ಕಠ್ಮಂಡು: ಇಂಧನ ಕ್ಷೇತ್ರದಲ್ಲಿ ಭಾರತೀಯ ಉದ್ದಿಮೆಗಳು ಹೆಚ್ಚಿನ ಪ್ರಮಾಣದ ಬಂಡವಾಳದ ಹೂಡಿಕೆ ಮಾಡಬೇಕು ಎಂದು ನೇಪಾಳ ಸರ್ಕಾರ ಪ್ರತಿಪಾದಿಸಿದೆ. ವಿಶೇಷವಾಗಿ ಜಲವಿದ್ಯುತ್ ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು ಎಂದು ನೇಪಾಳದ ವಿದೇಶಾಂಗ ಸಚಿವ ಎನ್.ಪಿ.ಸೌದ್ ಹೇಳಿದ್ದಾರೆ. ಭಾರತದ ವಿದ್ಯುತ್ ಉತ್ಪಾದನಾ ಕಂಪನಿಗಳ ಜತೆಗೆ ಬಂಡವಾಳ ಹೂಡಿಕೆ ಮಾಡಿ, ಹೆಚ್ಚಿನ ವಿದ್ಯುತ್ ಮಾಡಿದರೆ ನೇಪಾಳಕ್ಕೂ ಅನುಕೂಲವಾಗುವುದು ಮಾತ್ರವಲ್ಲದೆ, ಉಳಿಕೆ ವಿದ್ಯುತ್ ಅನ್ನು ಬಾಂಗ್ಲಾದೇಶಕ್ಕೂ ಮಾರಾಟ ಮಾಡಬಹುದು ಎನ್ನುವ ಲೆಕ್ಕಾಚಾರದಲ್ಲಿ ನೇಪಾಳ ಇದೆ.
ನೇಪಾಳ ಪ್ರಧಾನಿ ಪ್ರಚಂಡ ಅವರು ಬುಧವಾರದಿಂದ ನಾಲ್ಕು ದಿನಗಳ ಕಾಲ ಭಾರತ ಪ್ರವಾಸ ಆರಂಭಿಸಲಿರುವಂತೆಯೇ “ಪಿಟಿಐ” ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನ ನೀಡಿದ ಸೌದ್, ನೇಪಾಳದಿಂದ ದೇಶದ ಪ್ರಮುಖ ನಗರಗಳಿಗೆ ವಿಮಾನಯಾನ, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಮಾತುಕತೆ ಮತ್ತು ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂದರು. ಭೇಟಿಯ ಅವಧಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್, ವಿದೇಶಾಂಗ ಕಾರ್ಯದರ್ಶಿ ವಿನಯ ಮೋಹನ್ ಕ್ವಾಟ್ರಾ ಸೇರಿದಂತೆ ಪ್ರಮುಖರನ್ನು ಭೇಟಿಯಾಗಲಿದ್ದಾರೆ.