Advertisement
ಬೆಳ್ತಂಗಡಿ: ಶನಿವಾರ ಮುಂಜಾನೆ 5.30ಕ್ಕೆ ಹಾಸಿಗೆ ಬಿಟ್ಟೇಳುತ್ತಿದ್ದಂತೆ ಸೈರನ್ ಮೊಳಗಿತ್ತು. ಮೂರು ನಿಮಿಷದಲ್ಲಿ ಬಾಂಬ್ ಗಳು ಸ್ಫೋಟಿಸಿದ್ದವು ಎಂದು ಮರೋಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸಕ್ತ ಹರ್ಜಿಲಿಯಾದಲ್ಲಿ ಉದ್ಯೋಗದಲ್ಲಿರುವ ಎಂ.ಎಸ್. ಪೂಜಾರಿ ಉದಯವಾಣಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
Related Articles
Advertisement
ಮೂಲತಃ ಉಡುಪಿಯ ಕೊರಂಗ್ರಪಾಡಿ ನಿವಾಸಿಯಾಗಿರುವ ಅವರು ಮೇಯಲ್ಲಿ ಉಡುಪಿಗೆ ಬಂದು ಹೋಗಿದ್ದರು. ಯುದ್ಧದ ಭೀಕರತೆ ಇರುವುದು ಲೆಬಾನನ್‌ನ ಉತ್ತರ ಭಾಗದಲ್ಲಿ. ನಾವಿರುವುದು ದಕ್ಷಿಣ ಭಾಗದಲ್ಲಿ. ಇಲ್ಲಿ ಇದುವರೆಗೆ ದೊಡ್ಡ ಮಟ್ಟದ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಒಂದೆರಡು ಬಾರಿ ಸೈರನ್ ಮೊಳಗಿತ್ತು. ಆ ಸಂದರ್ಭ ದಲ್ಲಿ ನಾವು ಐರನ್ ರೂಂಗೆ ತೆರಳಿ ಸುರಕ್ಷತೆ ಕಾಪಾಡಿಕೊಂಡೆವು. ಈ ಭಾಗದಲ್ಲಿರುವ ಎಲ್ಲ ಅಂಗಡಿಗಳೂ ತೆರೆದುಕೊಂಡು ಕಾರ್ಯಾಚರಿಸು ತ್ತಿವೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದರು.
ಪರಿಸ್ಥಿತಿ ಸಹಜತೆಯತ್ತ :
ಬಂಟ್ವಾಳ: ಪ್ರಸ್ತುತ ನಾವಿರುವ ಪ್ರದೇಶ ಸಹಜ ಸ್ಥಿತಿಗೆ ಬಂದಿದ್ದು, ಬಸ್, ವಾಹನಗಳ ಓಡಾಟ ಆರಂಭಗೊಂಡಿದೆ. ಬುಧವಾರ ಯಾವುದೇ ಸೈರನ್ ಸದ್ದು ಕೇಳದೇ ಇದ್ದು, ಜನರು ಕೂಡ ಕೆಲಸಕ್ಕೆ ಹೋಗಲು ಆರಂಭಿಸಿದ್ದಾರೆ ಎಂದು ಇಸ್ರೇಲ್‌ನ ಹರ್ಜಿಲಿಯಾದಲ್ಲಿ ನೆಲೆಸಿರುವ ನಾರಾವಿಯ ಸತೀಶ್ ಕೋಟ್ಯಾನ್ ತಿಳಿಸಿದ್ದಾರೆ.
ನಾವು ನಾರಾವಿಯವರು ನಾಲ್ವರು, ಮಂಗಳೂರಿನ ಒಬ್ಬರು, ಮುಂಬಯಿಯ ಒಬ್ಬರು, ಮೆಲ್ಕಾರಿನ ಒಬ್ಬರು ಸೇರಿ ಒಟ್ಟು 7 ಮಂದಿ ಜತೆಗಿದ್ದೇವೆ. ಸದ್ಯಕ್ಕೆ ಶಾಲೆಗಳು, ಕಿಂಡರ್‌ಗಾರ್ಡನ್‌ಗಳು ಮುಚ್ಚಿವೆ. ಗಡಿ ಭಾಗದಲ್ಲಿ ಈಗಲೂ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದರು.
ವಿಮಾನ ಸೇವೆ ಆರಂಭವಾದರೆ ತವರಿಗೆ ವಾಪಸ್:
ಮೂಲ್ಕಿ: ಇಸ್ರೇಲ್ ದೇಶದಲ್ಲಿ ಮೂಲ್ಕಿ ನಗರದ 8 ಮಂದಿ ಉದ್ಯೋಗ ನಿಮಿತ್ತ ವಾಸ ಇದ್ದು ಅವರಲ್ಲಿ ತಾಯಿ – ಮಗ ಕೂಡ ಇದ್ದಾರೆ. ಅವರೆಲ್ಲರೂ ಯುದ್ಧ ನಡೆಯುತ್ತಿರುವ ಪ್ರದೇಶದಿಂದ ಬಹಳಷ್ಟು ದೂರದ ರಮಝಾದಲ್ಲಿ ಇರುವುದಾಗಿ ತಿಳಿಸಿದ್ದಾರೆ.
ನಾವು ನಮ್ಮ ಕೆಲಸಕ್ಕೆ ಎಂದಿನಂತೆಯೇ ಹೋಗುತ್ತಿದ್ದೇವೆ. ಯುದ್ಧ ನಡೆಯು ತ್ತಿರುವ ಪ್ರದೇಶ ದೂರ ಇರುವ ಕಾರಣ ನಮಗೆ ಯಾವುದೇ ತೊಂದರೆಯಾಗಿಲ್ಲ ಎಂದು ಮೂಲ್ಕಿಯ ಸುನೀತಾ ಮೊಂತೆರೋ ಉದಯವಾಣಿಗೆ ತಿಳಿಸಿದ್ದಾರೆ.
ಊರಿನ ಪೊಲೀಸರೂ ನಮ್ಮ ಸಂಪರ್ಕದಲ್ಲಿದ್ದಾರೆ. ವಿಮಾನ ಸೇವೆ ಆರಂಭಗೊಂಡ ಕೂಡಲೇ ತವರಿಗೆ ಮರಳುತ್ತೇವೆ ಎಂದು ಅವರು ತಿಳಿಸಿದ್ದಾರೆ. ಊರಿನ ಕೆಲವು ಮಂದಿ ಇಲ್ಲಿಯೇ ಆಸುಪಾಸಿನಲ್ಲಿದ್ದು ಎಲ್ಲರೂ ಕ್ಷೇಮವಾಗಿದ್ದಾರೆ ಎಂದರು.
ದ.ಕ.: 102 ಮಂದಿಯ ಮಾಹಿತಿ:
ಮಂಗಳೂರು: ಪ್ರಕ್ಷುಬ್ದಗೊಂಡಿರುವ ಇಸ್ರೇಲ್‌ನಲ್ಲಿರುವ ಕರಾವಳಿ ಯವರು ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ. ಗಡಿಭಾಗ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಸದ್ಯಕ್ಕೆ ಯಾವುದೇ ಘರ್ಷಣೆ, ಅಪಾಯಕಾರಿ ಬೆಳವಣಿಗೆ ನಡೆದಿಲ್ಲ.
ದಾಳಿ ನಡೆಸಿರುವ ಉಗ್ರ ಸಂಘಟನೆ ಹಮಾಸ್ ಹಾಗೂ ಇಸ್ರೇಲಿ ಸರಕಾರದ ಮಧ್ಯೆ ಮಾತುಕತೆ ನಡೆಯುವ ನಿರೀಕ್ಷೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಅದರ ಬಳಿಕ ಮುಂದೇನು ಎಂಬುದು ಸ್ಪಷ್ಟಗೊಳ್ಳಲಿದೆ ಎನ್ನುವುದು ಇಸ್ರೇಲ್‌ನಲ್ಲಿರುವ ಕರಾವಳಿಯವರು ನೀಡುವ ಮಾಹಿತಿ.
ಇಸ್ರೇಲಿನಲ್ಲಿರುವವರ ಮಾಹಿತಿಯನ್ನು ಜಿಲ್ಲಾಡಳಿತ ಸಂಗ್ರಹಿಸುತ್ತಿದ್ದು, ಇದುವರೆಗೆ ಸುಮಾರು 102 ಮಂದಿಯ ಮಾಹಿತಿಯನ್ನು ಕಲೆ ಹಾಕಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ| ಆನಂದ್ ಉದಯವಾಣಿಗೆ ತಿಳಿಸಿದ್ದಾರೆ.
ಉಡುಪಿ: 63 ಮಂದಿ ಮಾಹಿತಿ:
ಉಡುಪಿ: ಇಸ್ರೇಲ್‌ನಲ್ಲಿ ಜಿಲ್ಲೆಯ ಹಲವಾರು ಮಂದಿ ನೆಲೆಸಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದೆ.
ಈ ಪೈಕಿ ಬುಧವಾರ ಸಂಜೆಯವರೆಗೆ ಸುಮಾರು 63ಕ್ಕೂ ಅಧಿಕ ಮಂದಿಯ ಮನೆಯವರು ಜಿಲ್ಲಾಡಳಿತದ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಎಲ್ಲರೂ ಮನೆಯವರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಇಸ್ರೇಲ್‌ನಲ್ಲಿ ಸುರಕ್ಷಿತವಾಗಿರುವ ಬಗ್ಗೆ ಖಚಿತಪಡಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯ ವಿವರಗಳನ್ನು ರಾಜ್ಯಸರಕಾರಕ್ಕೆ ದಿನಂಪ್ರತಿ ಸಲ್ಲಿಕೆ ಮಾಡಲಾಗುತ್ತಿದೆ. ಜಿಲ್ಲೆಯ ಯಾರಾದರೂ ಇಸ್ರೇಲ್‌ನಲ್ಲಿದ್ದರೆ ಅವರ ಮಾಹಿತಿಯನ್ನು ಕಂಟ್ರೋಲ್ ರೂಂ ಸಂಖ್ಯೆ: 1077 ಹಾಗೂ 0820-2574802 ಅಥವಾ ರಾಜ್ಯ ಸರಕಾರದ ತುರ್ತು ಸಂಖ್ಯೆ: 080-22340676, 080-22253707ಗೆ ಮಾಹಿತಿ ನೀಡಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಸದ್ಯ ಯಾವುದೇ ತೊಂದರೆ ಇಲ್ಲ:
ಉಡುಪಿ: ಇಸ್ರೇಲ್‌ನಲ್ಲಿ 9 ವರ್ಷಗಳಿಂದ ನೆಲೆಸಿದ್ದೇನೆ. ಆದರೆ ಈವರೆಗೆ ಒಂದು ಬಾರಿ ಮಾತ್ರ ಬಾಂಬ್ ದಾಳಿಯನ್ನು ನೋಡಿದ್ದೆ.
ಪ್ರಸ್ತುತ ನಾವೆಲ್ಲರೂ ಕ್ಷೇಮದಿಂದಿದ್ದೇವೆ ಎನ್ನುತ್ತಾರೆ ಇಸ್ರೇಲ್‌ನ ಸೈಫೆಯಲ್ಲಿ ವಾಸವಿರುವ ಉಡುಪಿ ಡಯಾನದ ಇಂದಿರಾನಗರದ ಸಪ್ನಾ ಸ್ನೇಹಲತಾ.
ಗಡಿಯಲ್ಲಿ ಉದ್ವಿಗ್ನ ವಾತಾವರಣ ಇದೆ ಎಂಬ ಮಾಹಿತಿ ಇದೆ. ನಾವು ಇರುವ ಪ್ರದೇಶದಲ್ಲಿ ಎಲ್ಲರೂ ಸುರಕ್ಷಿತರಾಗಿದ್ದೇವೆ ಎಂದರು.
ಕೇರಳ ಹಾಗೂ ನೇಪಾಲದವರು ನನ್ನೊಂದಿಗಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಿನಬಳಕೆ ವಸ್ತುಗಳು ಸಹಿತ ಅಂಗಡಿಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ. ಆದರೆ ಅಂಗಡಿಗಳಲ್ಲಿ ಕೆಲವು ವಸ್ತುಗಳ ಬೇಗನೆ ಖಾಲಿಯಾಗುತ್ತಿವೆ. ಇಸ್ರೇಲ್ ದೇಶದವರಂತೆಯೇ ನಮ್ಮನ್ನೂ ಇಲ್ಲಿ ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಭಾರತೀಯರಿಗೆ ಯಾವುದೇ ತೊಂದರೆಯಾದ ಮಾಹಿತಿ ಲಭಿಸಿಲ್ಲ. ನಮ್ಮ ಸುರಕ್ಷೆಗೆ ಇಲ್ಲಿನ ಸರಕಾರ ವಿಶೇಷ ಒತ್ತು ನೀಡುತ್ತಿದೆ ಎಂದರು.