Advertisement

Liver: ಯಕೃತ್ತು ಕಸಿಗೊಳಗಾದ ಭಾರತದ ಮೊದಲ ಶಿಶು ಈಗ ವೈದ್ಯ!

08:48 PM Nov 18, 2023 | Team Udayavani |

ಚೆನ್ನೈ: ಸರಿಯಾಗಿ 25 ವರ್ಷಗಳ ಹಿಂದೆ ಅಂದರೆ 1998ರಲ್ಲಿ ತಮಿಳುನಾಡಿನ 20 ತಿಂಗಳ ಹಸುಗೂಸು ಸಂಜಯ್‌ ಕಂಡಸಾಮಿ, “ಭಾರತದಲ್ಲಿ ಯಶಸ್ವಿಯಾಗಿ ಯಕೃತ್ತು ಕಸಿ ಶಸ್ತ್ರಚಿಕಿತ್ಸೆಗೊಳಗಾದ ಮೊದಲ ಶಿಶು’ ಎಂಬ ಖ್ಯಾತಿಗೆ ಪಾತ್ರವಾಗಿ ಭಾರೀ ಸುದ್ದಿ ಮಾಡಿತ್ತು. ಈಗ ಅದೇ ಸಂಜಯ್‌ ಕಂಡಸಾಮಿ ಸ್ವತಃ ವೈದ್ಯರಾಗಿ ಕಂಚೀಪುರಂನ ಆಸ್ಪತ್ರೆಯೊಂದರಲ್ಲಿ ಸೇವೆ ಆರಂಭಿಸಿದ್ದಾರೆ!
ಸಂಜಯ್‌ ಕಂಡಸಾಮಿ ಹುಟ್ಟುವಾಗಲೇ ಬೈಲಿಯರಿ ಅಟ್ರೇಸಿಯಾ ಎಂಬ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು.

Advertisement

ಪಿತ್ತಜನಕಾಂಗದಿಂದ ಪಿತ್ತಕೋಶಕ್ಕೆ ಪಿತ್ತರಸವನ್ನು ಸಾಗಿಸುವ ನಾಳಗಳಲ್ಲಿ ಉಂಟಾಗುವ ಅಡಚಣೆಯನ್ನು ಬೈಲಿಯರಿ ಅಟ್ರೇಸಿಯಾ ಎನ್ನುತ್ತಾರೆ. ಇದರಿಂದಾಗಿ ಸಂಜಯ್‌ ಅವರ ಲಿವರ್‌ ವೈಫ‌ಲ್ಯವಾಗಿ, ಕಸಿ ಮಾಡಲೇಬೇಕಾದ ಅನಿವಾರ್ಯತೆ ಉಂಟಾಗಿತ್ತು. ಕುಟುಂಬದ ಜತೆ ಚರ್ಚಿಸಿದಾಗ ಸಂಜಯ್‌ ಅವರ ಅಪ್ಪ ಯಾವುದೇ ಹಿಂಜರಿಕೆಯಿಲ್ಲದೇ ಪುತ್ರನಿಗೆ ಯಕೃತ್ತು ದಾನ ಮಾಡಲು ಮುಂದೆ ಬಂದಿದ್ದರು. 1998ರಲ್ಲಿ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯರ ತಂಡವು ಸಂಜಯ್‌ ಅವರಿಗೆ ಈ ಜೀವ ರಕ್ಷಕ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ನಡೆಸಿತ್ತು. ಶಿಶುವೊಂದಕ್ಕೆ ಇಂಥ ಸವಾಲಿನ ಶಸ್ತ್ರಚಿಕಿತ್ಸೆ ನಡೆಸಿದ್ದು ಅದೇ ಮೊದಲು.

ತಾವು ಬೆಳೆಯುತ್ತಾ ತಮ್ಮ ಆರೋಗ್ಯ ಸ್ಥಿತಿ ಕುರಿತು ಅರಿತ ಸಂಜಯ್‌ ಅವರು, ತಾವೂ ಒಂದು ದಿನ ವೈದ್ಯನಾಗಬೇಕು ಎಂದು ಸಂಕಲ್ಪ ತೊಟ್ಟಿದ್ದರಂತೆ. ಅದರಂತೆ, ಈಗ ಅವರು ವೈದ್ಯರಾಗಿದ್ದಾರೆ. “ಬದುಕಿನಲ್ಲಿ ಯಾವುದೇ ಸವಾಲು ಎದುರಾದರೂ ಸಮರ್ಥವಾಗಿ ಎದುರಿಸಬಹುದು ಎಂಬುದು ಅರಿವಾಗಿದೆ. ನನ್ನ ಕೈಲಾದ ಮಟ್ಟಿಗೆ ಜೀವಗಳನ್ನು ಉಳಿಸಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ ಸಂಜಯ್‌ ಕಂಡಸಾಮಿ.

 

Advertisement

Udayavani is now on Telegram. Click here to join our channel and stay updated with the latest news.

Next