ವಾಷಿಂಗ್ಟನ್: ಅಮೆರಿಕದ ಸಿಯಾಟಾಲ್‌ನಲ್ಲಿ ನಡೆದ ಅಪಘಾತವೊಂದರಲ್ಲಿ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ಪೊಲೀಸ್ ವ್ಯಾನ್ ಡಿಕ್ಕಿ ಹೊಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಜಾಹ್ನವಿ ಕಂಡೂರಿ ಎಂದು ಗುರುತಿಸಲಾಗಿದ್ದು, ನಾರ್ಥ್ ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದರು. ರಸ್ತೆ ದಾಟುತ್ತಿದ್ದಾಗ ದುರ್ಘಟನೆ ನಡೆದಿದ್ದು, ತಕ್ಷಣವೇ ಜಾಹ್ನವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
ಜಾಹ್ನವಿ ಅವರ ತಾಯಿ ಶಿಕ್ಷಕಿಯಾಗಿದ್ದು, ಉನ್ನತ ವ್ಯಾಸಂಗಕ್ಕೆಂದು ಸಾಲ ಮಾಡಿ, ಮಗಳನ್ನು ವಿದೇಶಕ್ಕೆ ಕಳುಹಿಸಿದ್ದರು ಎನ್ನಲಾಗಿದ್ದು, ವಿದ್ಯಾರ್ಥಿನಿಯ ಮೃತದೇಹವನ್ನು ಭಾರತಕ್ಕೆ ವಾಪಸ್ ತರಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.