ಗಾಂಧಿನಗರ: ಭಾರತದ ಮೊದಲ ಸೆಮಿಕಂಡಕ್ಟರ್ ಚಿಪ್ ಉತ್ಪಾದನಾ ಘಟಕವನ್ನು ಗುಜರಾತ್‌ನಲ್ಲಿ ನಿರ್ಮಿಸಲು “ವೇದಾಂತ’ ಸಂಸ್ಥೆ ಸಿದ್ಧವಾಗಿದೆ. ಅದಕ್ಕೆಂದು ತೈವಾನ್ ಮೂಲದ ಫಾಕ್ಸ್‌ಕಾನ್ ಸಂಸ್ಥೆಯೊಂದಿಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದ್ದು, 1.54 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಸಜ್ಜಾಗಿದೆ.
ಅಹಮದಾಬಾದ್‌ನಲ್ಲಿ ಸುಮಾರು 1000 ಎಕರೆ ಜಾಗದಲ್ಲಿ ಈ ಘಟಕ ಸ್ಥಾಪನೆಯಾಗಲಿದ್ದು, ಅದರಲ್ಲಿ ಡಿಸ್ಪೆ ಹಬ್ ಘಟಕ, ಸೆಮಿಕಂಡಕ್ಟರ್ ಜೋಡಣೆ ಮತ್ತು ಪರೀಕ್ಷಾ ಘಟಕಗಳೂ ಇರಲಿವೆ. “ಈ ಘಟಕವು ಇನ್ನು ಎರಡು ವರ್ಷಗಳಲ್ಲಿ ಸಿದ್ಧವಾಗಲಿದೆ.
ಇದರಿಂದ ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ವೇದಾಂತ ಸಂಸ್ಥೆ ಮುಖ್ಯಸ್ಥ ಅನಿಲ್ ಅಗರ್ವಾಲ್ ತಿಳಿಸಿದ್ದಾರೆ. ಈ ಘಟಕಕ್ಕೆ ವೇದಾಂತ ಹಣ ಹೂಡಿಕೆ ಮಾಡಿದ್ದರೆ, ಫಾಕ್ಸ್‌ಕಾನ್ ಸಂಸ್ಥೆ ತಂತ್ರಜ್ಞಾನ ಹೂಡಿಕೆ ಮಾಡಲಿದೆ.
ಕರ್ನಾಟಕದಲ್ಲೂ ಘಟಕ:
ಭಾರತದಲ್ಲಿ ಸೆಮಿಕಂಡಕ್ಟರ್‌ಗೆ ಬೇಡಿಕೆ ಹೆಚ್ಚಿದೆ. 2021ರಲ್ಲಿ 27.2 ಶತಕೋಟಿ ಡಾಲರ್ ಮೌಲ್ಯದ ಸೆಮಿಕಂಡಕ್ಟರ್ ಅನ್ನು ಭಾರತ ಆಮದು ಮಾಡಿಕೊಂಡಿದೆ. ಇದು 2026ರ ವೇಳೆಗೆ 64 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ.
ಈ ಹಿನ್ನೆಲೆ ವಿದೇಶಿ ಸಂಸ್ಥೆಗಳಾದ ಐಎಸ್‌ಎಂಎಸ್ ಅಂತಾರಾಷ್ಟ್ರೀಯ ಒಕ್ಕೂಟ ಹಾಗೂ ಐಜಿಎಸ್‌ಎಸ್ ವೆಂಚರ್ಸ್ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸೆಮಿಕಂಡಕ್ಟರ್ ಘಟಕ ನಿರ್ಮಿಸುವುದಾಗಿ ಘೋಷಿಸಿವೆ. ಆದರೆ ಭಾರತ ಮೂಲದ ಸಂಸ್ಥೆ ಸೆಮಿಕಂಡಕ್ಟರ್ ತಯಾರಿಗೆ ಮುಂದಾಗುತ್ತಿರುವುದು ಇದೇ ಮೊದಲು.