Advertisement

ಮುಂದಿನ 25 ವರ್ಷಗಳ ಭಾರತದ ಅಭಿವೃದ್ಧಿ ನಕ್ಷೆ ಸಿದ್ದವಾಗಿದೆ: ಅಮಿತ್ ಶಾ

01:48 PM Aug 04, 2022 | Team Udayavani |

ಬೆಂಗಳೂರು: ಭಾರತ ದೇಶವನ್ನು ಅಭಿವೃದ್ಧಿ ಪಡಿಸಲು ಅನೇಕ ಪ್ರಧಾನಿಗಳು ಒಂದಿಲ್ಲೊಂದು ರೀತಿ ಶ್ರಮ ವಹಿಸಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ ಸರ್ವಸ್ಪರ್ಶಿ ಅಭಿವೃದ್ಧಿ ಮಾಡಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಹೇಳುವಂತಿಲ್ಲ. ಸರ್ವ ಸಮುದಾಯಗಳ ಅಭಿವೃದ್ದಿ ಮಾಡಿದ್ದಾರೆ. ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಮೂಲಕ ಭಾರತದ ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದಿನ 25 ವರ್ಷಗಳ ಭಾರತದ ಅಭಿವೃದ್ಧಿ ನಕ್ಷೆ ಸಿದ್ದಪಡಿಸಿಕೊಂಡಿದ್ದೇವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.

Advertisement

ಸಂಕಲ್ಪ ಸೆ ಸಿದ್ದಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014 ಕ್ಕೆ ಮೊದಲು ಪ್ರತಿ ದಿನ ಪತ್ರಿಕೆಗಳಲ್ಲಿ ಭ್ರಷ್ಟಾಚಾರದ ಸುದ್ದಿ ಮುಖಪುಟದಲ್ಲಿ ರಾರಾಜಿಸುತ್ತಿತ್ತು. ಹಿಂದಿನ ಅವಧಿಯಲ್ಲಿ ಪ್ರಧಾನ ಮಂತ್ರಿಯನ್ನು ದೇಶದಲ್ಲಿ ಯಾರೂ ಪ್ರಧಾನಿ ಎಂದು ಪರಿಗಣಿಸಿರಲಿಲ್ಲ. ಎಲ್ಲಾ ಮಂತ್ರಿಗಳು ತಮ್ಮನ್ನು ತಾವೇ ಪ್ರಧಾನ ಮಂತ್ರಿ ಎಂದುಕೊಂಡಿದ್ದರು. ಆದರೆ ಈಗ ಪ್ರಧಾನಿಯ ಬಗ್ಗೆ ವಿಶ್ವವೇ ಮಾತನಾಡುತ್ತಿದೆ ಎಂದರು.

ಚಿಕ್ಕ ಮಕ್ಕಳಿಗೆ ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಯಬೇಕು, 75 ವರ್ಷದಲ್ಲಿ ನಮ್ಮ ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಕ್ರಾಂತಿಕಾರಿ ಅಭಿವೃದ್ಧಿಯ ಬಗ್ಗೆ ವಿಶ್ವಕ್ಕೆ ತಿಳಿಸುವ ಕೆಲಸ ಮಾಡಬೇಕು. ಮತ್ತು ಸ್ವಾತಂತ್ರ್ಯೋತ್ಸವದ ಶತಾಬ್ದಿಯ ವೇಳೆ ಭಾರತ ಮುಂಚೂಣಿ ರಾಷ್ಟ್ರವಾಗಿ ನಿಲ್ಲಬೇಕು ಎಂದು 75 ನೇ ವರ್ಷದಲ್ಲಿ ಸಂಕಲ್ಪ ಮಾಡಬೇಕು. ಇದು ‘ಅಜಾದಿ ಕಾ ಅಮೃತ್ ಮಹೋತ್ಸವ’ ಮಾಡುವ ಉದ್ದೇಶ ಎಂದು ಶಾ ಹೇಳಿದರು.

2019 ರಲ್ಲಿ ಕೋವಿಡ್ ಪರಿಣಾಮ ಲಾಕ್ ಡೌನ್ ಮಾಡಲಾಯಿತು. ವಿಶ್ವದಲ್ಲಿ ಎಲ್ಲ ರಾಷ್ಟ್ರಗಳು ಸಮಸ್ಯೆಗೆ ಸಿಲುಕಿದವು. ಪ್ರಧಾನಿ ಆರಂಭದಲ್ಲಿಯೇ ದೇಶದ ವಿಜ್ಞಾನಿಗಳನ್ನು ಕರೆದು ನಮ್ಮದೇ ಆದ ಲಸಿಕೆ ಉತ್ಪಾದನೆಗೆ ಸೂಚಿಸಿದರು. ಕೋವಿಡ್ ನಂತರ ಆರ್ಥಿಕ ವ್ಯವಸ್ಥೆ ಸುಧಾರಣೆಯಾದ ವಿಶ್ವದ ಏಕೈಕ ದೇಶ ಭಾರತ. ಉದ್ಯಮಗಳಿಗೆ ಪ್ಯಾಕೇಜ್ ಘೋಷಣೆ ಮಾಡಲಾಯಿತು. ಬಡವರಿಗೆ ಉಚಿತ ಆಹಾರ ಒದಗಿಸಲಾಯಿತು. ನಾವು ಯಾವುದೇ ದೇಶವನ್ನು ನಿಂದಿಸುವುದಿಲ್ಲ. ಅದು ಭಾರತದ ಗುಣವಲ್ಲ. ವಿಶ್ವದ ಯಾವುದೇ ರಾಷ್ಟ್ರ ಮಾಡದ ಕೆಲಸವನ್ನು ಭಾರತ ಮಾಡಿದೆ. ಅದರ ಪರಿಣಾಮವಾಗಿ ಜನರು ಮುಕ್ತವಾಗಿ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತಾಯಿತು ಎಂದು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ:ನಾವು ಹೆದರುವುದಿಲ್ಲ…ಹೋರಾಟ ಮುಂದುವರಿಯಲಿದೆ: ಇ.ಡಿ ವಿರುದ್ಧ ರಾಹುಲ್ ಗಾಂಧಿ

Advertisement

ನಾವು ಎನ್ಇಪಿ, ಆರೋಗ್ಯ ನೀತಿ, ಎಲೆಕ್ಟ್ರಾನಿಕ್ಸ್ ನೀತಿ, ಡಿಜಿಟಲ್ ಇಂಡಿಯಾ, ಉಡಾನ್, ಗ್ರೀನ್ ಇಂಡಿಯಾ,  ಸ್ವಚ್ಛ ಭಾರತ ಭಾರತ ಅಭಿಯಾನ ಮಾಡಿದೆವು. ಅದರ ಪರಿಣಾಮ ಸ್ವಸ್ಥ ಭಾರತ ನಿರ್ಮಾಣ ಮಾಡಲು ಸಾಧ್ಯವಾಯಿತು.  ಭಾರತವನ್ನು ಉತ್ಪಾದನಾ ಹಬ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಕೋವಿಡ್ ನಂತರ ಭಾರತದ ಜಿಡಿಪಿ 7.4 ಆಗಿದೆ. ವಿಶ್ವದ ಶ್ರೀಮಂತ ರಾಷ್ಟ್ರಗಳ ಜಿಡಿಪಿ ಬಿದ್ದು ಹೋಗಿದೆ. ಈಸ್ ಆಪ್ ಡೂಯಿಂಗ್ ನಲ್ಲಿ ನಾವು 143 ನೇ ಸ್ಥಾನದಿಂದ 63 ಕ್ಕೆ ಬಂದಿದ್ದೇವೆ. ಪಿಎಂ ಗತಿ ಶಕ್ತಿಯಿಂದ ಉದ್ಯಮಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ರೂಪಾಯಿ ಮೌಲ್ಯದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತಿದೆ. ಆದರೆ, ಚೀನಾ, ಯುರೋಪ್, ಜಪಾನ್ ಕರೆನ್ಸಿಗಳ ಬಗ್ಗೆಯೂ ನಾವು ಹೋಲಿಕೆ ಮಾಡಿಕೊಳ್ಳಬೇಕು ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ಪ್ರತಿ ಮನೆಗೂ ಶೌಚಾಲಯ ನೀಡಿದೆವು, ನೇರ ಬೆಮೆಪಿಟ್ ಯೋಜನೆ ಜಾರಿಗೆ ತಂದೆವು, ರೈತರ ಅಕೌಂಟ್ ಗೆ ನೇರ ಹಣ ವರ್ಗಾವಣೆ ಮಾಡಿದೆವು. ಜನರು ನಿತ್ಯ ಜೀವನದ ಸಮಸ್ಯೆಯಿಂದ ಹೊರ ಬರುವಂತೆ ಮಾಡಿದೆವು. 60 ಕೋಟಿ ಜನರು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಆದರೆ ಪುಸ್ತಕ ಓದಿ ಅರ್ಥಶಾಸ್ತ್ರ ಹೇಳಬೇಡಿ, ವಾಸ್ತವ ನೋಡಿ ಅರ್ಥಶಾಸ್ತ್ರ ಹೇಳಬೇಕು. ಪ್ರತಿ ಮನೆಗೆ ನೀರು ಬಂದರೆ, ವಿದ್ಯುತ್ ಬಂದರೆ ಜಿಡಿಪಿ ಅಭಿವೃದ್ಧಿಯಾಗುವುದಿಲ್ಲವೆ? ಅದನ್ನು ಪುಸ್ತಕದಲ್ಲಿ ಬರೆದಿಲ್ಲ ಎಂದು ಚಿಂತಿಸಬೇಡಿ, ನಾವು ಜಿಡಿಪಿಯನ್ನು ಸುಸ್ಥಿತಿಯಲ್ಲಿ ಇಟ್ಟಿದ್ದೇವೆ ಎಂದು ಶಾ ವಿಪಕ್ಷಗಳ ಟೀಕೆಗೆ ಉತ್ತರ ನೀಡಿದರು.

ಉದ್ಯಮಗಳು ತಮ್ಮ ಸ್ಕೇಲ್ ಬದಲಾಯಿಸಬೇಕಿದೆ. ಆರ್ ಆಂಡ್ ಡಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ಸ್ಟಾರ್ಟ್ ಅಪ್ ಗಳು ಮತ್ತು ಉದ್ಯಮಗಳ ನಡುವೆ ಜೋಡಣೆ ಮಾಡಿ ಅಭಿವೃದ್ದಿಯಾಗಬೇಕು. ಉದ್ಯಮಗಳು ಕಚ್ಚಾ ವಸ್ತುವಿನಿಂದ ಹಿಡಿದು ಉತ್ಪಾದನೆಯಾದ ವಸ್ತುವನ್ನು ರಫ್ತು ಮಾಡುವವರೆಗೂ ಎಲ್ಲವೂ ಆತ್ಮ ನಿರ್ಭರವಾಗಬೇಕು. ಉದ್ಯಮ ಪ್ರತ್ಯೇಕವಾಗಿ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ದೇಶದ ಜನರ ಜೊತೆಗೆ ಅಭಿವೃದ್ಧಿ ಮಾಡುವುದು ನಮ್ಮ ಉದ್ದೇಶವಾಗಿದೆ. ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಸಹಕಾರ ಇರಲಿ ಎಂದು ಅಮಿತ್ ಶಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next