ಹೊಸದಿಲ್ಲಿ: ಭಾರತೀಯ ವನಿತೆಯರ ಟಿ20 ವಿಶ್ವಕಪ್ ಭವಿಷ್ಯ ಅಗ್ರ ಕ್ರಮಾಂಕದ ಬ್ಯಾಟಿಂಗ್ ಯಶಸ್ಸನ್ನು ಅವಲಂಬಿಸಿದೆ ಎಂಬುದಾಗಿ ಲೆಜೆಂಡ್ರಿ ಬ್ಯಾಟರ್, ಮಾಜಿ ನಾಯಕಿ ಮಿಥಾಲಿ ರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಅಗ್ರ ಕ್ರಮಾಂಕದ ಯಶಸ್ಸು ಭಾರತದ ಪಾಲಿಗೆ ನಿರ್ಣಾಯಕ. ಸ್ಮತಿ ಮಂಧನಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಮ್ಯಾಚ್ ವಿನ್ನರ್ ಆಗಲಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಕೂಡ ಉತ್ತಮ ಫಾರ್ಮ್ ನಲ್ಲಿದ್ದಾರೆ. ಉಳಿದವರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದೆ. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳಿಂದ ಬಲಿಷ್ಠ ಸವಾಲು ಎದುರಾಗಲಿದೆ. ಇವೆರಡನ್ನೂ ಸೋಲಿಸುವುದು ಅತ್ಯಗತ್ಯ’ ಎಂದು ಮಿಥಾಲಿ ಹೇಳಿದರು .
“ನಮ್ಮ ಬೌಲಿಂಗ್ ಕೂಡ ಅಗ್ನಿಪರೀಕ್ಷೆಗೆ ಒಳಗಾಗಲಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ವನಿತಾ ತ್ರಿಕೋನ ಸರಣಿ ಆಡಿದ್ದೊಂದು ಲಾಭದಾಯಕ ಬೆಳವಣಿಗೆ. ಚೊಚ್ಚಲ ಅಂಡರ್-19 ವಿಶ್ವಕಪ್ ಗೆಲುವು ನಮ್ಮ ಸೀನಿಯರ್ಗೆ ಖಂಡಿತವಾಗಿಯೂ ಬೂಸ್ಟ್ ಆಗಬೇಕಿದೆ. ಇದರಲ್ಲಿ ಆಡಿದ ಶಫಾಲಿ ವರ್ಮ ಮತ್ತು ರಿಚಾ ಘೋಷ್ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬರಬೇಕಿದೆ’ ಎಂದರು ಮಿಥಾಲಿ ರಾಜ್.
ಆಸ್ಟ್ರೇಲಿಯ ಫೇವರಿಟ್
ಮಿಥಾಲಿ ರಾಜ್ ಪ್ರಕಾರ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ನೆಚ್ಚಿನ ತಂಡವಾಗಿದೆ. “ಹೌದು, ಆಸ್ಟ್ರೇಲಿಯ ಹೆಚ್ಚು ಬಲಿಷ್ಠವಾಗಿದ್ದು, ಇವರೇ ಫೇವರಿಟ್ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಗೆಲುವಿಗೆ ಅವರು ಅರ್ಹರೂ ಹೌದು. ಅವರ ಬ್ಯಾಟಿಂಗ್ ಲೈನಪ್ ಅತ್ಯಂತ ಬಲಿಷ್ಠವಾಗಿರುವ ಕಾರಣ ಸೋಲಿಸುವುದು ಬಹಳ ಕಷ್ಟ. ಬೇರೆ ತಂಡಗಳಿಗಿಂತ ಹೆಚ್ಚು ಸಂಖ್ಯೆಯ ಬಿಗ್ ಹಿಟ್ಟರ್ ಇದ್ದಾರೆ. ಒಬ್ಬರಲ್ಲದಿದ್ದರೆ ಮತ್ತೂಬ್ಬರು ಇನ್ನಿಂಗ್ಸ್ ಬೆಳೆಸಬಲ್ಲರು. ಇಂಗ್ಲೆಂಡ್ ಮತ್ತು ಭಾರತವನ್ನೂ ಕಡೆಗಣಿಸಲಾಗದು’ ಎಂದರು.
Related Articles
ಸ್ಥಳೀಯ ಪ್ರತಿಭೆಗಳಿಗೆ ಅವಕಾಶ
ಟಿ20 ಲೀಗ್‌ಗಳಿಂದ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಲಭಿಸಲಿದೆ ಎಂದು ಮಿಥಾಲಿ ರಾಜ್ ಹೇಳಿದರು. “ವನಿತಾ ಲೀಗ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾದ್ದರಿಂದ ಸ್ಥಳೀಯ ಪ್ರತಿಭಾವಂತ ಆಟಗಾರ್ತಿಯರಿಗೆ ವಿಶ್ವ ದರ್ಜೆಯ ಆಟಗಾರರೊಂದಿಗೆ ಆಡುವ, ಬೆರೆಯುವ ಅಪೂರ್ವ ಅವಕಾಶ ಲಭಿಸಲಿದೆ. ಆರ್ಥಿಕವಾಗಿಯೂ ಸಬಲರಾಗಲಿದ್ದಾರೆ. ಭಾರತದಲ್ಲಿ ಡಬ್ಲ್ಯುಪಿಎಲ್ ನಡೆಯುವುದು ವನಿತಾ ಕ್ರಿಕೆಟ್ ಬೆಳವಣಿಗೆಗೆ ಸಹಕಾರಿಯಾಗಲಿದೆ…’ ಎಂದರು.
ಈಗಾಗಲೇ ನಿವೃತ್ತರಾಗಿರುವ ಮಿಥಾಲಿ ರಾಜ್ ಡಬ್ಲ್ಯುಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಮತ್ತು ಸಲಹಾಗಾರ್ತಿಯಾಗಿ ಕರ್ತವ್ಯ ನಿಭಾಯಿಸಲಿದ್ದಾರೆ.