Advertisement

ಭಾರತದ ಮೊದಲ ಖಾಸಗಿ ತೇಜಸ್ ಎಕ್ಸ್ ಪ್ರೆಸ್ ನಲ್ಲಿ ವಿಮಾನ ಮಾದರಿ ಸೌಲಭ್ಯ ಸಿಗುತ್ತೆ!

10:45 AM Sep 06, 2019 | Nagendra Trasi |

ನವದೆಹಲಿ:ಐಆರ್ ಸಿಟಿಸಿ ನಿರ್ವಹಣೆಯಲ್ಲಿ ಭಾರತದ ಪ್ರಥಮ ಖಾಸಗಿ ರೈಲು ಸಂಚಾರ ನವರಾತ್ರಿಯಲ್ಲಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೋರೇಶನ್ ನಿರ್ವಹಣೆಯ ದೆಹಲಿ-ಲಕ್ನೋ ನಡುವೆ ಸಂಚರಿಸುವ ರೈಲು ಆಕ್ಟೋಬರ್ 4ರಿಂದ ಸೇವೆ ಆರಂಭಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

Advertisement

ಅಲ್ಲದೇ ಖಾಸಗಿ ವಲಯದಿಂದ ಅಹ್ಮದಾಬಾದ್-ಮುಂಬೈ ನಡುವೆ ಸಂಚರಿಸುವ ತೇಜಸ್ ಎಕ್ಸ್ ಪ್ರೆಸ್ ರೈಲು ಸಂಚಾರದ ದಿನಾಂಕದ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಾಗಿದೆ. ದೆಹಲಿ-ಲಕ್ನೋ ತೇಜಸ್ ಎಕ್ಸ್ ಪ್ರೆಸ್ ವಾರದ ಆರು ದಿನಗಳ ಕಾಲ ಸಂಚರಿಸಲಿದ್ದು, ಮಂಗಳವಾರ ತೇಜಸ್ ಸಂಚಾರ ಇಲ್ಲ ಎಂದು ಹೇಳಿದೆ.

ರೈಲಿನ ಆರಂಭಿಕ ಸಂಚಾರದ ಬಳಿಕ ಐಆರ್ ಸಿಟಿಸಿ ತೇಜಸ್ ಎಕ್ಸ್ ಪ್ರೆಸ್ ರೈಲಿನ ಸಂಚಾರದ ಹೊಣೆಗಾರಿಕೆಯನ್ನು ಖಾಸಗಿಯವರಿಗೆ ಒಪ್ಪಿಸಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಯಾಣಿಕರು ತೇಜಸ್ ಎಕ್ಸ್ ಪ್ರೆಸ್ ರೈಲಿನಲ್ಲಿನ ಪ್ರಯಾಣಕ್ಕಾಗಿ 15 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಬಹುದಾಗಿದೆ ಎಂದು ಹೇಳಿದೆ.

ತೇಜಸ್ ಎಕ್ಸ್ ಪ್ರೆಸ್ ನಲ್ಲಿ ವಿಮಾನ ಮಾದರಿ ಸೌಲಭ್ಯ!

Advertisement

ದೆಹಲಿ-ಲಕ್ನೋ ಮಾರ್ಗದ ನಡುವೆ ಸಂಚರಿಸುವ ತೇಜಸ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ವಿಮಾನಯಾನದ ಮಾದರಿಯಲ್ಲಿ ಸೌಲಭ್ಯ ಲಭ್ಯವಾಗಲಿದೆಯಂತೆ. ಆರಂಭಿಕವಾಗಿ ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿ ವ್ಯವಸ್ಥೆ ಲಭ್ಯವಾಗಲಿದೆ. ಇದು ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿ ಮಾದರಿಯಲ್ಲಿಯೇ ಸುಖಕರ ಮತ್ತು ಸೌಲಭ್ಯಯುತವಾಗಿರಲಿದೆ ಎಂದು ಹೇಳಿದೆ.

ವಿಶ್ರಾಂತಿ ಕೊಠಡಿಯಲ್ಲಿ ಪ್ರಯಾಣಿಕರು ವ್ಯವಹಾರ ಸಂಬಂಧಿ ಮೀಟಿಂಗ್ ಅನ್ನು ಕೂಡಾ ನಡೆಸಬಹುದಾಗಿದೆಯಂತೆ!

ಅಷ್ಟೇ ಅಲ್ಲ ಐಆರ್ ಸಿಟಿಸಿ ವಿಮಾನದಲ್ಲಿ ಗಗನಸಖಿಯರು ಇರುವಂತೆ ಟ್ರೈನ್ ಹೋಸ್ಟೆಸ್(ಸಖಿಯರು) ಮೂಲಕ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.

ಖಾಸಗಿಯವರ ನಿರ್ವಹಣೆಯಾದರು ಕೂಡಾ ಭಾರತೀಯ ರೈಲ್ವೆ ಟ್ರೈನ್ ಡ್ರೈವರ್, ಗಾರ್ಡ್, ಆರ್ ಪಿಎಫ್ ಅನ್ನು ತೇಜಸ್ ಎಕ್ಸ್ ಪ್ರೆಸ್ ರೈಲಿಗೆ ಒದಗಿಸಲಿದೆ. ತೇಜಸ್ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ನೀಡುವ ಸಿಬ್ಬಂದಿ, ಹೌಸ್ ಕೀಪಿಂಗ್ ಮತ್ತು ಕೆಟರಿಂಗ್ ಸೇವೆಯನ್ನು ಐಆರ್ ಸಿಟಿಸಿ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next