Advertisement

ಮಾತೃಭಾಷೆಯತ್ತ ಅಸಡ್ಡೆ-ಕನ್ನಡಕ್ಕೆ ಅನಾಥಪ್ರಜ್ಞೆ; ಎಸ್‌.ಎಚ್‌. ಮಿಟ್ಟಲಕೋಡ

05:59 PM Dec 03, 2022 | Team Udayavani |

ಧಾರವಾಡ: ಕಾನೂನು ಕ್ಷೇತ್ರದಲ್ಲಿ ಕಕ್ಷಿದಾರರಿಗೆ ಸರಳವಾಗಿ ಅರ್ಥವಾಗುವಂತೆ ಕನ್ನಡ ನೆಲೆಯಿಂದಲೂ ಕಾರ್ಯ ಮಾಡಲು ಸಾಧ್ಯ ಎಂಬುದನ್ನು ನ್ಯಾಯವಾದಿ ವೆಂಕಟೇಶ ಕುಲಕರಣಿ ಮಾಡಿ ತೋರಿಸಿದ್ದಾರೆ. ಆದರೆ, ರಾಜ್ಯದಲ್ಲಿ ಕನ್ನಡ ಭಾಷೆ ಅನಾಥಪ್ರಜ್ಞೆ ಯಾಕೆ ತಾಳಿತು ಎಂಬುದನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ನಿವೃತ್ತ ಜಿಲ್ಲಾ ನ್ಯಾಯಾಧಿಧೀಶ ಎಸ್‌.ಎಚ್‌. ಮಿಟ್ಟಲಕೋಡ ಹೇಳಿದರು.

Advertisement

ಕರ್ನಾಟಕ ವಿದ್ಯಾವರ್ಧಕ ಸಂಘದ ಕಾನೂನು ಮಂಟಪವು ಸಂಘದ ಶತಮಾನೋತ್ತರ ಬೆಳ್ಳಿಹಬ್ಬದ ಸವಿನೆನಪಿನಲ್ಲಿ ಮತ್ತು 67ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಾಡಹಬ್ಬದ ತಿಂಗಳ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ನ್ಯಾಯವಾದಿ ದಿ| ವೆಂಕಟೇಶ ಕುಲಕರಣಿ ಅವರ ನೆನಪಿನಲ್ಲಿ ಕಾನೂನು-ಕನ್ನಡಕ್ಕೆ ವೆಂಕುರವರ ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಯಪ್ರಜ್ಞೆ, ನಿಸ್ವಾರ್ಥ ಭಾವನೆಯಿಂದ, ನ್ಯಾಯನಿಷ್ಠುರಿಯಾಗಿ, ಪ್ರಾಮಾಣಿಕವಾಗಿ ಕನ್ನಡಕ್ಕಾಗಿ ಒಂಟಿ ಸಲಗದಂತೆ ಕಾರ್ಯ ಮಾಡಿದವರು ವೆಂಕು. ತಮಿಳು, ತೆಲುಗು, ಮಲೆಯಾಳಂ, ಮರಾಠಿ ಮುಂತಾದ ಅನ್ಯಭಾಷೆಗಳ ಜನರು ತಮ್ಮತನ ಬಿಟ್ಟುಕೊಡದೇ ತಮ್ಮ ಪ್ರಾದೇಶಿಕ ಭಾಷೆಗೆ ಒತ್ತು ಕೊಡುತ್ತಾ ರಕ್ಷಿಸುತ್ತಾರೆ.

ಆದರೆ ಕರ್ನಾಟಕದಲ್ಲಿ ಕನ್ನಡ ರಕ್ಷಣೆಗೆ ಪ್ರಾಧಿಕಾರ ಏಕೆ ಬಂತು?. ಕನ್ನಡಿಗರು ಮಾತೃಭಾಷೆ ಬಗ್ಗೆ ಅಸಡ್ಡೆ, ನಿರ್ಲಕ್ಷ್ಯ ಭಾವನೆ ತೋರುತ್ತಿರುವುದರಿಂದ ತನ್ನ ರಾಜ್ಯದಲ್ಲೇ ಕನ್ನಡ ಅನಾಥಪ್ರಜ್ಞೆಗೆ ಒಳಗಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜ್ಯ ಬಾರ್‌ ಕೌನ್ಸಿಲ್‌ ಸದಸ್ಯ ವಿ.ಡಿ. ಕಾಮರಡ್ಡಿ, ಪ್ರೊ| ಸಿ.ಎಸ್‌. ಪಾಟೀಲ, ನ್ಯಾಯವಾದಿಗಳಾದ ಎ.ಸಿ. ಚಾಕಲಬ್ಬಿ, ಪ್ರೊ| ಸಿ.ಎಸ್‌. ಪೊಲೀಸ್‌ಪಾಟೀಲ, ಎಸ್‌.ಎನ್‌. ಬಣಕಾರ, ಪ್ರಫುಲ್ಲಾ ನಾಯಕ ಹಾಗೂ ಮನೋಜ ಪಾಟೀಲ ಮಾತನಾಡಿ, ವೆಂಕಟೇಶ ಕುಲಕರಣಿ ಅವರು ನೇರ, ದಿಟ್ಟ ಸ್ಪಷ್ಟವಾದಿಗಳಾಗಿದ್ದರು.

Advertisement

ಅಲ್ಲದೇ ಸಮಯದ ಮೌಲ್ಯ, ಸಮಯ ಪ್ರಜ್ಞೆಯನ್ನು ಸದಾ ಜನರ ಮನಸ್ಸಿನಲ್ಲಿ ಮೂಡಿಸಿದ ನ್ಯಾಯವಾದಿ. ಹೊಗಳಿಕೆ ತೆಗಳಿಕೆಗೆ ಕಿವಿಗೊಡದೆ, ಅಂಜಿಕೆ-ಅಳಕು ಇಟ್ಟುಕೊಳ್ಳದೆ ಮನಸ್ಸಿದ್ದಲ್ಲಿ ಮಾರ್ಗ ಎಂಬ ಮಾತಿನಂತೆ ಕೆಲಸ ಮಾಡಿದವರು ಎಂದರು.

ಧಾರವಾಡ ಲಾ ಅಕಾಡೆಮಿ ಅಧ್ಯಕ್ಷ ಕೆ.ಬಿ. ನಾವಲಗಿಮಠ ಅಧ್ಯಕ್ಷತೆ ವಹಿಸಿದ್ದರು. ವಿರೂಪಾಕ್ಷ ದೀಕ್ಷಿತ ಸಂಗಡಿಗರು, ದತ್ತಂಭಟ್ಟ ಜೋಶಿ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ವಿಜೇತಾ ವೆರ್ಣೇಕರ ನೇತೃತ್ವದ ಮಹಿಳಾ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಕಾನೂನು ಮಂಟಪದ ಸಂಚಾಲಕ ಗುರು ಹಿರೇಮಠ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಶೇಖರ ಮಹಾಜನಶೆಟ್ಟಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಪ್ರೊ| ಮಾಲತಿ ಪಟ್ಟಣಶೆಟ್ಟಿ, ಕಾನೂನು ಮಂಟಪದ ಸಲಹಾ ಸಮಿತಿ ಸದಸ್ಯರಾದ ಮಹಾನಂದಾ ಮುದೇನಗುಡಿ, ಸಿ.ಎಸ್‌. ನಾಗಶೆಟ್ಟಿ, ಕೆ.ಎಂ. ಕೊಪ್ಪದ, ಚಂದ್ರಶೇಖರ ತಿಗಡಿ, ಅಶೋಕ ಕೋರಿ, ಸುರೇಶ ನಾಯಕ, ಪುರೋಹಿತ್‌ ಇನ್ನಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next