Advertisement

ಜು. 31ರೊಳಗೆ ಎಲ್ಲಾ ಹೆದ್ದಾರಿಗಳು ಜಿಐಎಸ್‌ ವ್ಯಾಪ್ತಿಗೆ

12:45 AM Jun 14, 2022 | Team Udayavani |

ಗೂಗಲ್‌ ಮ್ಯಾಪ್‌ ಮಾದರಿಯ, ಭಾರತದ್ದೇ ಆದ ಪ್ರತ್ಯೇಕ ಜಿಯೋಗ್ರಾಫಿಕ್‌ ಇನ್ಫರ್ಮೇಷನ್ ಸಿಸ್ಟಂ  (ಜಿಐಎಸ್‌) ವ್ಯವಸ್ಥೆಯ ವ್ಯಾಪ್ತಿಗೆ ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಸೇರಿಸುವ ಕಾರ್ಯ ಬಹುತೇಕ ಮುಗಿದಿದೆ. ಜು. 31ರೊಳಗೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಜಿಐಎಸ್‌ ವ್ಯಾಪ್ತಿಗೆ ತರುವಂತೆ ಸೂಚಿಸಲಾಗಿದೆ.

Advertisement

ಶೇ. 92ರಷ್ಟು ಕೆಲಸ ಪೂರ್ಣ
2021ರ ನವೆಂಬರ್‌ವರೆಗಿನ ದತ್ತಾಂಶದ ಪ್ರಕಾರ, ದೇಶದಲ್ಲಿ 1.41 ಲಕ್ಷ ಕಿ.ಮೀ. ವ್ಯಾಪ್ತಿಯಷ್ಟು ರಾಷ್ಟ್ರೀಯ ಹೆದ್ದಾರಿಗಳಿವೆ. ಇಲ್ಲಿಯವರೆಗೆ, 1.30 ಲಕ್ಷ ಕಿ.ಮೀ. ವ್ಯಾಪ್ತಿಯ (ಶೇ. 92.1ರಷ್ಟು) ರಾ. ಹೆದ್ದಾರಿಗಳನ್ನು ಜಿಐಎಸ್‌ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಇನ್ನುಳಿದ, 11 ಕಿ.ಮೀ. ಹೆದ್ದಾರಿಯನ್ನು ಇಂಚಿಂಚೂ ಬಿಡದೆ ಜಿಐಎಸ್‌ ವ್ಯಾಪ್ತಿಯಲ್ಲಿ ಸೇರಿಸಬೇಕಿದೆ.

ಅಪ್‌ಡೇಟ್‌ಗೆ ಚಾಲನೆ
ಸದ್ಯಕ್ಕೆ 1.30 ಲಕ್ಷ ಕಿ.ಮೀ. ವ್ಯಾಪ್ತಿಯಷ್ಟು ರಾ. ಹೆದ್ದಾರಿಗಳನ್ನು ಜಿಐಎಸ್‌ ವ್ಯಾಪ್ತಿಯೊಳಗೆ ತರಲಾಗಿದೆ. ಆದರೆ, ಈ ಮಾಹಿತಿಯನ್ನು ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಅಪ್‌ಡೇಟ್‌ ಮಾಡಬೇಕಿದೆ. ಇದಕ್ಕಾಗಿ, ಗುಜರಾತ್‌ನ ಗಾಂಧಿ ನಗರದ ಭಾಸ್ಕರಾಚಾರ್ಯ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಫಾರ್‌ ಸ್ಪೇಸ್‌ ಅಪ್ಲಿಕೇಶನ್‌ ಆ್ಯಂಡ್‌ ಜಿಯೋ- ಇನ್ಫಾರ್ಮೇಟಿಕ್ಸ್‌ (ಬಿಐಎಸ್‌ಎಜಿ- ಎನ್‌) ಸಂಸ್ಥೆಗಳು ಶ್ರಮಿಸುತ್ತಿವೆ. ಈ ಹೆದ್ದಾರಿಗಳ ಪಕ್ಕದಲ್ಲಿ ಇತ್ತೀಚೆಗೆ ನಿರ್ಮಾಣವಾಗಿರುವ ಕಟ್ಟಡಗಳು, ಹೆದ್ದಾರಿಗಳಲ್ಲಿ ಇತ್ತೀಚೆಗೆ ಆಗಿರುವ ಕಾಮಗಾರಿಗಳು ಇತ್ಯಾದಿಗಳನ್ನು ಅಲ್ಲಿ ಅಪ್‌ಡೇಟ್‌ ಮಾಡಲಾಗುತ್ತಿದೆ.

ಶೀಘ್ರವೇ ಆ್ಯಪ್‌ ಬಿಡುಗಡೆ
ಯೋಜನೆ ಪೂರ್ಣಗೊಂಡ ನಂತರ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು, ಹೆದ್ದಾರಿಗಳ ಅಕ್ಕಪಕ್ಕದ ಊರು, ನಗರಗಳು, ನೈಸರ್ಗಿಕವಾದ ಅಥವಾ ಮಾನವ ನಿರ್ಮಾಣಗಳು, ವ್ಯವಸ್ಥೆಗಳು ಚಿತ್ರಗಳ ರೂಪದಲ್ಲಿ ಕರಾರುವಾಕ್‌ ಆಗಿ ನೋಡಬಹುದಾಗಿದೆ. ಇದನ್ನು ನೋಡಲು ಯಾವುದೇ ಸ್ಮಾರ್ಟ್‌ ಫೋನ್‌ನಲ್ಲಿ ಬಳಸಬಹುದಾದ ಅಪ್ಲಿಕೇಶನ್‌ (ಆ್ಯಪ್‌) ಬಿಡುಗಡೆ ಮಾಡಲಾಗುತ್ತದೆ. ಅದನ್ನು ಬಳಸಿ ಜನರು ಹೆದ್ದಾರಿಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next