Advertisement

ನಮಾಜ್‌ಗೆ ಮಸೀದಿ ಬೇಕಾಗಿಲ್ಲ ಎಂಬ 1994ರ ತೀರ್ಪಿಗೆ ಒಪ್ಪಿಗೆ

05:05 AM Sep 28, 2018 | Team Udayavani |

ಹೊಸದಿಲ್ಲಿ: ‘ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ. ನಮಾಜ್‌ಗೆ ಮಸೀದಿಯೇ ಬೇಕಾಗಿಲ್ಲ’ ಎಂದು 1994ರಲ್ಲಿ ನೀಡಿದ ತೀರ್ಪನ್ನು ಪುನರ್‌ ವಿಮರ್ಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಜತೆಗೆ ಅದನ್ನು ಐವರು ಸದಸ್ಯರ ನ್ಯಾಯಪೀಠಕ್ಕೆ ವರ್ಗಾಯಿಸಲೂ ಮುಖ್ಯ ನ್ಯಾ| ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಒಪ್ಪಿಲ್ಲ. ಗುರುವಾರ ಸರ್ವೋಚ್ಚ ನ್ಯಾಯಾಲಯ ನೀಡಿದ ಈ ಮಹತ್ವದ ತೀರ್ಪನ್ನು ಆರ್‌ಎಸ್‌ಎಸ್‌, ಬಿಜೆಪಿ ಹಾಗೂ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ ಸ್ವಾಗತಿಸಿದ್ದು, ಆದಷ್ಟು ಬೇಗ ಭೂವಿವಾದ ಸಂಬಂಧವೂ ನ್ಯಾಯಯುತ ತೀರ್ಪು ಹೊರಬೀಳಲಿ ಎಂದಿವೆ.

Advertisement

ಇದೇ ವೇಳೆ, ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣ ಕುರಿತು ಪ್ರಸ್ತಾವಿಸಿರುವ ಮುಖ್ಯ ನ್ಯಾ| ದೀಪಕ್‌ ಮಿಶ್ರಾ, ಸಿವಿಲ್‌ ವಿವಾದಗಳನ್ನು ಸಾಕ್ಷ್ಯಗಳ ಆಧಾರದ ಮೇಲೆ ನಿರ್ಧಾರ ಮಾಡಬೇಕು. ಈ ವಿವಾದದ ಮೇಲೆ ಹಿಂದಿನ ತೀರ್ಪು ಪರಿಣಾಮ ಬೀರುವುದಿಲ್ಲ. ಕೇವಲ ನಿಗದಿತ ಸ್ಥಳವನ್ನು ವಶಪಡಿಸಿಕೊಳ್ಳುವುದರ ಮೇಲೆ ಮಾತ್ರ ಆದೇಶ ಅನ್ವಯ ಎಂದು ಸ್ಪಷ್ಟಪಡಿಸಿದ್ದಾರೆ.

‘ಎಲ್ಲ ಧರ್ಮಗಳು, ಚರ್ಚುಗಳು, ಮಸೀದಿಗಳು ಮತ್ತು ದೇಗುಲಗಳನ್ನು ಸಮಾನವಾಗಿ ಕಾಣಬೇಕು. 1994ರ ತೀರ್ಪಿನಂತೆ ಎಲ್ಲ ಧಾರ್ಮಿಕ ಸ್ಥಳಗಳನ್ನೂ ವಶಪಡಿಸಿಕೊಳ್ಳಲು ಅವಕಾಶ ಇದೆ’ ಎಂದು ಮುಖ್ಯನ್ಯಾಯಮೂರ್ತಿ ನೇತೃತ್ವದ ಪೀಠ ಅಭಿಪ್ರಾಯಪಟ್ಟಿತು.

ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇ ಎಂಬ ಕುರಿತು ವಿಚಾರಣೆಗೆ ವಿಸ್ತೃತ ಪೀಠದ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. 2:1 ಅಂತರದಲ್ಲಿ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ಪೀಠದ ಮತ್ತೂಬ್ಬ ಸದಸ್ಯರಾದ ನ್ಯಾ| ಅಬ್ದುಲ್‌ ನಜೀರ್‌ ಅವರು ಭಿನ್ನ ಅಭಿ ಪ್ರಾಯ ವ್ಯಕ್ತಪಡಿಸಿದ್ದು, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂದಿದ್ದಾರೆ. ಇದರ ಜತೆಗೆ ನೂತನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಅ.29ರಿಂದ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಭೂವಿವಾದದ ವಿಚಾರಣೆಯನ್ನು ಆರಂಭಿಸುವುದಾಗಿಯೂ ಸುಪ್ರೀಂಕೋರ್ಟ್‌ ಹೇಳಿದೆ.

ನ್ಯಾ| ಅಶೋಕ್‌ ಭೂಷಣ್‌ ತಮ್ಮ ತೀರ್ಪಿನಲ್ಲಿ, ಎಲ್ಲ ಧರ್ಮಗಳನ್ನು ಸರಕಾರ ಸಮಾನವಾಗಿ ಕಾಣಬೇಕು ಮತ್ತು ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎನ್ನುವ ವಿಚಾರದಲ್ಲಿ ಸಾಂವಿಧಾನಿಕ ಪೀಠದ ತೀರ್ಪು ಜಮೀನು ವಶಪಡಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತ ಎಂದು ಹೇಳಿದ್ದಾರೆ. ಜತೆಗೆ 1994ರಲ್ಲಿ ಐವರು ಸದಸ್ಯರ ನ್ಯಾಯಪೀಠ ಯಾವ ಸಂದರ್ಭದಲ್ಲಿ ತೀರ್ಪು ನೀಡಿತ್ತು ಎಂಬುದನ್ನು ಪರಿಗಣಿಸಬೇಕಾಗಿದೆ ಎಂದು ಹೇಳಿದ್ದಾರೆ.

Advertisement

ಪ್ರಾರ್ಥನೆ (ನಮಾಜ್‌) ಅನ್ನು ಎಲ್ಲಿ ಬೇಕಾದರೂ ಸಲ್ಲಿಸಬಹುದು. ಅದಕ್ಕೆ ಮಸೀದಿ ಅಗತ್ಯವಿಲ್ಲ ಎಂದು ಹಿಂದಿನ ತೀರ್ಪಿನಲ್ಲಿ ಹೇಳಿದ್ದನ್ನು ಒಪ್ಪಿಕೊಂಡ ನ್ಯಾ| ಭೂಷಣ್‌ ‘ಈ ಪ್ರಕರಣ ಅಯೋಧ್ಯೆಯ ಮುಖ್ಯ ವಿಚಾರಕ್ಕೆ ಒಳಪಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಒಪ್ಪದ ನ್ಯಾ| ಅಬ್ದುಲ್‌ ನಜೀರ್‌
ತ್ರಿಸದಸ್ಯ ಪೀಠದ ಮತ್ತೂಬ್ಬ ಸದಸ್ಯ ನ್ಯಾ| ಎಸ್‌.ಅಬ್ದುಲ್‌ ನಜೀರ್‌ ಅವರು ಉಳಿದಿಬ್ಬರು ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ ಅಭಿಪ್ರಾಯ ಒಪ್ಪಲಿಲ್ಲ. ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗ ಹೌದೋ ಅಲ್ಲವೋ ಎನ್ನುವುದನ್ನು ವಿಸ್ತೃತ ಪೀಠವೇ ನಿರ್ಧಾರ ಮಾಡಬೇಕು ಎಂದಿದ್ದಾರೆ. ಈ ವೇಳೆ ಅವರು 68 ವರ್ಷಗಳ ಹಿಂದೆ ಶೀರೂರು ಮಠ ಪ್ರಕರಣದಲ್ಲಿ ಸು. ಕೋ. ನೀಡಿದ್ದ ತೀರ್ಪು, ಬೊಹ್ರಾ ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳ ಅಂಗಛೇದನ ಪ್ರಕರಣವನ್ನು ವಿಸೃತ್ತ ಪೀಠಕ್ಕೆ ವಹಿಸಿದ್ದನ್ನು ಪ್ರಸ್ತಾವಿಸಿದ್ದಾರೆ.

ಅ. 29ರಿಂದ ವಿಚಾರಣೆ
ಅಯೋಧ್ಯೆ ಸ್ಥಳದ ಮಾಲಕತ್ವ ವಿವಾದಕ್ಕೆ ಸಂಬಂಧಿಸಿದಂತೆ ಹೊಸದಾಗಿ ರಚನೆಯಾಗಲಿರುವ ತ್ರಿಸದಸ್ಯ ನ್ಯಾಯಪೀಠ ಅ.29ರಿಂದ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ನ್ಯಾಯಪೀಠ ಹೇಳಿದೆ.

ತೀರ್ಪಿನ ಪ್ರಮುಖ ಅಂಶಗಳು
1. 1994ರಲ್ಲಿ ನೀಡಿದ್ದ ತೀರ್ಪಿನ ಅಂಶಗಳು ಅಯೋಧ್ಯೆಯ ಮುಖ್ಯ ಪ್ರಕರಣದ ತೀರ್ಪಿನ ಮೇಲೆ ಪರಿಣಾಮ ಬೀರುವುದಿಲ್ಲ

2. ಅ.29ರಿಂದ ಅಯೋಧ್ಯೆಯ ಮುಖ್ಯ ಭೂವಿವಾದಕ್ಕೆ ಸಂಬಂಧಿಸಿ ದಿನವಹಿ ವಿಚಾರಣೆ ಆರಂಭಿಸುವ ಬಗ್ಗೆ ನ್ಯಾಯಪೀಠದಿಂದ ತೀರ್ಮಾನ

3. ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುವಂತಾಗಬೇಕು. ಇತರರ ನಂಬಿಕೆ ಮೇಲೆ ವಿಶ್ವಾಸವಿರಬೇಕು ಎಂದು ರಾಜ ಅಶೋಕ ಬೋಧಿಸಿದ್ದನ್ನು ಗೌರವಿಸಬೇಕು.

4. ಧರ್ಮದಲ್ಲಿ ಏನು ಸೇರಿಕೊಂಡಿದೆ ಎನ್ನುವು ದನ್ನು ವಿಮರ್ಶೆ ಮಾಡಲು ವಿಸ್ತೃತ ನ್ಯಾಯಪೀಠಕ್ಕೆ ವಹಿಸಬೇಕು. ಅದಕ್ಕೆ ಸಾಂವಿಧಾನಿಕ ಪೀಠವೇ ಅಗತ್ಯವಾಗಿದೆ- ನ್ಯಾ| ಎಸ್‌.ಅಬ್ದುಲ್‌ ನಜೀರ್‌

5. ಇಸ್ಮಾಯಿಲ್‌ ಫಾರೂಕಿ ಪ್ರಕರಣದಲ್ಲಿ ಪ್ರಾರ್ಥನೆ ಸಲ್ಲಿಸಲು ಮಸೀದಿ ಅಗತ್ಯವಿಲ್ಲ ಎಂದು ಹೇಳಿದ್ದರಿಂದಲೇ ಅಲಹಾಬಾದ್‌ ಹೈಕೋರ್ಟ್‌ ವಿವಾದಿತ ಸ್ಥಳವನ್ನು 3 ಭಾಗವಾಗಿ ವಿಭಜಿಸಿ ತೀರ್ಪು ನೀಡಿತ್ತು. ಹೀಗಾಗಿ ವಿಸ್ತೃತ ಪೀಠದಿಂದ ವಿಮರ್ಶೆಯಾಗಬೇಕು.
– ನ್ಯಾ| ಎಸ್‌.ನಜೀರ್‌

– 2:1 ಅಂತರದಲ್ಲಿ ತೀರ್ಮಾನ ಪ್ರಕಟಿಸಿದ ನ್ಯಾಯಪೀಠ

– ಅ. 29ರಿಂದ ಅಯೋಧ್ಯೆ ಕೇಸು ವಿಚಾರಣೆ 

– ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ

ಶೀರೂರು ಮಠದ ಉಲ್ಲೇಖ
ಉಡುಪಿ:
ಅಯೋಧ್ಯೆ ಕುರಿತು ತೀರ್ಪು ನೀಡುವಾಗ ಸರ್ವೋಚ್ಚ ನ್ಯಾಯಾಲಯದ ನ್ಯಾ| ಅಬ್ದುಲ್‌ ನಜೀರ್‌ ಅವರು ಉಡುಪಿ ಶೀರೂರು ಮಠ ವನ್ನು ಉಲ್ಲೇಖೀಸಿದ್ದಾರೆ. ಅಂದು ತ್ರಿಸದಸ್ಯ ಪೀಠದಿಂದ ಪಂಚ ಸದಸ್ಯರ ಪೀಠಕ್ಕೆ ಹೋಗಿ ತೀರ್ಪು ಹೊರಬಿದ್ದಿತ್ತು.

1950ರ ದಶಕದಲ್ಲಿ ರಾಜ್ಯ ಸರಕಾರ ಶ್ರೀಕೃಷ್ಣ ಮಠದ ಆಡಳಿತ ವಹಿಸಿಕೊಳ್ಳಲು ಮುಂದಾದಾಗ ಶೀರೂರು ಮಠದ ಶ್ರೀ ಲಕ್ಷ್ಮೀಂದ್ರತೀರ್ಥರು ಸುಪ್ರೀಂ ಕೋರ್ಟಲ್ಲಿ ಕೇಸು ದಾಖಲಿಸಿದ್ದರು. ಕೋರ್ಟ್‌ 1954ರಲ್ಲಿ ತೀರ್ಪು ನೀಡಿತ್ತು. ಆಗ ಶ್ರೀ ಲಕ್ಷ್ಮೀಂದ್ರ ತೀರ್ಥರು ಮಠಗಳು ಬೇರೆ, ದೇವಸ್ಥಾನಗಳು ಬೇರೆ; ಮಠಗಳ ಮೇಲೆ ಸರಕಾರ ನಿಯಂತ್ರಣ ಇರಿಸಿ ಕೊಳ್ಳ ಬಹುದೇ ವಿನಾ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ವಾದಿಸಿದ್ದರು. ನ್ಯಾಯಪೀಠವು ಮಠಗಳು 53 ನಿಯಮ ಪಾಲಿಸಬೇಕು, ಪಾಲಿಸದೆ ಇದ್ದಾಗ ಮಾತ್ರ ಸರಕಾರ ಹಸ್ತಕ್ಷೇಪ ನಡೆಸಬಹುದು ಎಂದು ತೀರ್ಪು ನೀಡಿತು. ಆ ಬಳಿಕ ಶ್ರೀಕೃಷ್ಣ ಮಠವು ಅಷ್ಟ ಮಠಗಳ ಅಧಿಕಾರಕ್ಕೆ ಒಳಪಟ್ಟಿತು. ಇದು ಶೀರೂರು ಮಠದ ಲಕ್ಷ್ಮೀಂದ್ರತೀರ್ಥ ಪ್ರಕರಣ ಎಂದು ಪ್ರಸಿದ್ಧ ವಾಗಿದೆ. ಇದು ಇಂದಿಗೂ ಕಾನೂನು ಪಠ್ಯದಲ್ಲಿದೆ.

ದೇಶದ ಅನುಕೂಲಕ್ಕಾಗಿ ಅಯೋಧ್ಯೆ ವಿವಾದ ಶೀಘ್ರವೇ ಇತ್ಯರ್ಥಗೊಳ್ಳಬೇಕು. ಅದನ್ನೇ ಹೆಚ್ಚಿನವರು ಬಯಸುತ್ತಾರೆ.
– ಯೋಗಿ ಆದಿತ್ಯನಾಥ್‌, ಉ. ಪ್ರದೇಶ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next