ಕಲಬುರಗಿ: ಸ್ವಾತಂತ್ರ್ಯ ಪಡೆದ ನಂತರ ಶಿಕ್ಷಣ, ವ್ಯಾಪಾರ, ಮಾನವ ಸಂಪನ್ಮೂಲ, ರಾಜಕೀಯ, ಆರ್ಥಿಕ, ರಕ್ಷಣಾ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ವಿಶ್ವಕ್ಕೆ ಜ್ಞಾನ ಪೂರೈಸುವಂತಹ ಶಕ್ತಿ ಹೊಂದುವ ಮೂಲಕ ಭಾರತ ವಿಶ್ವದಲ್ಲಿಯೆ ಪ್ರಬುದ್ಧ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಉತ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಎಸ್.ಎಲ್. ನಾರಾಯಣಸ್ವಾಮಿ ಹೇಳಿದರು.
ಹೈಕೋರ್ಟ್ ಪೀಠದ ಆವರಣದಲ್ಲಿ 72ನೇ ಸ್ವಾತಂತ್ರೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತವು ಶಾಂತಿಪ್ರಿಯ ಮತ್ತು ಸರ್ವ ಧರ್ಮಗಳ ತವರೂರು. ಇಲ್ಲಿ ಇತರೆ ಧರ್ಮಗಳ ಉತ್ತಮ ಆಚಾರ-ವಿಚಾರಗಳನ್ನು ಅಪ್ಪಿಕೊಳ್ಳುವಂತಹ ಸನಾತನ ಹಿಂದು ಧರ್ಮವನ್ನು ಕಾಣಬಹುದಾಗಿದೆ ಎಂದರು.
ಸ್ವಾತಂತ್ರ್ಯ ಪೂರ್ವಕ್ಕೆ ಹೋಲಿಸಿದಲ್ಲಿ ಇಂದು ದೇಶದಲ್ಲಿ ಅನೇಕ ರೀತಿಯ ಪ್ರಗತಿ ಆಗಿದೆ. ಸ್ವಾತಂತ್ರ್ಯ ನಮಗೇನು ಸಲಿಸಾಗಿ ದೊರೆತಿಲ್ಲ. 1857ರಲ್ಲಿ ಆರಂಭವಾದ ಸ್ವಾತಂತ್ರ್ಯದ ಕಿಚ್ಚು ಕ್ರಮೇಣ 1947ರ ವರೆಗೆ ಸುದೀರ್ಘವಾಗಿ ಅನೇಕ ಹೋರಾಟದ ರೂಪಗಳಲ್ಲಿ ಸಾಗಿತು. ಈ ಅವಧಿಯಲ್ಲಿ ಬ್ರಿಟೀಷರಿಂದ ನಮ್ಮ ಪೂರ್ವಜರು ಅನುಭವಿಸಿದ ಕಷ್ಟಗಳು ಹೇಳತೀರದು. ಅವರ ತ್ಯಾಗ, ಬಲಿದಾನ ಚಿರಸ್ಮರಣೀಯ ಎಂದು ಹೇಳಿದರು.
ಜಿಲ್ಲಾ ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ ಮಾತನಾಡಿದರು. ಹೈಕೋರ್ಟ್ ನ್ಯಾಯಮೂರ್ತಿ ಎಚ್. ಸತ್ಯನಾರಾಯಣ, ನ್ಯಾಯಮೂರ್ತಿ ಕೆ. ಫಣೀಂದ್ರ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ.ಟಿ. ಕಟ್ಟಿಮನಿ, ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ಬಿ. ಅಸೋದೆ, ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯ ಕಾಶೀನಾಥ ಮೋತಕಪಲ್ಲಿ ಹಾಗೂ ವಿವಿಧ ಶ್ರೇಣಿಯ ಹಿರಿಯ-ಕಿರಿಯ ನ್ಯಾಯಾಧೀಶರು, ನ್ಯಾಯವಾದಿಗಳು, ಬಾರ್ ಕೌನ್ಸಿಲ್ ಸದಸ್ಯರು, ಉಚ್ಚ ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.
ಕಲಬುರಗಿ ಉತ್ಛ ನ್ಯಾಯಾಲಯ ಘಟಕದ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್.ಜಿ. ಮಠ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಗೋಪಾಲ ಯಾದವ್ ವಂದಿಸಿದರು, ಅನುರಾಧಾ ನಿರೂಪಿಸಿದರು.