ಪೋರ್ಟ್ ಮೋರ್ಸ್‌ಬಿ/ಸಿಡ್ನಿ: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಪ್ರಭಾವವನ್ನು ಗಟ್ಟಿಯಾಗಿ ನೆಲೆಯೂರಿಸುವ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ಪಪುವಾ ನ್ಯೂಗಿನಿಗೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ “ಭಾರತ ನಿಮ್ಮ ವಿಶ್ವಾಸಾರ್ಹ ಪಾಲುದಾರ’ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಜತೆಗೆ, “ನೀವು ಯಾರನ್ನು ನಂಬಿಕಸ್ಥರು ಎಂದು ನಂಬಿದ್ದೀರೋ, ಅವರು ನಿಮ್ಮ ಕಷ್ಟಕಾಲದಲ್ಲಿ ಸಹಾಯಕ್ಕೆ ಬರಲಿಲ್ಲ’ ಎಂದು ಚೀನಾದ ಹೆಸರೆತ್ತದೇ ಟೀಕಿಸಿದ್ದಾರೆ.
ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ವರ್ತನೆ ಹಾಗೂ ಪೆಸಿಫಿಕ್ ದ್ವೀಪ ರಾಷ್ಟ್ರಗಳ ಮೇಲೆ ಪ್ರಭಾವ ಬೀರಲು ಚೀನಾ ನಡೆಸುತ್ತಿರುವ ಯತ್ನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಈ ನಡೆ ಮಹತ್ವ ಪಡೆದಿದೆ.
ಭಾರತ ಮತ್ತು 14 ಪೆಸಿಫಿಕ್ ದ್ವೀಪ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಉತ್ತೇಜನ ನೀಡುವ ಕೆಲಸವನ್ನೂ ಮೋದಿ ಮಾಡಿದ್ದಾರೆ. ಫಿಪಿಕ್(ಫೋರಂ ಫಾರ್ ಇಂಡಿಯಾ-ಪೆಸಿಫಿಕ್ ಐಲ್ಯಾಂಡ್ಸ್ ಕೋಆಪರೇಷನ್) ಶೃಂಗದಲ್ಲಿ ಮಾತನಾಡಿದ ಮೋದಿ, ಚೀನಾದ ಹೆಸರೆತ್ತದೇ ಆ ದೇಶದ ವಿರುದ್ಧ ಹರಿದಾಯ್ದಿದ್ದಾರೆ. “ಅಗತ್ಯವಿರುವಾಗ ಸಹಾಯ ಮಾಡುವವನೇ ನಿಜವಾದ ಸ್ನೇಹಿತ ಎಂಬ ಮಾತಿದೆ. ಪೆಸಿಫಿಕ್ ದ್ವೀಪ ರಾಷ್ಟ್ರಗಳು ಕಷ್ಟದಲ್ಲಿದ್ದಾಗ ಭಾರತ ನಿಮ್ಮೊಡನೆ ನಿಂತಿದೆ. ನಿಮ್ಮ ಆದ್ಯತೆಗಳನ್ನು ನಾವು ಗೌರವಿಸುತ್ತೇವೆ. ಪೆಸಿಫಿಕ್ ರಾಷ್ಟ್ರಗಳ ಸಮಗ್ರತೆ, ಸಾರ್ವಭೌಮತೆಯನ್ನೂ ನಾವು ಗೌರವಿಸುತ್ತೇವೆ. ನಮ್ಮ ಮೇಲೆ ನೀವು ಸಂಪೂರ್ಣ ವಿಶ್ವಾಸವಿಡಬಹುದು’ ಎಂದು ಹೇಳಿದ್ದಾರೆ.
ಜತೆಗೆ, ದ್ವೀಪರಾಷ್ಟ್ರಗಳಿಗಾಗಿ ಆರೋಗ್ಯಸೇವೆ, ಸೈಬರ್‌ಸ್ಪೇಸ್, ಸಣ್ಣ ಮತ್ತು ಮಧ್ಯಮ ಉದ್ದಿಮೆ ಸೇರಿದಂತೆ ಬೇರೆ ಬೇರೆ ವಲಯಗಳಲ್ಲಿ ಹೊಸ ಅಭಿವೃದ್ಧಿ ಯೋಜನೆಗಳನ್ನು ಕೂಡ ಮೋದಿ ಘೋಷಿಸಿದ್ದಾರೆ.
“ತಿರುಕ್ಕುರಳ್” ಅನುವಾದಿತ ಕೃತಿ ಬಿಡುಗಡೆ:
ಭಾರತದ ಚಿಂತನೆ ಹಾಗೂ ಸಂಸ್ಕೃತಿಯನ್ನು ಪೆಸಿಫಿಕ್ ರಾಷ್ಟ್ರದ ಜನರಿಗೂ ತಲುಪಿಸುವ ಉದ್ದೇಶದಿಂದ ಟೋಕ್ ಪಿಸಿನ್ ಭಾಷೆಗೆ ಅನುವಾದಿಸಲಾಗಿರುವ ತಮಿಳಿನ “ತಿರುಕ್ಕುರಳ್’ ಕೃತಿಯನ್ನು ಪ್ರಧಾನಿ ಮೋದಿ ಮತ್ತು ಪಪುವಾ ನ್ಯೂಗಿನಿ ಪ್ರಧಾನಿ ಜೇಮ್ಸ್ ಮರಾಪೆ ಜಂಟಿಯಾಗಿ ಬಿಡುಗಡೆಗೊಳಿಸಿದರು. ಟೋಕ್ ಪಿಸಿನ್ ಎನ್ನುವುದು ಪಪುವಾ ನ್ಯೂಗಿನಿ ದೇಶದ ಅಧಿಕೃತ ಭಾಷೆಯಾಗಿದೆ.
Related Articles
ನ್ಯೂಗಿನಿ ಪ್ರವಾಸ ಮುಗಿಸಿದ ಮೋದಿಯವರು ಸೋಮವಾರ ಮಧ್ಯಾಹ್ನ ಆಸ್ಟ್ರೇಲಿಯಾಗೆ ತೆರಳಿದ್ದಾರೆ. 24ರವರೆಗೂ ಆಸ್ಟ್ರೇಲಿಯಾದಲ್ಲೇ ಇರುವ ಪ್ರಧಾನಿ ಮೋದಿ ಅಲ್ಲಿನ ಪ್ರಧಾನಿ ಆ್ಯಂಥೊನಿ ಆಲ್ಬನೀಸ್‌ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಸಿರಿಧಾನ್ಯಗಳ ಖಾದ್ಯ
ಫಿಪಿಕ್ ಶೃಂಗದಲ್ಲಿ ಭಾಗಿಯಾದ ಪ್ರತಿನಿಧಿಗಳಿಗೆಂದು ಪ್ರಧಾನಿ ಮೋದಿ ಏರ್ಪಡಿಸಿದ್ದ ಔತಣಕೂಟದಲ್ಲಿ ಸಿರಿಧಾನ್ಯಗಳು ಸೇರಿದಂತೆ ಭಾರತದ ವಿವಿಧ ಖಾದ್ಯಗಳು ಗಮನ ಸೆಳೆದವು. ಖಾಂಡವಿ, ಸಿರಿಧಾನ್ಯ ಮತ್ತು ತರಕಾರಿ ಸೂಪ್, ಮಲಾಯಿ ಕೋಫ್ತಾ, ರಾಜಸ್ಥಾನಿ ರಾಗಿ ಗಟ್ಟಾ ಕರಿ, ದಾಲ್, ಸಿರಿಧಾನ್ಯ ಬಿರಿಯಾನಿ, ನನ್ನು ಫುಲ್ಕಾ, ಮಸಾಲಾ ಚಾಸ್, ಪಾನ್ ಕುಲ್ಫಿ, ಮಲ್ಪುವಾ ಮುಂತಾದ ಭಾರತೀಯ ಖಾದ್ಯಗಳನ್ನು ಪ್ರತಿನಿಧಿಗಳು ಸವಿದರು.
ಪ್ರಧಾನಿ ಫಿಜಿಯ ಅತ್ಯುನ್ನತ ನಾಗರಿಕ ಗೌರವ ಪ್ರದಾನ
ಪಪುವಾ ನ್ಯೂ ಗಿನಿ ಮತ್ತು ಫಿಜಿಯ ಅತ್ಯುನ್ನತ ನಾಗರಿಕ ಪ್ರಶಸ್ತಿ “ದ ಕಂಪ್ಯಾನಿಯನ್ ಆಫ್ ದ ಆರ್ಡರ್ ಆಫ್ ಫಿಜಿ’ಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಪ್ರದಾನ ಮಾಡಲಾಗಿದೆ. ಪೋರ್ಟ್ ಮೋರ್ಸ್‌ಬೆಯಲ್ಲಿ ಮೂರನೇ ಇಂಡೋ- ಪೆಸಿಫಿಕ್ ದ್ವೀಪರಾಷ್ಟ್ರಗಳ ಸಹಕಾರ ಸಮ್ಮೇಳನ ವೇಳೆಯಲ್ಲಿಯೇ ಈ ಗೌರವವನ್ನು ಪಪುವಾ ನ್ಯೂ ಗಿನಿಯ ಗವರ್ನರ್ ಜನರಲ್ ಸರ್ ಬಾಬ್ ದಾಡೆ ಪ್ರದಾನ ಮಾಡಿದ್ದಾರೆ. ಅದಕ್ಕಾಗಿ ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. “ಇದು ದೇಶಕ್ಕೆ ಸಂದ ಅತ್ಯುನ್ನತ ನಾಗರಿಕ ಗೌರವ. ಅದನ್ನು ಸ್ವೀಕರಿಸಿದವರಿಗೆ ಮುಖ್ಯಸ್ಥ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ” ಎಂದು ನವದೆಹಲಿಯಲ್ಲಿ ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ. ಫಿಜಿ ಮತ್ತು ಪಪುವಾ ನ್ಯೂ ಗಿನಿ ರಾಷ್ಟ್ರಗಳ ಹೊರತಾದ ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಈ ಗೌರವ ಪ್ರಾಪ್ತವಾಗಿದೆ. ಪ್ರಧಾನಿ ಮೋದಿಯವರು ಈ ಗೌರವವನ್ನು ದೇಶಕ್ಕೆ ಸಮರ್ಪಿಸಿದ್ದಾರೆ.