Advertisement

ಯುವಜನತೆ ಮತ್ತು ಕ್ಯಾಶ್‌ಲೆಸ್‌ ಇಂಡಿಯ

03:45 AM Jan 06, 2017 | |

ಯುವ ಸಮುದಾಯವೇ ಈ ದೇಶದ ಭವಿಷ್ಯ ಎನ್ನುವ ಮಾತಿದೆ. ಅದರಲ್ಲೂ ಶೇ. 70ಕ್ಕೂ ಹೆಚ್ಚಿನ ಯುವಕರನ್ನು ಹೊಂದಿರುವ ನಮ್ಮ ದೇಶ ವಿಶ್ವದ ಕೆಲವೇ “ಯುವ’ ದೇಶಗಳಲ್ಲಿ ಒಂದು. 

Advertisement

ಪ್ರಸ್ತುತದ ಆಗುಹೋಗುಗಳನ್ನು ಗಮನಿಸಿದಾಗ ಇಂದಿನ ಯುವಕರ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಜವಾಬ್ದಾರಿ ಇದೆ. ನಮ್ಮ ದೇಶದ ಪ್ರಧಾನಿಯವರ ವೇಗಕ್ಕೆ ಈ ರಾಷ್ಟ್ರದ ಯುವಕರು ಹೆಜ್ಜೆ ಹಾಕುವರು ಎಂಬ ವಿಶ್ವಾಸ ಅವರದ್ದು. ಹಾಗಾಗಿ ಅವರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಯುವಕರ ಮೇಲೆಯೇ ಹೆಚ್ಚು ಅವಲಂಬಿತ. ಹಾಗಾಗಿ, ಯುವ ಸಮುದಾಯ ಈ ದೇಶದ ಭವಿಷ್ಯ ಎನ್ನುವ ಬದಲು ದೇಶದ ಅಭಿವೃದ್ಧಿಯ ಪಾಲುದಾರರು ಎನ್ನುವುದು ಹೆಚ್ಚು ಸೂಕ್ತ.

ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಕೇವಲ ಶೇ. 14ರಷ್ಟು ನಗದು ರಹಿತ ವ್ಯವಹಾರ ನಡೆಯುತ್ತಿದ್ದು, ಶೇ. 60ರಷ್ಟು ಯುವಕರು ನಗದು ರಹಿತ ವ್ಯವಹಾರದ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದಿದ್ದಾರೆ. ಆದರೆ ಬಳಸುತ್ತಿದ್ದವರ ಸಂಖ್ಯೆ ತೀರಾ ಕಡಿಮೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಡಿಜಿಟಲ್‌ ಇಂಡಿಯಾ, ಕ್ಯಾಶ್‌ಲೆಸ್‌ ಇಂಡಿಯಾ ಯೋಜನೆ ಯಶಸ್ವಿಯಾಗಬೇಕಾಗಿದ್ದಲ್ಲಿ ಯುವಕರ ಕೊಡುಗೆ ಅನಿವಾರ್ಯ. 

ಇತ್ತೀಚಿನ ದಿನಗಳಲ್ಲಿ ದೇಶವಾಸಿಗಳು ಡಿಜಿಟಲ್‌ ಕ್ಯಾಶ್‌ ಸಿಸ್ಟಮ್‌ನತ್ತ ಆಕರ್ಷಿತರಾಗುತ್ತಿದ್ದು ಪೇಟಿಎಂ, ಫ್ರೀಚಾರ್ಜ್‌, ಎಸ್‌ಬಿಐ ಬಡ್ಡಿನಂತಹ ಇ- ವ್ಯಾಲೆಟ್‌ಗಳ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದಲ್ಲದೆ ಆನ್‌ಲೈನ್‌ ಖರೀದಿ, ಆನ್‌ಲೈನ್‌ ಬುಕ್ಕಿಂಗ್‌  ಅಲ್ಲದೇ ಮಾಲ್‌, ಪೆಟ್ರೋಲ್‌ ಪಂಪ್‌ಗ್ಳಲ್ಲಿ, ಡೆಬಿಟ್‌ಕಾರ್ಡ್‌ ಕ್ರೆಡಿಟ್‌ ಕಾರ್ಡುಗಳ ಬಳಕೆಯ ಟ್ರೆಂಡ್‌ ಆರಂಭವಾಗಿದೆ.

ಕ್ಯಾಶ್‌ಲೆಸ್‌ ಇಂಡಿಯ ಯಾಕೆ?
ಆರ್‌ಬಿಐ ಮುದ್ರಿಸಿ ಚಲಾವಣೆಗೆ ಬಿಡುವ ಒಟ್ಟು ನೋಟುಗಳಲ್ಲಿ ಶೇ. 20 ಮಾತ್ರ ಮತ್ತೆ ಬ್ಯಾಂಕಿಗೆ ಬರುತ್ತದೆ. ಉಳಿದ ಶೇ. 80 ನೋಟುಗಳು ಎಲ್ಲಿ ಸೇರುತ್ತಿವೆ ಎಂಬ ಮಾಹಿತಿಯೇ ಇರುವುದಿಲ್ಲ. ಇದು ಅತ್ಯಂತ ಅಪಾಯಕಾರಿ ಮಾತ್ರವಲ್ಲ ನಿಂತ ನೀರು ಕೊಳೆತು ನಾರುವಂತೆ ಹೀಗೆ ಶೇಖರಣೆಯಾದ ಹಣ ದೇಶದ ಆರ್ಥಿಕತೆಯನ್ನೇ ಬುಡಮೇಲುಗೊಳಿಸುತ್ತದೆ. ನಗದುರಹಿತ ವ್ಯವಹಾರದಿಂದ ದುಡ್ಡು ವ್ಯಕ್ತಿಯ ಕೈ ಸೇರದೆ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆಯಾಗುವುದರಿಂದ ಪ್ರತಿ ನೋಟಿನ ಜಾಡು ಸ್ಪಷ್ಟವಾಗಿ ನಮೂದಾಗಿರುತ್ತದೆ. ಮಾತ್ರವಲ್ಲ , ಕಳ್ಳ ನೋಟಿನ ವ್ಯವಹಾರವನ್ನು ತಡೆಗಟ್ಟಬಹುದು.

Advertisement

ಜಾಗೃತಿ- ತರಬೇತಿ ನಮ್ಮ ಜವಾಬ್ದಾರಿ
ನಾವಂತೂ ಸುಲಭವಾಗಿ ಡಿಜಿಟಲ್‌ ಕ್ಯಾಶ್‌ ಬಳಸುತ್ತಿದ್ದೇವೆ ಎಂದಾಕ್ಷಣ ನಮ್ಮ ಜವಾಬ್ದಾರಿ ಮುಗಿದಿಲ್ಲ. ಈ ದೇಶದ ಆರ್ಥಿಕತೆಯ ಜೀವನಾಡಿಗಳಾದ ಆಟೋ-ಟ್ಯಾಕ್ಸಿ ಚಾಲಕರು, ಸಣ್ಣ ಉದ್ದಿಮೆದಾರರು, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ನಗದುರಹಿತ ವ್ಯವಹಾರದ ಬಗ್ಗೆ ತರಬೇತಿ ನೀಡುವುದು ಕೂಡಾ ನಮ್ಮದೇ ಜವಾಬ್ದಾರಿ. ಆಧಾರ್‌ ಆಧಾರಿತ ಪೇಮೆಂಟ…, ಪಿಓಎಸ್‌ ಪೇಮೆಂಟ…, ಇ-ವ್ಯಾಲೆಟ್‌ ಪೇಮೆಂಟ್‌ಗಳ ಬಗ್ಗೆ ನಮ್ಮ ಬಿಡುವಿನ ಸಮಯದಲ್ಲಿ ನಮ್ಮ ಅಕ್ಕ ಪಕ್ಕದವರಿಗೆ ತಿಳಿಹೇಳಿದರೆ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿದಂತೆ. ಇದಕ್ಕೆ ಬೇಕಾಗಿರುವುದು ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಪೋನ್‌ ಅಷ್ಟೇ.

ಡಿಜಿಟಲ್‌ ಶಕ್ತಿ-ಯುವ ಶಕ್ತಿ
ಡಿಜಿಟಲ್‌ ಶಕ್ತಿ ಮತ್ತು ಯುವಶಕ್ತಿ ಎಂಬ ಮಾಂತ್ರಿಕ ಶಕ್ತಿ ಒಂದಾದಲ್ಲಿ ಅಸಾಧ್ಯ ಎಂಬುವುದೇ ಇಲ್ಲ.
ಡಿಜಿಟಲ್‌ ತಂತ್ರಜ್ಞಾನ ಎಂಬುದು ಸಾಗರದಂತೆ. ಯುವಶಕ್ತಿ ಎಂಬುದು ಸಾಗರದ ಅಲೆಗಳಂತೆ. ಒಂದಕ್ಕೊಂದು ಬಿಟ್ಟಿರುವುದು ಸಾಧ್ಯವೇ ಇಲ್ಲ ಎಂಬಷ್ಟು ಗಟ್ಟಿ ಬಂಧ. ಇದನ್ನು ಸಕಾರಾತ್ಮಕವಾಗಿ ಬಳಸಿಕೊಂಡಲ್ಲಿ ಒಂದು ಹೊಸಶಕ್ತಿಯ ಉದಯವಾಗಬಹುದು. ನಮ್ಮಲಿರುವ ರಚನಾತ್ಮಕ ಚಿಂತನೆಗಳನ್ನು ಈ ಡಿಜಿಟಲ್‌ ಯುಗದಲ್ಲಿ ದೇಶದ ಒಳಿತಿಗೆ ಬಳಸುವತ್ತ ಹೆಜ್ಜೆ ಇಟ್ಟರೆ ಪ್ರಧಾನಿಯವರ ಡಿಜಿಟಲ್‌ ಇಂಡಿಯ, ಕ್ಯಾಶ್‌ಲೆಸ್‌ ಇಂಡಿಯದ ಕನಸು ನನಸಾಗುವ ದಿನಗಳು ದೂರವಿಲ್ಲ.

ಯಾವುದೇ ಒಂದು ದೇಶ ಪ್ರಗತಿ ಹೊಂದಬೇಕಾದರೆ ಅಲ್ಲಿನ ಯುವಸಮೂಹದ ಕೊಡುಗೆ ಅಗತ್ಯವಾಗಿ ಬೇಕು. ಅಂತೆಯೇ ಇಲ್ಲೂ ಕೂಡಾ. ನಗದುರಹಿತ ವ್ಯವಹಾರದ ಬಗ್ಗೆ ಇಲ್ಲಿನ ಅದೆಷ್ಟೋ ಜನಸಾಮಾನ್ಯರಿಗೆ ಗೊಂದಲಗಳಿವೆ. ಆ ಗೊಂದಲಗಳನ್ನು ಪರಿಹರಿಸಿ, ಸುಲಭವಾಗಿ ನಗದುರಹಿತ ವ್ಯವಹಾರದೆಡೆಗೆ ಸಾಗಲು ಅಂತಹ ಜನಗಳಿಗೆ ಅರಿವು ಮೂಡಿಸುವುದು ಯುವಜನರ ಗುರುತರ ಹೊಣೆಗಾರಿಕೆ. ದೇಶ ಹೊಸತನಕ್ಕೆ ತೆರೆದಿದೆ; ನಾವೂ ಆ ದಾರಿಯಲ್ಲಿ ಸಾಗುವಾಗ ನಮ್ಮವರೇ ಆದ ಸಮಾಜದ ಕಟ್ಟಕಡೆಯ ಜನ ಸಾಮಾನ್ಯರನ್ನೂ ಜೊತೆಗೊಯ್ಯುವ ಕೆಲಸವನ್ನು ನಾವು ಮಾಡಬೇಕು. ಪ್ರಧಾನಿ ಕನಸಿಗೆ ಯುವಕರ ಸಾಥ್‌ ದೊರೆತಾಗಲೇ ಮಹತ್ತರ ಯೋಜನೆಯೊಂದು ಯಶಸ್ವಿಯಾಗುತ್ತದೆ.

– ವಿಕ್ರಮ್‌ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next