ಮಣಿಪಾಲ: ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ಗೆ ಭೂ ಕಾನೂನಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಕೇಂದ್ರ ಸರಕಾರ ಮಂಗಳವಾರ ಬಿಡುಗಡೆ ಮಾಡಿದೆ. ಈಗ ಯಾವುದೇ ಭಾರತೀಯರು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಭೂಮಿಯನ್ನು ಖರೀದಿಸಬಹುದು. ಈ ಕಾನೂನು ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಇಲ್ಲಿಯವರೆಗೆ, ಅಲ್ಲಿ ಭೂಮಿಯನ್ನು ಖರೀದಿಸಲು ಕಾಶ್ಮೀರದ ಪ್ರಜೆಯಾಗಬೇಕೆಂಬ ಒತ್ತಾಯವಿತ್ತು. ಈಗ ಈ ಬಾಧ್ಯತೆಯನ್ನು ಕೇಂದ್ರ ರದ್ದುಪಡಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಹೊಸ ಕಾನೂನಿನಡಿ ಕೇಂದ್ರ ಈ ಆದೇಶ ಹೊರಡಿಸಿದೆ.
ಮೊದಲು ಇದ್ದ ಕಾನೂನು ಏನು?
ಕಳೆದ ವರ್ಷ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತು ಆರ್ಟಿಕಲ್ 35-ಎ ಅನ್ನು ತೆಗೆದುಹಾಕುವ ಮೊದಲು, ಜಮ್ಮು ಮತ್ತು ಕಾಶ್ಮೀರದ ನಿವಾಸಿಯಲ್ಲದ ವ್ಯಕ್ತಿಗೆ ಸ್ಥಿರವಾದ ಆಸ್ತಿಯನ್ನು ಖರೀದಿಸಲು ಸಾಧ್ಯವಾಗಿರಲಿಲ್ಲ.
ಈಗ ಕೇಂದ್ರವು ಭೂ ಖರೀದಿಗೆ ಸಂಬಂಧಿಸಿದ ಕಾನೂನುಗಳನ್ನು ಬದಲಾಯಿಸಿದೆ. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದ ಹೊರಗಿನ ನಿವಾಸಿಯೂ ಇಲ್ಲಿ ಭೂಮಿಯನ್ನು ಖರೀದಿಸಬಹುದು. ಆದರೆ, ಕೃಷಿ ಭೂಮಿಯನ್ನು ಖರೀದಿಸಲು ಸರಕಾರ ನಿರ್ಬಂಧ ಹೇರಿದೆ. ಸಾಗುವಳಿ ಮಾಡಿದ ಭೂಮಿಯನ್ನು ಯಾವುದೇ ಕೃಷಿ ಮಾಡದ ವ್ಯಕ್ತಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದೆ. ಆದರೆ ಕೃಷಿಯೇತರ ಉದ್ದೇಶಗಳಿಗಾಗಿ ಕೃಷಿ ಭೂಮಿ ಖರೀದಿಗೆ ಅನುಮತಿಸಲು ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.
Related Articles
ಕೇಂದ್ರದ ಈ ನಿರ್ಧಾರವನ್ನು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ವಿರೋಧಿಸಿದ್ದಾರೆ. ಟ್ವೀಟ್ ಮಾಡಿರುವ ಅವರು ಜಮ್ಮು ಮತ್ತು ಕಾಶ್ಮೀರದ ಭೂ ಕಾನೂನುಗಳಲ್ಲಿ ಮಾಡಿದ ಬದಲಾವಣೆಗಳನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದಾರೆ. ಸಣ್ಣ ಭೂಮಾಲೀಕರು ತೊಂದರೆ ಅನುಭವಿಸಲಿದ್ದಾರೆ ಎಂದಿದ್ದಾರೆ.