒಂದು ಸ್ಟೋ, ಎರಡು ಬರ್ನರ್, ಎರಡು ರಿಫೀಲ್ ಒಂದು ಲೀಟರ್ ಸೀಮೆ ಎಣ್ಣೆ ನೀಡಲಾಗುವುದು ಎಂದು ಜಯಚಂದ್ರ ಹೇಳಿದರು.
ಸಂಪುಟದ ಪ್ರಮುಖ ತೀರ್ಮಾನಗಳು
* ಆರೋಗ್ಯ ಇಲಾಖೆ ಮೂಲಕ ಹತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಎನ್‌ಬಿ ಕೋರ್ಸ್ ಆರಂಭಿಸಲು ನಿರ್ಧಾರ.
* 61 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಅಂಬುಲೆನ್ಸ್ ಖರೀದಿಗೆ ಒಪ್ಪಿಗೆ
* ಕಲಬುರಗಿಯಲ್ಲಿ ಪೋಲಿಸ್ ಆಯುಕ್ತಾಲಯ ಆರಂಭಿಸಲು ತೀರ್ಮಾನ.
* ನ್ಯಾಯ ಬೆಲೆ ಅಂಗಡಿಯ ಜಾಗೃತ ದಳದ ಪದಾಧಿಕಾರಿಗಳಿಗೆ ಗೌರವ ಧನ ನೀಡಲು ಒಪ್ಪಿಗೆ
* ಹಾವೇರಿ ಜಿಲ್ಲೆ ಹಿರೆಕೇರೂರ್ ತಾಲೂಕಿನ ಬಹುಗ್ರಾಮಗಳಿಗೆ 24 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆಗೆ ಒಪ್ಪಿಗೆ
* ಹಿರೆಕೇರೂರು ತಾಲೂಕಿನ 13 ಹಾಗೂ ಬ್ಯಾಡಗಿ ತಾಲೂಕಿನ 2 ಕೆರೆಗಳಿಗೆ ವರದಾ ನದಿಯಿಂದ 38 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಒಪ್ಪಿಗೆ.
* ವಿಜಯಪುರ ಮಹಾನಗರ ಪಾಲಿಕೆಯ ಮಾಸ್ಟರ್ ಪ್ಲಾನ್‌ಗೆ ಭೂ ಸ್ವಾಧೀನ ಪಡಿಸಿಕೊಂಡು ಜಮೀನು ಮಾಲೀಕರಿಗೆ ಪರಿಹಾರ ನೀಡಲು ಒಪ್ಪಿಗೆ.
* ಮೂಡಲಗಿ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡಲು ತೀರ್ಮಾನ.
* ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ಕೃಷಿ ಅಭಿವೃದ್ಧಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಕಾರ್ಯಕ್ರಮ ಅನುಷ್ಠಾನ ಮಾಡಲು ಸಂಪುಟ ಒಪ್ಪಿಗೆ.