ಮಣಿಪಾಲ: ಭಾರತದಲ್ಲಿ ಅತ್ಯಾಧುನಿಕವಾದ ಮತ್ತು ಆತ್ಯಾಕರ್ಷಕವಾದ ಹಲವು ರಸ್ತೆಗಳು ವರ್ಷ ಪೂರ್ತಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ರಸ್ತೆಗಳು ಮೂಲ ಅವಶ್ಯಕತೆ ಅಥವ ಮೂಲ ಸೌಕರ್ಯಗಳಲ್ಲಿ ಒಂದಾಗಿದ್ದರೂ ಅವುಗಳು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಣ್ಮನ ಸೆಳೆಯುವ ಅದೆಷ್ಟೋ ಹೆದ್ದಾರಿಗಳು ಇದ್ದು, ಪ್ರಯಾಣಿಕರು ಒಂದು ಕ್ಷಣ ವಾಹನ ನಿಲ್ಲಿಸಿ ವಿರಾಮ ಪಡೆಯುವಂತೆ ಪ್ರೇರೇಪಿಸುತ್ತದೆ. ಕೆಲವು ರಸ್ತೆಗಳಲ್ಲಿ ನೀವು ಪ್ರಯಾಣಿಸುತ್ತಿರಬೇಕಾದರೆ ಓ! ಇಷ್ಟು ಬೇಗ ತಲುಪಿತ ಎಂಬ ಅನುಭವ ನಿಮಗಾಗುತ್ತದೆ. ನೂರಾರು ಕಿ.ಮೀ. ಅಂತರದ ಪ್ರಯಾಣ ಕೆಲವೇ ನಿಮಿಷಗಳ ಪ್ರಯಾಣದಂತೆ ನಿಮಗೆ ಭಾಸವಾಗುತ್ತದೆ. ಇಲ್ಲಿ ಅಂತಹ ಆಕರ್ಷಕ ರಸ್ತೆಗಳನ್ನು ಕೊಡಲಾಗಿದೆ.
- ಮುಂಬೈ- ಪುಣೆ
ಇದು ಮುಂಬೈ ಪುಣೆ ಮಧ್ಯದ ಎಕ್ಸ್‌ಪ್ರೆಸ್‌ವೇ. ಆರು ಪಥದ ರಸ್ತೆ ಇದಾಗಿದ್ದು, 2002ರಲ್ಲಿ ನಿರ್ಮಾಣವಾಗಿದೆ. ಸುಮಾರು 93 ಕಿ.ಮೀ. ಇರುವ ಈ ರಸ್ತೆ ಸುತ್ತಲೂ ಹಚ್ಚ ಹಸುರಿನ ಬೆಟ್ಟಗಳನ್ನು ಹೊಂದಿದೆ. ಇದು ಹೈ ಸ್ಪೀಡ್ ರಸ್ತೆಯೂ ಹೌದು.
- ಮನಾಲಿ-ಲೇಹ್
ಮನಾಲಿ ಭಾರತ ಅತೀ ಸುಂದರ ಪ್ರವಾಸಿ ತಾಣಗಳ ಪೈಕಿ ಮೊದಲನೆಯದು. ಇದು ಸಮುದ್ರ ಮಟ್ಟದಿಂದ 3-4 ಕಿ.ಮೀ. ಎತ್ತರದಲ್ಲಿದೆ. ಮನಾಲಿ ಲೇಹ್ ನಡುವೆ 479 ಕಿ.ಮೀ. ಅಂತರದ ಈ ರಸ್ತೆ ವರ್ಷದಲ್ಲಿ 5 ತಿಂಗಳು ಮಾತ್ರ ಸಂಚಾರಕ್ಕೆ ಲಭ್ಯವಾಗಿದೆಯಷ್ಟೇ.
- ವಿಶಾಖಪಟ್ಟಣ-ಅರಕು ಕಣಿವೆ
ಆಂಧ್ರಪ್ರದೇಶದ ಈ ವಿಶಾಖ ಪಟ್ಟಣ ಮತ್ತು ಅರಕು ಕಣಿವೆ ಸಂಪರ್ಕಿಸುವ ರಸ್ತೆ ಉತ್ತಮ ಪ್ರಯಾಣ ಅನುಭವನ್ನು ನೀಡುತ್ತದೆ. ಸುಮಾರು 116 ಕಿ.ಮೀ. ಅಂತರ ಇರುವ ಈ ರಸ್ತೆ ಶಾಂತ ಪರಿಸರಕ್ಕೆ ಹೆಸರಾಗಿದೆ. ಅಕ್ಟೋಬರ್‌ನಿಂದ ಮಾರ್ಚ್ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.
- ಶಿಮ್ಲಾ-ಮನಾಲಿ
ತಂಪು ತಂಪಾದ ಹಿತ ಅನುಭವ ಕೊಡುವ ಪ್ರಯಾಣ ಶಿಮ್ಲಾದಿಂದ ಮನಾಲಿ ಕಡೆಗೆ ಪ್ರಯಾಣಿಸುವಾಗ ದೊರೆಯುತ್ತದೆ. ಸುಮಾರು 250 ಕಿ.ಮೀ. ಪ್ರಯಾಣದ ದೋರ ಹೊಂದಿರುವ ಈ ರಸ್ತೆ ಯನ್ನು ಅತ್ಯುತ್ತಮವಾಗಿ ಸಿದ್ದಪಡಿಸಲಾಗಿದೆ. ಹವ್ಯಾಸಿ ಪ್ರಯಾಣಿಕರಿಗೆ ಈ ರಸ್ತೆ ಅತ್ಯುತ್ತಮ ಅನುಭವವನ್ನು ಉಣಬಡಿಸುತ್ತದೆ.
- ಚೆನ್ನೈ-ಪಾಂಡಿಚೇರಿ
ಪೂರ್ವ ಕರಾವಳಿ ರಸ್ತೆ ಎಂದು ಕರೆಯಲ್ಪಡುವ ಈ ರಸ್ತೆ ವಿಶ್ವಸಂಸ್ಥೆಯ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಜಾಗ ಪಡೆದಿರುವ ಮಹಾಬಲಿಪುರದ ಮೂಲಕ ಹಾದುಹೋಗುತ್ತದೆ. ಈ ರಸ್ತೆಯ ನಡುವೆ ಇಂತಹ ಹಲವು ತಾಣಗಳು ಸಿಗುತ್ತವೆ.
- ಗುವಾಟಿ-ತವಾಂಗ್
ಈಶಾನ್ಯ ಭಾರತದ ಈ ನಗರಗಳನ್ನು ಸಂಧಿಸುವ ರಸ್ತೆ 250 ಕಿ.ಮೀ. ದೂರವನ್ನು ಹೊಂದಿದೆ. ಈ ರಸ್ತೆ ಕ್ರೇಜಿ ಡ್ರೈವಿಂಗ್ ಗೆ ಒಗ್ಗಿಕೊಳ್ಳುವಂತದ್ದು. ಹಲವು ಬೆಟ್ಟ ಮತ್ತು ಗುಡ್ಡಗಳಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ.
- ಪುರಿ-ಕೊನಾರ್ಕ್
ಒಡಿಶಾದ ಪುರಿ ಮತ್ತು ಕೊನಾಕ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 203 ಅತ್ಯುನ್ನತವಾಗಿದೆ. ಬಹುತೇಕ ಸಮತಟ್ಟಿನ ರಸ್ತೆ ಇದಾಗಿದ್ದು, 36 ಕಿ.ಮೀ ಅಷ್ಟೇ ದೂರ ಇದೆ. ಈ ಎರಡು ನಗರಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಪ್ರಯಾಣದ ಅವಧಿ ಕಡಿಮೆ ಇದ್ದರೂ ಒಳ್ಳೆಯ ಅನುಭವನ್ನು ನೀಡುತ್ತದೆ. ಇಲ್ಲಿ ನೀವು ತೆರಳಿದ್ದೇ ಆದರೆ ನಿಮ್ಮ ಕ್ಯಾಮರಾದ ಬ್ಯಾಟರಿ ಮುಗಿಯುವುದಂತೂ ಸುಳ್ಳಲ್ಲ.