ನವದೆಹಲಿ: ಭಾರತದಲ್ಲಿ ಹಲವಾರು ಮಂದಿ ಬಿಲಿಯನೇರ್ ಇದ್ದಾರೆ. ಅವರಲ್ಲಿ ಗೌತಮ್ ಅದಾನಿ, ಮುಕೇಶ್ ಅಂಬಾನಿಯೂ ಸೇರಿದ್ದಾರೆ. ಆದರೆ ಅದಕ್ಕೊಂದು ಸೇರ್ಪಡೆ ಎಂಬಂತೆ ಕೇವಲ ಮೂರು ತಿಂಗಳ ಹಿಂದೆ ಆರಂಭಗೊಂಡಿದ್ದ ಝೈಬರ್ 365 ಎಂಬ ಸ್ಟಾರ್ಟ್ ಅಪ್ ದೊಡ್ಡ ಕಂಪನಿಯಾಗಿ ಬೆಳೆದಿದೆ. ಅಷ್ಟೇ ಅಲ್ಲ ಈ ಕಂಪನಿಯ ಸಿಇಒ ಪರ್ಲ್ ಕಪೂರ್ (27ವರ್ಷ) ಭಾರತದ ಅತೀ ಕಿರಿಯ ವಯಸ್ಸಿನ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ:Team India; ದ್ರಾವಿಡ್ ಸಲಹೆಯ ಹೊರತಾಗಿಯೂ ಪಾಂಡ್ಯ ಸಹೋದರರ ಸೇರಿದ ಇಶಾನ್ ಕಿಶನ್
ಝೈಬರ್ 365 ಸ್ಟಾರ್ಟ್ ಅಪ್ 2023ರ ಮೇ ತಿಂಗಳಿನಲ್ಲಿ ಆರಂಭಿಸಲಾಗಿತ್ತು. ವೆಬ್ 3 ಮತ್ತು ಎಐ (ಕೃತಕ ಬುದ್ದಿಮತ್ತೆ) ಆಧಾರಿತ ಸೊಲ್ಯೂಶನ್ಸ್ ಕಂಪನಿಯಾದ ಝೈಬರ್ 365 ಕೇವಲ 3 ತಿಂಗಳಿನಲ್ಲಿಯೇ ಯೂನಿಕಾರ್ನ್ ಕಂಪನಿಯಾಗಿ ಬೆಳೆದಿದೆ. ಝೈಬರ್ 365 ಸ್ಟಾರ್ಟ್ ಅಪ್ ಕಂಪನಿ ಮೌಲ್ಯ ಬರೋಬ್ಬರಿ 1 ಬಿಲಿಯನ್ ಡಾಲರ್ ಗೂ (9,100 ಕೋಟಿ) ಅಧಿಕ ಎಂದು ವರದಿ ತಿಳಿಸಿದೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ಕಾರ್ಯನಿರ್ವಹಿಸುವ ಝೈಬರ್ 365 ಕಂಪನಿಯ ಕೇಂದ್ರ ಕಚೇರಿ ಇರುವುದು ಲಂಡನ್ ನಲ್ಲಿ. ಕಂಪನಿಯು ಭಾರತ ಮತ್ತು ಏಷ್ಯಾದ ವೇಗದ ಯೂನಿಕಾರ್ನ್ ಎಂದು ಗುರುತಿಸಲ್ಪಟ್ಟಿದೆ.
ಪರ್ಲ್ ಕಪೂರ್ ಝೈಬರ್ 365 ಕಂಪನಿ ಸ್ಥಾಪಕ ಮತ್ತು ಸಿಇಒ. ಕಂಪನಿಯ ಒಟ್ಟು ಮೌಲ್ಯ 1.1 ಬಿಲಿಯನ್ ಡಾಲರ್ (9,129 ಕೋಟಿ). ಪರ್ಲ್ ಕಪೂರ್ ಶೇ.90ರಷ್ಟು ಷೇರು ಪಾಲು ಹೊಂದಿದ್ದಾರೆ. ಈ ಸ್ಟಾರ್ಟ್ ಅಪ್ ಕಂಪನಿಗೆ ಇತ್ತೀಚೆಗೆ ಎಸ್ ಆರ್ ಎಎಂ ಮತ್ತು ಎಂಆರ್ ಎಎಂ ಗ್ರೂಪ್ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು.
ಪರ್ಲ್ ಕಪೂರ್ ಲಂಡನ್ ನ ಕ್ವೀನ್ ಮೇರಿ ಯೂನಿರ್ವಸಿಟಿಯಲ್ಲಿ ಎಂಎಸ್ ಸಿ ಇನ್ವೆಸ್ಟ್ ಮೆಂಟ್ ಬ್ಯಾಂಕಿಂಗ್ (CFA pathway) ಪದವಿ ಪಡೆದಿದ್ದರು. ಕಪೂರ್ ವೆಬ್ 3 ತಂತ್ರಜ್ಞಾನದ ಆವಿಷ್ಕಾರಕ ಎಂದು ಗುರುತಿಸಲಾಗಿದೆ.
ಝೈಬರ್ 365 ಸ್ಟಾರ್ಟ್ ಅಪ್ ಸ್ಥಾಪನೆಗೂ ಮುನ್ನ ಪರ್ಲ್ ಕಪೂರ್ AMPM storeನ ಹಣಕಾಸು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. 2022ರ ಫೆಬ್ರವರಿಯಲ್ಲಿ ಕಪೂರ್ ಬಿಲಿಯನ್ ಪೇ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್ ಕಂಪನಿಯನ್ನು ಸ್ಥಾಪಿಸಿದ್ದರು.