ಮಾನ್ಯ: ಭಾರತೀಯ ಸಂಸ್ಕೃತಿ, ಜೀವನ ಪದ್ಧತಿಯ ಹಿರಿಮೆ ಜಾಗತಿಕ ಗುರುವಾಗುವಲ್ಲಿ ಬೆನ್ನೆಲುಬಾಗಿದೆ. ಈ ನಿಟ್ಟಿನಲ್ಲಿ ಅಂತಹ ಸಂಸ್ಕೃತಿಯನ್ನು ಮುನ್ನಡೆಸುವಲ್ಲಿ ಯುವ ಸಮೂಹ ಕಾರ್ಯಪ್ರವೃತ್ತರಾಗುವಲ್ಲಿ ವಹಿಸುವ ಶ್ರದ್ಧೆಗೆ ಬೆಂಬಲ ನೀಡಲು ಇಲ್ಲಿಯ ವೈವಿಧ್ಯ ಆರಾಧನೆ, ಆಚರಣೆಗಳು ಪ್ರಧಾನ ಪಾತ್ರ ವಹಿಸುತ್ತವೆ ಎಂದು ಸಾಮಾಜಿಕ ಕಾರ್ಯಕರ್ತ ಜಗದೀಶ ಪ್ರತಾಪನಗರ ಅವರು ತಿಳಿಸಿದರು.
ಮಾನ್ಯ ಸಮೀಪದ ಮುಂಡೋಡು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಆಶ್ರಯ ದಲ್ಲಿ ಆಯೋಜಿಸಲಾಗಿದ್ದ ಒತ್ತೆಕೋಲ ಯಾ ಕೆಂಡಸೇವೆಯ ಅಂಗವಾಗಿ ಸ್ಥಳೀಯ ಶ್ರೀ ಮೂಕಾಂಬಿಕಾ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್‌ನ 33ನೇ ವಾರ್ಷಿಕ ಉತ್ಸವದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸಗೈದು ಅವರು ಮಾತನಾಡಿದರು.
ಮಂಗಳೂರಿನ ಖ್ಯಾತ ವೈದ್ಯ ಡಾ| ಭರತ್ ಕುಮಾರ್ ಮುಂಡೋಡು ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಮುರಳೀಧರನ್ ಉದ್ಘಾಟಿಸಿದರು. ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ವೇಣು ಗೋಪಾಲ ರಾವ್ ಮುಂಡೋಡು ಉಪಸ್ಥಿತ ರಿದ್ದು ಶುಭಹಾರೈಸಿದರು. ಸಮಾರಂಭದಲ್ಲಿ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಮುಂಡೋಡು ಇದರ ಅಧ್ಯಕ್ಷ ಭಾಸ್ಕರ ಮುಂಡೋಡು, ನಿವೃತ್ತ ಸೇನಾ ಸುಬೇದಾರ್ ಈಶ್ವರ ಭಟ್ ಕಾಕುಂಜೆ, ಸಮಾಜ ಸೇವಕಿ ಸಾವಿತ್ರಿ ಎನ್. ರಾವ್ ಮುಂಡೋಡು, ಹಿರಿಯ ಯಕ್ಷಗಾನ ಕಲಾವಿದ ಈಶ್ವರ ರಾವ್ ಮುಂಡೋಡು, ಭಜನ ಸಾಹಿತಿ ಪರಮೇಶ್ವರ ನಾಯ್ಕ ಅರ್ತಲೆ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಮೂಕಾಂ ಬಿಕಾ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಪದ್ಮನಾಭ ರಾವ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಸಂತೋಷ್ ಕುಮಾರ್ ವಂದಿಸಿದರು. ಚಂದ್ರಹಾಸ ಮಾಸ್ತರ್ ಪಿ.ಎಂ. ಮುಂಡೋಡು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಮುಂಡೋಡು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ, ಮೇಲರಿ ಕೂಡಿಸುವುದು ನೆರವೇರಿತು. ಸಂಜೆ ಮುಂಡೋಡು ತರವಾಡು ಭಂಡಾರ ಮನೆಯಿಂದ ಶ್ರೀ ದೈವದ ಭಂಡಾರ ಆಗಮನ, ರಾತ್ರಿ 8ಕ್ಕೆ ತೊಡಂಙಲ್, ಮೇಲೇರಿಗೆ ಅಗ್ನಿ ಸ್ಪರ್ಷ ನಡೆಯಿತು. ರಾತ್ರಿ 11 ರಿಂದ ಶ್ರೀ ದೈವದ ಕುಳಿಚ್ಚಾಟ, ಮುಂಜಾನೆ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ ಮತ್ತು ಪ್ರಸಾದ ವಿತರಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಪ್ರಸಿದ್ಧ ಗಾಯಕ ಡಾ| ಕಿರಣ್ ಕುಮಾರ್ ಪುತ್ತೂರು ಅವರ ಗಾನಸಿರಿ ತಂಡದವರಿಂದ ಸುಮಧುರ ಗೀತಾಂಜಲಿ ಭಕ್ತಿ-ಭಾವ-ಜಾನಪದ ಗೀತೆಗಳ ಪ್ರಸ್ತುತಿ ನಡೆಯಿತು.
ಸನಾತನ ಸಂಸ್ಕೃತಿಯ ಬೇರುಗಳು ಇಲ್ಲಿಯ ಆಚರಣೆ, ಆರಾಧನಾ ಕ್ರಮಗಳಲ್ಲಿ ನಿಕ್ಷಿಪ್ತವಾಗಿದ್ದು, ಧರ್ಮಾಚರಣೆಯ ಪಾಲನೆಯ ಮೂಲಕ ಬದುಕಿನ ಸಾರ್ಥಕ್ಯವನ್ನು ಕಂಡುಕೊಳ್ಳಲಾಗುತ್ತಿದೆ. ರಾಷ್ಟ್ರದ ಪರಮ ವೈಭವದ ಸ್ಥಾಪನೆಗೆ ಪ್ರಸ್ತುತ ಕಾಲಘಟ್ಟ ಸರ್ವ ಸನ್ನದ್ಧªವಾಗಿದ್ದು, ಭರತ ಖಂಡದ ಜನಮಾನಸದಲ್ಲಿ ಭರವಸೆಯ ಧೀಶಕ್ತಿ ಮೈಗೂಡಲಿ .
-ಜಗದೀಶ ಪ್ರತಾಪನಗರ