Advertisement

ಕಾಮನ್‌ವೆಲ್ತ್ ಗೇಮ್ಸ್ ಪದಕ ಸಾಧಕರೊಂದಿಗೆ ಪ್ರಧಾನಿ ಮೋದಿ ಭೇಟಿ

09:01 PM Aug 13, 2022 | Team Udayavani |

ನವದೆಹಲಿ: ಇತ್ತೀಚೆಗೆ ಮುಗಿದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಅಮೋಘ ಪ್ರದರ್ಶನವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕ್ರೀಡೆಯ ಸುವರ್ಣಯುಗಕ್ಕೆ ಬಾಗಿಲು ತಟ್ಟುತ್ತಿದೆ ಎಂದು ಹೇಳಿದ್ದಾರೆ.

Advertisement

ಗೇಮ್ಸ್‌ನಲ್ಲಿ ಒಟ್ಟಾರೆ 61 ಪದಕ ಗೆದ್ದ ಭಾರತೀಯ ಆಟಗಾರರನ್ನು ಮೋದಿ ಶನಿವಾರ ತಮ್ಮ ನಿವಾಸದಲ್ಲಿ ಸ್ವಾಗತಿಸಿ, ಸನ್ಮಾನಿಸಿದರು. ಗೇಮ್ಸ್‌ನಲ್ಲಿ ಭಾರತೀಯ ಆಟಗಾರರು ಪ್ರತಿಯೊಂದು ಸ್ಪರ್ಧೆಯಲ್ಲೂ ಅದ್ಭುತ ನಿರ್ವಹಣೆ ನೀಡಿದ್ದರು.

22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದರು.ಕೇವಲ ಪದಕಗಳ ಸಂಖ್ಯೆಯಿಂದ ಆಟಗಾರರು ನೀಡಿದ ಪ್ರದರ್ಶನದ ನೈಜ ಮೌಲ್ಯಮಾಪನವನ್ನು ಮಾಡಲು ಸಾಧ್ಯವಿಲ್ಲ. ನಮ್ಮ ಕ್ರೀಡಾಪಟುಗಳು ಪ್ರತಿಯೊಂದು ಸ್ಪರ್ಧೆಯಲ್ಲೂ ತೀವ್ರ ಪೈಪೋಟಿಯ ಹೋರಾಟ ನೀಡಿದ್ದರು. ಸ್ವಲ್ಪದರಲ್ಲಿ ನಾವು ಸೋತಿರಬಹುದು. ಆದರೆ ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಉತ್ಸಾಹದಿಂದ ಸ್ಪರ್ಧೆ ಗೆಲ್ಲುವ ವಿಶ್ವಾಸವಿದೆ ಎಂದು ಮೋದಿ ಆಟಗಾರರನ್ನು ಉದ್ದೇಶಿಸಿ ಹೇಳಿದರು.

ಝರೀನ್‌ ಬಾಕ್ಸಿಂಗ್‌ ಗ್ಲೌಸ್‌ಗೆ ಮೋದಿ ಸಹಿ: ವನಿತೆಯರ 50 ಕೆ.ಜಿ. ಲೈಟ್‌ಫ್ಲೈವೇಟ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಮಾತನಾಡಿದ್ದ ನಿಖತ್‌ ಝರೀನ್‌ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಉತ್ಸುಕಳಾಗಿದ್ದೇನೆ. ಆ ವೇಳೆ ನನ್ನ ಬಾಕ್ಸಿಂಗ್‌ ಗ್ಲೌಸ್‌ ಮೇಲೆ ಅವರ ಹಸ್ತಾಕ್ಷರ ತೆಗೆದುಕೊಳ್ಳುತ್ತೆನೆ ಎಂದು ಹೇಳಿದ್ದರು. ಶನಿವಾರ ಅವರ ಬಯಕೆ ಈಡೇರಿತು.-

ಇದು ಕೇವಲ ಆರಂಭ ಅಲ್ಲ ಮತ್ತು ನಾವು ಇಷ್ಟಕ್ಕೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಭಾರತೀಯ ಕ್ರೀಡೆಯ ಸುವರ್ಣ ಅವಧಿಯು ಬಾಗಿಲು ತಟ್ಟುತ್ತಿದೆ. ಹೀಗಾಗಿ ಜಗತ್ತಿನಲ್ಲಿಯೇ ಅತ್ಯುತ್ತಮವಾದ, ವೈವಿಧ್ಯಮಯ ಮತ್ತು ಕ್ರಿಯಾತ್ಮಕವಾಗಿರುವ ಕ್ರೀಡಾ ವ್ಯವಸ್ಥೆಯನ್ನು ನಮ್ಮ ಕ್ರೀಡಾಪಟುಗಳಿಗೆ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯಾವುದೇ ಪ್ರತಿಭೆಯನ್ನು ಬಿಟ್ಟುಬಿಡಬಾರದು ಏಕೆಂದರೆ ಅವರೆಲ್ಲರೂ ನಮ್ಮ ಆಸ್ತಿ ಎಂದ ಅವರು ಭಾರತವು ಬ್ಯಾಡ್ಮಿಂಟನ್‌, ಕುಸ್ತಿ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಮೇಲುಗೈ ಸಾಧಿಸಿದೆ. ಆ್ಯತ್ಲೆಟಿಕ್ಸ್‌, ಜೂಡೋ ಮತ್ತು ಲಾನ್‌ ಬೌಲ್‌ನಲ್ಲಿ ಕೂಡ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಲಾನ್‌ ಬೌಲ್ಸ್‌ನಲ್ಲಿ ಭಾರತೀಯರು ಮೊದಲ ಪದಕವನ್ನು ಗೆದ್ದರು ಎಂದರು.

Advertisement

ಈ ಬಾರಿ ನಾವು ನಾಲ್ಕು ಹೊಸ ಕ್ರೀಡೆಗಳಲ್ಲಿ ಪದಕಗಳನ್ನು ಗೆದ್ದಿದ್ದೇವೆ, ನಮ್ಮ ಪ್ರದರ್ಶನವು ಅದ್ಭುತವಾಗಿದೆ. ಈ ಪ್ರದರ್ಶನವು ಹೊಸ ಕ್ರೀಡೆಗಳಲ್ಲಿ ಯುವಕರ ಆಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ. ನಾವು ಹೊಸ ಕ್ರೀಡೆಗಳಲ್ಲಿ ನಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಬೇಕು ಎಂದು ಮೋದಿ ತಿಳಿಸಿದರು. ಇದೇ ಮೊದಲ ಬಾರಿ ಆಡಲಾದ ವನಿತಾ ಕ್ರಿಕೆಟ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಜಯಿಸಿದೆ.

ಚೆನ್ನೈಯಲ್ಲಿ ನಡೆದ ಚೆಸ್‌ ಒಲಿಂಪಿಯಾಡ್‌ನ‌ಲ್ಲಿ ಪದಕ ಗೆದ್ದ ಭಾರತೀಯ ಚೆಸ್‌ ಆಟಗಾರರನ್ನು ಕೂಡ ಇದೇ ಸಂದರ್ಭ ಮೋದಿ ಅವರು ಅಭಿನಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next