ಭೋಪಾಲ್: ಸ್ವಾತಂತ್ರ್ಯ ಬಂದು 75 ದಶಕಗಳ ಬಳಿಕ ಈಗ ಪಾಕಿಸ್ಥಾನದ ಜನತೆಗೆ ವಿಭಜನೆಯ ನಿರ್ಧಾರ ತಪ್ಪು ಎಂದು ಅರಿವಾಗುತ್ತಿದೆ. ಪಾಕ್‌ನ ಜನರು ಅಸಂತುಷ್ಟರಾಗಿದ್ದು ವಿಭಜನೆಯ ನಿರ್ಣಯದಿಂದ ಪರಿತಪಿಸುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಆಯೋಜಿಸಲಾಗಿದ್ದ ಸಿಂಧ್ ಸಮುದಾಯದ ಯುವಕ್ರಾಂತಿಕಾರಿ ಹೇಮು ಕಲಾನಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವತ್ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿ ಸಿಂಧ್ ಸಮುದಾಯದ ಸಂಸ್ಕೃತಿ, ಮೌಲ್ಯಗಳಿಗೆ ಬೆಲೆ ನೀಡಿ, ಅವಿಭಜಿತ ಭಾರತದ ಭಾಗವಾಗಿದ್ದ ಸಿಂಧ್ ಸಮುದಾಯ ಈ ಭಾರತಕ್ಕೆ (ವಿಭಜಿತ) ಆಗಮಿಸಿತು. ನಿಮ್ಮ ಕೊಡುಗೆ ಅಸಾಧಾರಣ ಎಂದು ಶ್ಲಾಘಿಸಿದರು.
ಇದೇ ವೇಳೆ ನಮ್ಮಿಂದ ವಿಭಜನೆಗೊಂಡು ಹೋದವರು ಸುಖವಾಗಿದ್ದಾರೇನು? ಇಲ್ಲ! ಇಂದಿಗೆ ಅವರೆಲ್ಲರಿಗೂ ತಪ್ಪಿನ ಅರಿವಾಗಿದೆ ಎಂದಿದ್ದಾರೆ. ಪಾಕಿಸ್ಥಾನದ ಕುತಂತ್ರಗಳ ಕುರಿತು ಮಾತನಾಡಿದ ಅವರು, ದಾಳಿ ನಮ್ಮ ಸಂಸ್ಕೃತಿ ಅಲ್ಲ. ಆದರೆ ದಾಳಿ ಮಾಡುವವರನ್ನು ಹಿಮ್ಮೆಟ್ಟಿಸುವುದು ನಮ್ಮ ಸಂಸ್ಕತಿ. ಸ್ವರಾಷ್ಟ್ರ ರಕ್ಷಣೆಗಾಗಿ ಈ ನೀತಿ ಅನುಸರಿಸಿದ್ದೇವೆ. ಅನುಸರಿಸುತ್ತಲೇ ಇರುತ್ತೇವೆ ಎಂದು ಭಾಗವತ್ ಪ್ರತಿಪಾದಿಸಿದ್ದಾರೆ.