ನವದೆಹಲಿ: ಕೊರೊನಾ ತೀವ್ರತೆ ತಗ್ಗಿದ ಬಳಿಕ ಯು.ಕೆ.ಯಲ್ಲಿ ದೇಶದ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಏರಿಕೆಯಾಗಿದೆ. ಈಗ ಭಾರತದ ವಿದ್ಯಾರ್ಥಿಗಳೇ ವೀಸಾ ಪಡೆಯುವುದರಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ.
ಚೀನ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಸೆಪ್ಟೆಂಬರ್ ಅಂತ್ಯದ ವರೆಗೆ ಯು.ಕೆ.ಸರ್ಕಾರದ ವತಿಯಿಂದ 1.3 ಲಕ್ಷ ವಿದ್ಯಾರ್ಥಿಗಳಿಗೆ ವೀಸಾ ನೀಡಲಾಗಿದೆ. 2019ರಲ್ಲಿ ಕೊರೊನಾ ಶುರುವಾಗುವ ಅವಧಿಗೆ ಹೋಲಿಕೆ ಮಾಡಿದರೆ ಭಾರಿ ಪ್ರಮಾಣದಲ್ಲಿ ಅಧಿಕವಾಗಿದೆ.
ಯು.ಕೆ. ಸರ್ಕಾರದ ಮಾಹಿತಿ ಪ್ರಕಾರ ಪ್ರಸಕ್ತ ವರ್ಷದ ಸೆಪ್ಟೆಂಬರ್ ವರೆಗೆ 4.8 ಲಕ್ಷ ಮಂದಿಗೆ ವಿದ್ಯಾರ್ಥಿ ವೀಸಾ ನೀಡಲಾಗಿದೆ. ಈ ಪೈಕಿ 1,21,731 ಮಂದಿ ಭಾರತೀಯರೇ ಆಗಿದ್ದಾರೆ. 2019ರಲ್ಲಿ 34,261 ಮಂದಿಗೆ ವೀಸಾ ನೀಡಲಾಗಿತ್ತು. ಹತ್ತು ವರ್ಷಗಳಿಂದ ಯು.ಕೆ.ವಿವಿಗಳಲ್ಲಿ ಚೀನೀ ವಿದ್ಯಾರ್ಥಿಗಳೇ ಅಧಿಕವಾಗಿದ್ದರು.
ಇದೇ ವೇಳೆ ಅಮೆರಿಕದಲ್ಲಿ ಕೂಡ ದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವೀಸಾ ನೀಡಲಾಗಿದೆ. ಪ್ರಸಕ್ತ ವರ್ಷವೇ 82 ಸಾವಿರ ಮಂದಿಗೆ ವೀಸಾ ಕೊಡಲಾಗಿದೆ. ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅಧಿಕವೆಂದು ನವದೆಹಲಿಯಲ್ಲಿ ಇರುವ ಅಮೆರಿಕದ ರಾಯಭಾರ ಕಚೇರಿ ತಿಳಿಸಿದೆ.